ಶನಿವಾರ, ಮಾರ್ಚ್ 25, 2023
28 °C

ಹೆದ್ದಾರಿಯಲ್ಲಿ ಕರಕುಶಲ ಗ್ರಾಮಕ್ಕೆ ಲೆಹರ್ ಸಿಂಗ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೆಹಲಿ ಹಾತ್ ಮಾದರಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ‘ಕರಕುಶಲ ಗ್ರಾಮ’ ಅಭಿವೃದ್ಧಿಪಡಿಸಲು ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಸಿರೋಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಮೂರು ಸಾವಿರಕ್ಕೂ ಅಧಿಕ ಕುಶಲಕರ್ಮಿಗಳು ಮತ್ತು ಅವರು ಕುಟುಂಬದವರು ಆಟಿಕೆ ತಯಾರಿಕೆ ಉದ್ಯಮಗಳ ಮೇಲೆ ಅವಲಂಬಿತರಾಗಿದ್ದಾರೆ. ಕರಕುಶಲ ಗ್ರಾಮಗಳನ್ನು ಹೆದ್ದಾರಿಯ ಉದ್ದಕ್ಕೂ ಇರುವ ಖಾಲಿ ಜಮೀನುಗಳಲ್ಲಿ ತರಲು ಅವಕಾಶ ಇದೆ’ ಎಂದು ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬರೆದಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

‘ಬಿಡದಿ, ಚನ್ನಪಟ್ಟಣ, ರಾಮನಗರ, ಮದ್ದೂರು ಸೇರಿ ಹಲವು ಊರುಗಳಿಗೆ ಬೈಪಾಸ್ ರಸ್ತೆ ಹಾದು ಹೋಗಲಿದ್ದು, ಇದರಿಂದ ‘ಗೊಂಬೆಗಳ ನಾಡು’ ಎಂದು ಹೆಸರಾಗಿರುವ ಚನ್ನಪಟ್ಟಣದ ಕರಕುಶಲ ವಸ್ತುಗಳಿಗೆ, ಬಿಡದಿ ತಟ್ಟೆ ಇಡ್ಲಿ, ಮದ್ದೂರು ವಡೆ ಮೊದಲಾದ ಸ್ಥಳೀಯ ಪ್ರಸಿದ್ಧ ತಿನಿಸುಗಳಿಗೆ ಗ್ರಾಹಕರ ಕೊರತೆ ಎದುರಾಗಲಿದೆ. ಇವುಗಳಿಂದ ಬದುಕು ಕಟ್ಟಿಕೊಂಡಿರುವ ಸಾವಿರಾರು ಜನರಿಗೆ ಇದರಿಂದ ತೊಂದರೆ ಆಗಲಿದೆ. ಅಲ್ಲದೇ, ಆಟಿಕೆಗಳ ವೈವಿಧ್ಯಗಳು ನಶಿಸುವ ಅಪಾಯವಿದೆ’ ಎಂದಿದ್ದಾರೆ.

‘ಸ್ಥಳೀಯ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದ್ದು, ಜನಜೀವನಕ್ಕೆ ತೊಂದರೆಯಾಗಲಿದೆ. ಗ್ರಾಹಕರ ಸಂಖ್ಯೆ ಇಳಿಕೆಯಿಂದಾಗಿ ಕುಶಲಕರ್ಮಿಗಳಿಗೆ ತೊಂದರೆಯಾಗಲಿದೆ. ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಕಲೆ ಹಾಗೂ ಪರಂಪರೆಗೂ ಧಕ್ಕೆಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು