ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ– ಸರ್ಕಾರದ ನಡುವೆ ಬೀದಿದೀಪ ಜಗಳ

ಎಲ್‌ಇಡಿ ಅಳವಡಿಕೆ ಬದಲು ಹೊಸ ಕ್ರಿಯಾಯೋಜನೆಗೆ ಕಾಂಗ್ರೆಸ್ ಆಕ್ಷೇಪ
Last Updated 29 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೀದಿದೀಪ ಅಳವಡಿಕೆ ಸಂಬಂಧ ಬಿಬಿಎಂಪಿಯಲ್ಲಿ ಈ ಹಿಂದಿನ ಆಡಳಿತದ ವೇಳೆ ಕೈಗೊಂಡ ನಿರ್ಧಾರಗಳನ್ನು ರದ್ದುಪಡಿಸಿ ಹೊಸ ಕ್ರಿಯಾಯೋಜನೆ ರೂಪಿಸಲು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿದೆ. ಆದರೆ, ಈ ನಡೆ ಸರ್ಕಾರಿ ಆದೇಶದ ಉಲ್ಲಂಘನೆ ಎಂದು ಪಾಲಿಕೆಯ ಆಡಳಿತ ಪಕ್ಷ ಟೀಕಿಸಿದೆ.

ಪಾಲಿಕೆಯು ನಗರದ ಬೀದಿದೀಪ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಿದ್ದು, ಸಂಪೂರ್ಣ ಎಲ್‌ಇಡಿ ದೀಪಗಳನ್ನು ಅಳವಡಿಸಲು ತೀರ್ಮಾನಿಸಿತ್ತು. ನಗರದಲ್ಲಿ ಎಲ್ಇಡಿ ಅಳವಡಿಕೆ ಯೋಜನೆಯನ್ನು ವಿನ್ಯಾಸ ರಚನೆ, ಹಣಕಾಸು ವ್ಯವಸ್ಥೆ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಡಿಎಫ್‌ಬಿಒಟಿ) ಮಾದರಿಯಲ್ಲಿ ಜಾರಿಗೆ ತರಲು ಬಿಬಿಎಂಪಿ ಯೋಜಿಸಿತ್ತು. ಈ ಸಂಬಂಧ ಜಾಗತಿಕ ಟೆಂಡರ್‌ ಆಹ್ವಾನಿಸಿ ನಗರದ ಎಲ್ಲ 4.70 ಲಕ್ಷ ಬೀದಿದೀಪಗಳನ್ನು ಅಳವಡಿಸಲು ಗುತ್ತಿಗೆ ನೀಡಿತ್ತು. ಗುತ್ತಿಗೆ ಪಡೆದ ಸಂಸ್ಥೆಯು 10 ವರ್ಷ ಕಾಲ ಬೀದಿದೀಪಗಳ ನಿರ್ವಹಣೆ ಮಾಡಬೇಕಿತ್ತು. ಹೊಸ ಬೀದಿದೀಪ ಅಳವಡಿಕೆಗೆ 30 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಅಷ್ಟರವರೆಗೆ ಯಾವುದೇ ಹೊಸ ಬೀದಿದೀಪ ಅಳವಡಿಸುವಂತಿಲ್ಲ ಎಂದು ಮೈತ್ರಿ ಸರ್ಕಾರ ಆದೇಶ ಮಾಡಿತ್ತು.

‘ಮುಖ್ಯಮಂತ್ರಿ ನವ ನಗರೋತ್ಥಾನ’ ಅನುದಾನದ ಹೊಸ ಕ್ರಿಯಾಯೋಜನೆ ಪ್ರಕಾರ ರಾಮಮೂರ್ತಿನಗರ, ವಿಜ್ಞಾನಪುರ, ಕೆ.ಆರ್‌.ಪುರ, ಬಸವನಪುರ, ದೇವಸಂದ್ರ, ಎ.ನಾರಾಯಣಪುರ, ವಿಜ್ಞಾನನಗರ, ಎಚ್‌.ಎ.ಎಲ್‌ ವಿಮಾನನಿಲ್ದಾಣ, ವೃಷಭಾವತಿನಗರ ವಾರ್ಡ್‌ಗಳಲ್ಲಿ ಎಲ್‌ಇಡಿ ಬೀದಿದೀಪ ಅಳವಡಿಕೆಗೆ ಅವಕಾಶ ಕಲ್ಪಿಸಿದೆ.

‘ಹಳೆಯ ಯೋಜನೆ ಪ್ರಕಾರ ಎಲ್‌ಇಡಿ ದೀಪಗಳನ್ನು ಅಳವಡಿಸುವವರೆಗೆ ಹೊಸ ಬೀದಿದೀಪ ಅಳವಡಿಸುವಂತಿಲ್ಲ ಎಂಬ ಸರ್ಕಾರದ ಆದೇಶ ಜಾರಿಯಲ್ಲಿದೆ. ಆದರೆ, ಈಗಿನ ಕ್ರಿಯಾಯೋಜನೆ ಈ ಆದೇಶಕ್ಕೆ ವಿರುದ್ಧವಾಗಿದೆ. ಇನ್ನೊಂದೆಡೆ, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ವರ್ಷ ಕಳೆದರೂ ಎಲ್‌ಇಡಿ ಅಳವಡಿಕೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಈಗ ಕ್ರಿಯಾಯೋಜನೆಯಲ್ಲಿ ಮಾರ್ಪಾಡು ಮಾಡಿರುವುದರಿಂದ ಸರ್ಕಾರದ ಆದೇಶವನ್ನೇ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

‘₹ 17 ಕೋಟಿ ಉಳಿತಾಯ’

ಎಲ್‌ಇಡಿ ಬೀದಿದೀಪ ಅಳವಡಿಸುವ ಯೋಜನೆಗೆ ಬಿಬಿಎಂಪಿ ಯಾವುದೇ ಹೂಡಿಕೆ ಮಾಡುತ್ತಿಲ್ಲ. ಗುತ್ತಿಗೆ ಪಡೆದ ಕಂಪನಿ ಒಟ್ಟು ₹ 800 ಕೋಟಿ ಹೂಡಿಕೆ ಮಾಡಲಿದೆ. ಅದಕ್ಕೆ ಪ್ರತಿಯಾಗಿ 10 ವರ್ಷಗಳಲ್ಲಿ ₹ 1500 ಕೋಟಿ ವರಮಾನ ಗಳಿಸಲಿದೆ. ಎಲ್‌ಇಡಿ ಬಲ್ಬ್‌ಗಳ ಬಳಕೆಯಿಂದ ಶೇ 85ರಷ್ಟು ವಿದ್ಯುತ್‌ ಉಳಿತಾಯವಾಗ
ಲಿದೆ. ಬಿಬಿಎಂಪಿಗೆ ಪ್ರತಿ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ₹ 17 ಕೋಟಿ ಉಳಿಯಲಿದೆ. ಈ ಪೈಕಿ ₹ 13.5 ಕೋಟಿಯನ್ನು ಬಿಬಿಎಂಪಿಯು ಕಂಪನಿಗೆ ಪಾವತಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅನುಕೂಲಗಳೇನು?

* ಬೀದಿದೀಪಗಳನ್ನು 10 ವರ್ಷಗಳು ಕಂಪನಿಯೇ ನಿರ್ವಹಣೆ ಮಾಡಲಿದೆ

* ಬೀದಿದೀಪಗಳ ವಿದ್ಯುತ್‌ ಬಳಕೆಯಲ್ಲಿ ಶೇ 85ರಷ್ಟು ಉಳಿತಾಯ ಆಗಲಿದೆ

* ಬೀದಿದೀಪಗಳ ಕಂಬದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಪರಿಸರ ಮಾಲಿನ್ಯ ಸಂವೇದಕಗಳ ಅಳವಡಿಕೆಗೆ ಅವಕಾಶ

* ಪ್ರತಿ ದೀಪಕ್ಕೂ ನಿಸ್ತಂತು ಸಂವೇದಕ ಅಳವಡಿಕೆ

* ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಮೂಲಕ ಬೀದಿದೀಪಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇಡಬಹುದು

* ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸುವ ಯೋಜನೆ ಜಾರಿಯಲ್ಲಿರುವಾಗ ಸರ್ಕಾರ ಹೊಸತಾಗಿ ಕ್ರಿಯಾಯೋಜನೆ ರೂಪಿಸಿದರೆ, ಅದು ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಆಗಲಿದೆ

ಗಂಗಾಂಬಿಕೆ,ಮೇಯರ್‌

* ಈ ಹಿಂದಿನ ಆದೇಶದ ಪ್ರಕಾರ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲಾಗುತ್ತಿಲ್ಲ. ಹಾಗಾಗಿ ಅನೇಕ ಬೀದಿಗಳು ಕತ್ತಲಲ್ಲಿ ಮುಳುಗಿವೆ. ಹೊಸ ಕ್ರಿಯಾ ಯೋಜನೆಯಿಂದ ಸರ್ಕಾರದ ಯಾವುದೇ ಆದೇಶದ ಉಲ್ಲಂಘನೆ ಆಗುವುದಿಲ್ಲ

–ಎಸ್‌.ಆರ್‌.ವಿಶ್ವನಾಥ್‌,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT