ಬೆಂಗಳೂರು: ರಾಜಕಾಲುವೆಯ ಒತ್ತುವರಿ, ದಿಕ್ಕು ಬದಲಾವಣೆಯಿಂದ ಬಡಾವಣೆಗೆ ನೀರು ನುಗ್ಗಿ ಪರಿತಪಿಸುತ್ತಿರುವ ಸನ್‌ಸಿಟಿ ಬಡಾವಣೆ ನಿವಾಸಿಗಳು, ಮೂಲನಕ್ಷೆಯಂತೆ ರಾಜಕಾಲುವೆಗೆ ಅನುವು ಮಾಡಿಕೊಡಿ ಎಂಬ ಮನವಿಗೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಜಿಲ್ಲಾಧಿಕಾರಿಯವರೂ ನಾಲ್ಕು ವರ್ಷದಿಂದ ಸ್ಪಂದಿಸಿಲ್ಲ.
ಯಲಹಂಕದ ಆವಲಹಳ್ಳಿ ಗ್ರಾಮದಲ್ಲಿರುವ ಸನ್ ಸಿಟಿ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ರಾಜಕಾಲುವೆ ಒತ್ತುವರಿ ಹಾಗೂ ದಿಕ್ಕು ಬದಲಾವಣೆಯಾಗಿದೆ. ಇದರಿಂದ ಸನ್ ಸಿಟಿ ಬಡಾವಣೆಗೆ ಪ್ರತಿ ಬಾರಿ ಮಳೆಯ ಸಂದರ್ಭದಲ್ಲಿ ಮಳೆ ನೀರಿನ ಜೊತೆಗೆ ಮೇಲ್ಭಾಗದಲ್ಲಿರುವ ಬಡಾವಣೆಗಳ ಕಸ, ಕಲ್ಮಶವೂ ಮನೆಗಳಿಗೆ ನುಗ್ಗುತ್ತಿದೆ.
‘ಆವಲಹಳ್ಳಿಯ ಸರ್ವೆ ನಂ. 8/1, 8/5, 8/6, 6/1, 6/2ರಲ್ಲಿ ಸನ್ ಸಿಟಿಯವರು ಬಡಾವಣೆ ನಿರ್ಮಿಸಿದ್ವಾರೆ. ಈ ಸಂದರ್ಭದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಲಾಗಿದೆ. ಅಲ್ಲದೆ, ರಾಜಕಾಲುವೆ ಪಥವನ್ನು ಬದಲಿಸಲಾಗಿದೆ. ಮಳೆ ಬಂದಾಗ ನಮ್ಮ ಮನೆಗಳಿಗೆ ನೀರು ನುಗ್ಗಿದಾಗ ಈ ಒತ್ತುವರಿಯ ಸಮಸ್ಯೆ ನಮಗೆಲ್ಲ ಅರಿವಿಗೆ ಬಂತು. ಆದ್ದರಿಂದ ಮೂಲ ರಾಜಕಾಲುವೆಯನ್ನೇ ನಿರ್ಮಿಸಿಕೊಡಿ, ಎಲ್ಲ ರೀತಿಯ ಒತ್ತುವರಿ ತೆರವು
ಮಾಡಿ ಎಂದು ಮನವಿ ಮಾಡಿಕೊಂಡಿದ್ದೇವೆ. ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಲೋಕಾಯುಕ್ತ, ಬಿಎಂಟಿಎಫ್‌ಗೂ 2018ರ ಜೂನ್
ನಿಂದ ಈ ಬಗ್ಗೆ ಮನವಿ ನೀಡಿದ್ದೇವೆ. ಆದರೆ, ಯಾರೂ ಕ್ರಮ ಕೈಗೊಂಡಿಲ್ಲ’ ಎಂದು ಸನ್ ಸಿಟಿ ಬಡಾವಣೆಯ ನಿವಾಸಿಗಳು ಮಾಹಿತಿ ನೀಡಿದರು.
‘ರಾಜಕಾಲುವೆ ಒತ್ತುವರಿ ಹಾಗೂ ದಿಕ್ಕು ಬದಲಾಯಿಸಿ ಸನ್ ಸಿಟಿಯವರು ಪರ್ಯಾ
ಯವಾಗಿ ನಿರ್ಮಿಸಿರುವ ರಾಜಕಾಲುವೆ ಎತ್ತರದಲ್ಲಿದೆ. ಹೀಗಾಗಿ ಮಳೆ ನೀರು ಹಾಗೂ ಕಲುಷಿತ ನೀರು ರಾಜಕಾಲುವೆಗೆ ಹರಿಯುತ್ತಿಲ್ಲ. ಬಡಾವಣೆಯ ಮನೆಗಳಿಗೆ ನುಗ್ಗುತ್ತಿದೆ. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಅತಿಹೆಚ್ಚು ಮಳೆಯಾದಾಗ, ಇಲ್ಲಿನ ನಿವಾಸಿಗಳು ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ.
ರಾತ್ರಿ–ಹಗಲು ನಿದ್ದೆಯಿಲ್ಲದೆ ನೀರು ಹೊರಗೆ ಹಾಕುವುದೇ ಕಾಯಕವಾಗಿತ್ತು. ನೀರು ಹೊರಹಾಕಲೂ ಅದಕ್ಕೆ ಹೋಗಲು ಜಾಗವಿರಲಿಲ್ಲ’ ಎಂದು ಸ್ಥಳೀಯರಾದ ಶೋಭಾ ಮತ್ತು
ಪರಿಮಳ ಅವರು ಅಳಲು ತೋಡಿಕೊಂಡರು.
‘ಲಕ್ಷಾಂತರ ಹಣ ನೀಡಿ ನಿವೇಶನ ಪಡೆದು, ಮನೆ ಕಟ್ಟಿಕೊಂಡಿ
ದ್ದೇವೆ. ಬಡಾವಣೆ ನಿರ್ಮಿಸುವಾಗ ರಾಜಕಾಲುವೆ ದಿಕ್ಕು ಬದಲಿಸಿದರೆ ನೀರು ಹೇಗೆ ಹರಿಯುತ್ತದೆ ಎಂಬ ಬಗ್ಗೆ ಅವರಿಗೆ ಗೊತ್ತಾಗುವುದಿಲ್ಲವೆ? ಎತ್ತರದ ಪ್ರದೇಶಕ್ಕೆ ನೀರು ಹರಿಯುವುದೇ? ಇಂತಹ ಜ್ಞಾನ ಇಲ್ಲದೆ ಅದಕ್ಕೆ
ಅನುಮತಿ ನೀಡಿರುವ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿನ
ಸಮಸ್ಯೆಗೆ ನೇರ ಕಾರಣ’ ಎಂದು ಶೋಭಾ ಮತ್ತು ಪರಿಮಳ ಅವರು ಆರೋಪಿಸಿದರು.
ಲೋಕಾಯುಕ್ತಕ್ಕೂ ದೂರು..
‘ಆವಲಹಳ್ಳಿ ಗ್ರಾಮದ ಸನ್ ಸಿಟಿ ಬಡಾವಣೆಯಲ್ಲಿರುವ ಬಡಾವಣೆ ರಾಜಕಾಲುವೆ ಒತ್ತುವರಿ ಹಾಗೂ ದಿಕ್ಕು ಬದಲಾವಣೆಯಾಗಿದೆ. ಎಂ.ಎಸ್. ರಾಮಯ್ಯ ಬಡಾವಣೆಯ ಕಲುಷಿತ ನೀರು ನಮ್ಮ ಬಡಾವಣೆಗೆ ಹರಿಯುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಗ್ರಾಮ ನಕ್ಷೆಯಂತೆ ರಾಜಕಾಲುವೆಯನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಸನ್ ಸಿಟಿ ನಿವಾಸಿಗಳು 2018ರ ಸೆ.19ರಂದು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ‘ಆದರೆ, ಅವರಿಂದಲೂ ಯಾವುದೇ ರೀತಿಯ ಕ್ರಮ ಆಗಿಲ್ಲ’ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
ಆವಲಹಳ್ಳಿ ಕೆರೆ ಒತ್ತುವರಿ
‘ಆವಲಹಳ್ಳಿ ಕೆರೆ ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ. ಈ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿದ್ದರೂ ಒತ್ತುವರಿ ತೆರವು ಮಾಡಿಲ್ಲ. ಇದರ ಜೊತೆಗೆ ಗುಂಡುತೋಪು ಕೂಡ ಒತ್ತುವರಿಯಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬಿಬಿಎಂಪಿ ಹಾಗೂ ಗ್ರಾಮ ಪಂಚಾಯಿತಿ ಗಡಿಯಲ್ಲಿ ಕೆರೆ ಇರುವುದರಿಂದ ಜವಾಬ್ದಾರಿಯನ್ನು ಅಧಿಕಾರಿಗಳು ವರ್ಗಾಯಿಸುತ್ತಿದ್ದಾರೆ’ ಎಂಬುದು ಸ್ಥಳೀಯರ ದೂರು. ಆವಲಹಳ್ಳಿ ಸರ್ವೆ ನಂ.10 ಹಾಗೂ ಸಿಂಗನಾಯಕಹಳ್ಳಿ ಸರ್ವೆ ನಂ.64ರಲ್ಲಿ ಆವಲಹಳ್ಳಿ ಕೆರೆ ಒಟ್ಟು 13 ಎಕರೆ 11 ಗುಂಟೆ ಪ್ರದೇಶದಲ್ಲಿದೆ. ಇದರಲ್ಲಿ 36 ಗುಂಟೆ ಒತ್ತುವರಿಯಾಗಿದೆ ಎಂದು ಸರ್ವೆಯಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳ ಕುಮ್ಮಕ್ಕು: ಎಸ್.ಆರ್. ವಿಶ್ವನಾಥ್
‘ಕಂದಾಯ ಬಡಾವಣೆಗಳಲ್ಲಿ ರಾಜಕಾಲುವೆ, ಕೆರೆಗಳ ಒತ್ತುವರಿಯಾಗಿರುವುದು ನಿಜ. ಇದಕ್ಕೆಲ್ಲ ಅಧಿಕಾರಿಗಳ ಕುಮ್ಮಕ್ಕೇ ಕಾರಣ. ಒತ್ತುವರಿಯಾಗುತ್ತಿರುವುದನ್ನು ಕಂಡೂ ಸುಮ್ಮನಿರುತ್ತಾರೆ. ಈಗಲೇ ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ನಕ್ಷೆಯಂತೆ ರಾಜಕಾಲುವೆ ನಿರ್ಮಿಸಬೇಕು. ಆವಲಹಳ್ಳಿ ಕೆರೆ ಹಾಗೂ ಸುತ್ತಮುತ್ತಲಿನ ಕೆರೆ ಒತ್ತುವರಿ ತೆರವು ಮಾಡಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಮತ್ತೆ ಸೂಚನೆ ನೀಡಲಾಗುತ್ತದೆ’ ಯಲಹಂಕ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.