ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ಗೆ ಲಗ್ಗೆ ಇಟ್ಟ ‘ಗಜಪಡೆ’!

Published 3 ಫೆಬ್ರುವರಿ 2024, 15:54 IST
Last Updated 3 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯದಲ್ಲಿರಬೇಕಾದ ಆನೆಗಳು ಶನಿವಾರ ಬೆಳ್ಳಂಬೆಳಿಗ್ಗೆ ಲಾಲ್‌ಬಾಗ್‌ನ ಗಾಜಿನ ಮನೆಯ ಹಿಂಭಾಗದಲ್ಲಿರುವ ಹುಲ್ಲು ಹಾಸಿನ ಮೇಲೆ ಪ್ರತ್ಯಕ್ಷವಾಗಿದ್ದವು. ವಾಯುವಿಹಾರಿಗಳು ಹಾಗೂ ಪ್ರವಾಸಿಗರು ಅವುಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು...

ಆದರೆ, ಇವು ಜೀವಂತ ಆನೆಗಳಲ್ಲ. ಕಾಡಿನಲ್ಲಿ ಬೆಳೆಯುವ ಲಂಟಾನ ಕಳೆ ಗಿಡಗಳ ಕಾಂಡದಿಂದ ನಿರ್ಮಿಸಿಲಾದ 60 ಆನೆಗಳ ಪ್ರತಿಕೃತಿಗಳು.

ಯುಕೆ ಚಾರಿಟಿ ಎಲಿಫೆಂಟ್ ಫ್ಯಾಮಿಲಿ ಹಾಗೂ ದಿ ರಿಯಲ್ ಎಲಿಫೆಂಟ್ ಕಲೆಕ್ಟಿವ್ ಇನ್ ಇಂಡಿಯಾ ಸಂಸ್ಥೆಗಳ ಸಹಯೋಗದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ. ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಪ್ಪಿಸಿ, ಅವುಗಳೊಂದಿಗೆ ಸಹಬಾಳ್ವೆ ನಡೆಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.

ಗಜಪಡೆಯ ಶಿಸ್ತು, ಮರಿ ಆನೆಗಳು ಅಮ್ಮನೊಂದಿಗೆ ತೆರಳುತ್ತಿರುವ ದೃಶ್ಯ ಹಾಗೂ ಕಾಡಿನಲ್ಲಿ ಅವುಗಳ ಜೀವನಶೈಲಿ ಯಾವ ರೀತಿ ಇರುತ್ತದೆ ಎಂಬುದರ ಕುರಿತು ಪ್ರತಿಕೃತಿಗಳ ಮೂಲಕ ಅನಾವರಣಗೊಳಿಸಲಾಗಿದೆ. ಆನೆಯ ಪ್ರತಿಕೃತಿಗಳನ್ನು ಕಂಡ ಮಕ್ಕಳು ಅವುಗಳನ್ನು ಕುತೂಹಲದಿಂದ ನೋಡುವುದರ ಜೊತೆಗೆ ಸ್ಪರ್ಶಿಸುತ್ತಿದ್ದರು. ಅವುಗಳೊಂದಿಗೆ ಫೋಟೊ ತೆಗೆಸಿಕೊಂಡು ಖುಷಿಪಡುತ್ತಿದ್ದರು.

ದೂರದಿಂದ ನೋಡಿದರೆ ನಿಜವಾದ ಗಜಪಡೆಯೇ ಲಾಲ್‌ಬಾಗ್‌ಗೆ ಲಗ್ಗೆ ಇಟ್ಟಿದೆ ಎಂಬಂತೆ ಭಾಸವಾಗುತ್ತದೆ. ಲಂಟಾನ ಕಳೆಗಿಡಗಳ ಕಾಂಡದಿಂದ ಆನೆಗಳನ್ನು ಯಾವ ರೀತಿಯಾಗಿ ತಯಾರಿಸಲಾಗಿದೆ ಎಂಬುದರ ಕುರಿತು ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದರು.

‘ನೀಲಗಿರಿ ಬಯೋಸ್ಪೀಯರ್‌ ರಿಸರ್ವ್‌ ಪ್ರದೇಶ, ಮಹದೇಶ್ವರಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಸೋಲಿಗ, ಜೇನುಕುರುಬ, ಬೆಟ್ಟ ಕುರುಬ ಸೇರಿದಂತೆ ಬುಡಕಟ್ಟು ಜನಾಂಗದವರು ಲಂಟಾನ ಕಳೆಗಿಡಗಳಿಂದ 250ಕ್ಕೂ ಹೆಚ್ಚು ಆನೆಗಳನ್ನು ಸಿದ್ದಪಡಿಸಿದ್ದಾರೆ. ಈಗಾಗಲೇ 100 ಆನೆಗಳ ಪ್ರತಿಕೃತಿಗಳನ್ನು ಲಂಡನ್‌ ಬಕಿಂಗ್‌ಹ್ಯಾಮ್‌ ಅರಮನೆಗೆ ನೀಡಲಾಗಿದೆ. ಲಾಲ್‌ಬಾಗ್‌ನಲ್ಲಿ  ಮಾರ್ಚ್‌ 3ರವರೆಗೆ ಈ ಪ್ರದರ್ಶನ ನಡೆಯಲಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ಮಾಹಿತಿ ನೀಡಿದರು.

‘ಲಂಟಾನ ನಿರ್ಮೂಲನೆಗೆ ಕ್ರಮ’

‘ಆಕ್ರಮಣಕಾರಿ ಲಂಟಾನ ಕಳೆಗಿಡಗಳನ್ನು ನಿರ್ಮೂಲನೆ ಮಾಡಿ ಅರಣ್ಯ ರಕ್ಷಿಸಿ ವನ್ಯಜೀವಿಗಳ ಆವಾಸಸ್ಥಾನ ಉಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಪರಿವರ್ತನಾ ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ರಾಜೀವ್‌ಗೌಡ ಹೇಳಿದರು. ‘ಈ ನಿಟ್ಟಿನಲ್ಲಿ ಸರ್ಕಾರ ಕೆಲವು ಮಾನದಂಡಗಳನ್ನು ರೂಪಿಸಬೇಕು. ಯೋಜನಾ ಆಯೋಗದ ಮುಖ್ಯಸ್ಥನಾಗಿ ನಾನು ಏನು ಮಾಡಬಹುದು ಎಂಬುದನ್ನು ಯೋಚಿಸಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ಇದನ್ನು ಸುಗಮಗೊಳಿಸಲು ಪ್ರಯತ್ನಿಸುತ್ತೇನೆ. ಲಂಟಾನ ಕಳೆಗಿಡಗಳಿಂದ ಆನೆಗಳ ಪ್ರತಿಕೃತಿಗಳನ್ನು ತಯಾರಿಸುವುದರಿಂದ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳು ಆರ್ಥಿಕವಾಗಿ ಸಬಲರಾಗಲು ಸಹಾಯವಾಗುತ್ತಿದೆ’ ಎಂದರು.

ಲಂಟಾನ ಕಳೆ ಕಿತ್ತುಹಾಕಿ ಹುಲ್ಲುಗಾವಲುಗಳಾಗಿ ಪರಿವರ್ತಿಸಲಾಗುತ್ತಿದೆ. ಈ ಕಳೆ ಹಾವಳಿ ನಿಯಂತ್ರಿಸಲು ಹೆಚ್ಚುವರಿ ಹಣ ಅಗತ್ಯವಿದೆ.
ಸುಭಾಷ್ ಮಾಲ್ಖೇಡಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)
ಲಂಟಾನ ಕಳೆಗಿಡದ ಕಾಂಡದಿಂದ ತಯಾರಿಸಿದ ಆನೆಗಳ ಕಲಾಕೃತಿಯ ಮೇಲೆ ಮಗು ಕೂರಿಸಿ ಖುಷಿಪಟ್ಟ ಕುಟುಂಬ.
ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್
ಲಂಟಾನ ಕಳೆಗಿಡದ ಕಾಂಡದಿಂದ ತಯಾರಿಸಿದ ಆನೆಗಳ ಕಲಾಕೃತಿಯ ಮೇಲೆ ಮಗು ಕೂರಿಸಿ ಖುಷಿಪಟ್ಟ ಕುಟುಂಬ. ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್
ಲಂಟಾನ ಕಳೆಗಿಡದ ಕಾಂಡದಿಂದ ತಯಾರಿಸಿದ ಆನೆಗಳ ಕಲಾಕೃತಿಯೊಂದಿಗೆ ಯುವತಿಯರು ಸೆಲ್ಫಿ ತೆಗೆದುಕೊಂಡರು. ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್
ಲಂಟಾನ ಕಳೆಗಿಡದ ಕಾಂಡದಿಂದ ತಯಾರಿಸಿದ ಆನೆಗಳ ಕಲಾಕೃತಿಯೊಂದಿಗೆ ಯುವತಿಯರು ಸೆಲ್ಫಿ ತೆಗೆದುಕೊಂಡರು. ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT