ಬುಧವಾರ, ಜನವರಿ 19, 2022
27 °C
’ಯುವ ಪುರಸ್ಕಾರ– 2020’ಕ್ಕೆ ಆಯ್ಕೆಯಾದ ಯುವ ಸಾಹಿತಿಗಳ ಆಶಯ

ಬರವಣಿಗೆ ಸಮಾಜದಲ್ಲಿ ಬದಲಾವಣೆ ತರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಲೇಖಕರಿಗೆ ಜವಾಬ್ದಾರಿ ಇದೆ. ಬಡವರ, ನೊಂದವರ ದನಿಯಾಗಬೇಕು, ಬರವಣಿಗೆ ಸಮಾಜದಲ್ಲಿ ಬದಲಾವಣೆ ತರಬೇಕು, ಕೋಮು ಸೌಹಾರ್ದ ಮತ್ತು ಶಾಂತಿ ನೆಲೆಸುವ ಆಶಯ ಹೊಂದಿರಬೇಕು....’

ಕೇಂದ್ರ ಸಾಹಿತ್ಯ ಅಕಾಡೆಮಿಯ ’ಯುವ ಪುರಸ್ಕಾರ–2020’ಕ್ಕೆ ಆಯ್ಕೆಯಾದ ಪ್ರಶಸ್ತಿ ಪುರಸ್ಕೃತರ ನುಡಿಗಳಿವು. ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪ್ರಶಸ್ತಿ ವಿಜೇತರ ಸಮ್ಮೇಳನದಲ್ಲಿ ತಾವು ಬರವಣಿಗೆ ಆರಂಭಿಸಿದ್ದು ಹೇಗೆ, ತಮ್ಮ ಸುತ್ತಮುತ್ತಲಿನ ಪರಿಸರವೇ ಬರವಣಿಗೆಯ ವಸ್ತುವಾಗಿದ್ದು ಹೇಗೆ ಎನ್ನುವ ಅನುಭವಗಳನ್ನು ಹಂಚಿಕೊಂಡರು. ತಮ್ಮ ಕೃತಿಗಳು ಯುವ ಪುರಸ್ಕಾರ ಪ್ರಶಸ್ತಿ ಆಯ್ಕೆಯಾಗಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ,‌ ಸಾಹಿತ್ಯ ವಲಯದ ಸ್ಪರ್ಶ ಬೆಳೆಸಿಕೊಂಡಿದ್ದು ಹೇಗೆ ಎನ್ನುವುದನ್ನು ವಿವರಿಸಿದರು.

ಚಾಮರಾಜನಗರ ಜಿಲ್ಲೆಯ ಸ್ವಾಮಿ ಪೊನ್ನಾಚಿ (ಕೆ.ಎಸ್‌. ಮಹದೇವಸ್ವಾಮಿ), ’ನನ್ನ ಧೂಪದ ಮಕ್ಕಳು ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ತಮಿಳುನಾಡು ಗಡಿಯಲ್ಲಿರುವ ಪೊನ್ನಾಚಿ ಎನ್ನುವ ಕುಗ್ರಾಮ ನನ್ನೂರು. ನಮ್ಮ ಊರಲ್ಲಿ ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ ಪುಸ್ತಕ ಓದುವ ಪ್ರೇಮಿಗಳು ಇದ್ದರು. ಇವರಿಂದಾಗಿ ಓದುವ ಒಲವು ಚಿಕ್ಕಂದಿನಲ್ಲಿ ಬೆಳೆಯಿತು. ಆದರೆ, ಮೈಸೂರಿಗೆ ಅಧ್ಯಯನ ಮಾಡಲು ತೆರಳಿದಾಗ ಸಾಹಿತ್ಯ ವಲಯದ ಪರಿಪೂರ್ಣ ಪರಿಚಯವಾಯಿತು. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ ಅಂತವರ ಕೃತಿಗಳನ್ನು ಓದಿದ ಬಳಿಕ ಸಾಹಿತ್ಯ ಜಗತ್ತಿನ ಮತ್ತೊಂದು ಲೋಕ ಪರಿಚಯವಾಯಿತು’ ಎಂದು ವಿವರಿಸಿದರು.

‘ನಮ್ಮೂರಿನ ಸೋಲಿಗರ ಮಕ್ಕಳ ಜೀವನ ಆಧರಿಸಿ ಧೂಪದ ಮಕ್ಕಳು ಕೃತಿ ಬರೆದಿದ್ದೇನೆ. ಆಧುನಿಕ ಶಿಕ್ಷಣ ಮತ್ತು ಬುಡಕಟ್ಟು ಜನರ ಜೀವನದ ಅಂಶಗಳು ಇದರಲ್ಲಿವೆ. ಮಕ್ಕಳು ಎದುರಿಸುತ್ತಿರುವ ಸಂಕಷ್ಟಗಳನ್ನು ಬಿಂಬಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.

ಕಾಶ್ಮೀರದ ಮಸ್ರೂರ್‌ ಮುಜಾಫರ್‌ ಮಾತನಾಡಿ, ‘ಗುಲ್ಮಾರ್ಗ್‌ ಬಳಿ ಸಣ್ಣ ಊರಿನಿಂದ ನಾನು ಬಂದಿದ್ದೇನೆ. ಸ್ಥಳೀಯ ಪರಿಸರ ನನ್ನ ಕವನಗಳಿಗೆ ವಸ್ತುವಾಗಿತ್ತು. ಶೈಕ್ಷಣಿಕ ಚಟುವಟಿಕೆಗಳ ಜತೆ ಕವಿತೆ, ಕಥೆಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡೆ’ ಎಂದು ಹೇಳಿದರು.

ಗೋವಾದ ಸಂಪದಾ ಕುಂಕೋಳಿಕರ್‌, ‘ಇಂಗ್ಲಿಷ್‌ನಲ್ಲಿ ಹೆಚ್ಚು ಕೃತಿಗಳನ್ನು ಬರೆದಿದ್ದೇನೆ. ಪ್ರವಾಸ ಕಥನದ ಕೃತಿ ಪ್ರಶಸ್ತಿ ಆಯ್ಕೆಯಾಗಿದೆ. ಆದರೆ, ಮಾತೃಭಾಷೆ ಕೊಂಕಣಿಯಲ್ಲಿ ಬರೆಯುವುದು ಹೆಚ್ಚು ತೃಪ್ತಿ ತಂದಿದೆ’ ಎಂದರು.

ಕೇರಳದ ಅಬಿನ್‌ ಜೋಸೆಫ್‌, ‘ನಾನು ಸಹ ಕುಗ್ರಾಮದಿಂದ ಬಂದವನು. ಹಳ್ಳಿಯ ಗ್ರಂಥಾಲಯಗಳಿಂದ ಓದುವ ಹವ್ಯಾಸ ಬೆಳೆಯಿತು. ನಾನು ಜನಸಾಮಾನ್ಯರ ಬದುಕು ಬವಣೆಗಳನ್ನು ಬರವಣಿಗೆ ಮೂಲಕ ಬಿಂಬಿಸಲು ಯತ್ನಿಸುತ್ತಿದ್ದೇನೆ’ ಎಂದು ಹೇಳಿದರು.

ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಚಾಲಕ ಸರಜೂ ಕಾಟ್ಕರ್‌ ಅಧ್ಯಕ್ಷತೆವಹಿಸಿದ್ದರು.  24 ಭಾಷೆಗಳಲ್ಲಿನ ಯುವ ಸಾಹಿತಿಗಳಿಗೆ ಯುವ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು