ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಡ್ಕ ರಿಪಬ್ಲಿಕ್‌ ಅನ್ನು ಸರ್ಕಾರ ಮಟ್ಟ ಹಾಕಲಿ: ಬಿ.ಕೆ. ಹರಿಪ್ರಸಾದ್

‘ವಿ.ಡಿ. ಸಾವರ್ಕರ್‌: ಏಳು ಮಿಥ್ಯೆಗಳು’ ಬಿಡುಗಡೆ ಕಾರ್ಯಕ್ರಮ
Published 18 ಫೆಬ್ರುವರಿ 2024, 23:30 IST
Last Updated 18 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಲಡ್ಕ ರಿಪಬ್ಲಿಕ್‌ ಅನ್ನು ಮಟ್ಟಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಯಲು ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಪ್ರತಿಪಾದಿಸಿದರು.

ತಡಗಳಲೆ ಸುರೇಂದ್ರ ರಾವ್ ಅನುವಾದಿಸಿದ ‘ವಿ.ಡಿ. ಸಾವರ್ಕರ್‌ ಏಳು ಮಿಥ್ಯೆಗಳು’ ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಹತ್ತು ವರ್ಷಗಳ ಹಿಂದೆ ಪ್ರವೀಣ್‌ ತೊಗಾಡಿಯಾ ನೇತೃತ್ವದಲ್ಲಿ ದೊಡ್ಡ ತ್ರಿಶೂಲಗಳನ್ನು ವಿತರಿಸಿದ್ದರು. ಅವರನ್ನು ಬಂಧಿಸಿದರೆ ದಂಗೆ ಉಂಟಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಸೇರಿದಂತೆ ಎಲ್ಲರೂ ಹೇಳಿದ್ದರು. ಅವರನ್ನು ಬಂಧಿಸಿ, ಅಜ್ಮೀರ್‌ ಸುತ್ತಮುತ್ತ ನಿಷೇಧಾಜ್ಞೆ ಹೇರಿದ ಮೇಲೆ ಯಾವ ಹಿಂಸೆಯೂ ಆಗಲಿಲ್ಲ. ತ್ರಿಶೂಲ ವಿತರಣೆ ನಿಂತೇ ಹೋಯಿತು. ರಾಜ್ಯದ ಹಿಂದುತ್ವದ ಪ್ರಯೋಗಶಾಲೆಯಾದ ಕಲ್ಲಡ್ಕ ರಿಪಬ್ಲಿಕ್‌ ಮೇಲೆ ಇಂಥದ್ದೇ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಅಂಕಣಕಾರ ಶಂಸುಲ್‌ ಇಸ್ಲಾಂ ಮಾತನಾಡಿ, ‘ಸಂಘ ಪರಿವಾರ ಎಂಬುದು ಉತ್ತಮ ಶಬ್ದ. ಅವುಗಳನ್ನು ಆರ್‌ಎಸ್‌ಎಸ್‌ ಮತ್ತು ಅದರ ಅಂಗಸಂಸ್ಥೆಗಳಿಗೆ ಬಳಸಬಾರದು. ಅವು ಅತ್ಯಾಚಾರಿ ಗ್ಯಾಂಗ್‌, ಬೆಂಕಿ ಹಚ್ಚುವ ಗ್ಯಾಂಗ್‌, ಹಿಂಸಾ ಗ್ಯಾಂಗ್‌ಗಳು’ ಎಂದು ಕಿಡಿಕಾರಿದರು.

‘ಹಿಂದೂ ರಾಷ್ಟ್ರೀಯವಾದಿ ಎಂದು ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದಾಗಲೇ ಹೇಳಿಕೊಂಡಿದ್ದರು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌ ರಾಷ್ಟ್ರೀಯವಾದಗಳೆಂದು ವಿಭಾಗಿಸುತ್ತಾ ಹೋದರೆ ದೇಶ ಉಳಿಯುವುದೇ’ ಎಂದು ಪ್ರಶ್ನಿಸಿದರು.

ಪುಸ್ತಕ ಪರಿಚಯಿಸಿದ ಮೀನಾಕ್ಷಿ ಬಾಳಿ, ‘ಸಾವರ್ಕರ್‌ ತನ್ನ ಬಗ್ಗೆ ಹಲವು ಸುಳ್ಳುಗಳನ್ನು ಹೇಳಿದ್ದರು. ಈಗ ಸಾವರ್ಕರ್‌ ಬಗ್ಗೆ ಸುಳ್ಳುಗಳು ಹರಡುತ್ತಿವೆ. ಸಾವರ್ಕರ್‌ ಬಗೆಗಿನ ಪ್ರಮುಖ ಏಳು ಸುಳ್ಳುಗಳನ್ನು ಈ ಕೃತಿಯಲ್ಲಿ ಸಾಕ್ಷಿ ಸಹಿತ ವಿವರಿಸಲಾಗಿದೆ’ ಎಂದು ತಿಳಿಸಿದರು.

‘ದೇಶವೇ ಜೈಲು ಆಗಿ, ಮನಸ್ಸುಗಳು ಕಸದ ತೊಟ್ಟಿಗಳಾಗಿರುವ ಈ ದೇಶದಲ್ಲಿ 2024ರ ಚುನಾವಣೆಯ ನಂತರ ಯಾರು ಎಲ್ಲಿ ಇರುತ್ತಾರೆ ಎಂಬುದು ಗೊತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಜಾತಿ ಧರ್ಮ ಮೀರಿ 1857ರ ಸಿಪಾಯಿ ದಂಗೆಯಲ್ಲಿ ಸೈನಿಕರು ಪಾಲ್ಗೊಂಡಿದ್ದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು. ಅದಕ್ಕಾಗಿ ಧರ್ಮಗಳ ಹೆಸರಲ್ಲಿ ಸಮಾಜವನ್ನು ಒಡೆಯಬೇಕಿತ್ತು. ಇಂಗ್ಲೆಂಡ್‌ನಲ್ಲಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಸಾವರ್ಕರ್‌ ಅವರನ್ನು ಈ ಕೆಲಸಕ್ಕೆ ಬ್ರಿಟಿಷರು ಬಳಸಿಕೊಂಡರು ಎಂದು ತಡಗಳಲೆ ಸುರೇಂದ್ರ ರಾವ್‌ ಮಾಹಿತಿ ನೀಡಿದರು.

ಜಾತ್ಯತೀತವನ್ನು ಸಮಾಜವಾದದ ಜೊತೆಗೆ ಬೆಸೆಯದೇ ಹೋದರೆ ಜಾತ್ಯತೀತ ಪ್ರಜಾಪ್ರಭುತ್ವ ಇನ್ನಷ್ಟು ದುರ್ಬಲಗೊಳ್ಳಲಿದೆ ಎಂದು ಚಿಂತಕ ಕೆ. ಪ್ರಕಾಶ್‌ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT