ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಪೀಣ್ಯ ಮೇಲ್ಸೇತುವೆ: ಲಘು ವಾಹನ ಸಂಚಾರ ಆರಂಭ

ತಿಂಗಳಾಂತ್ಯದಿಂದ ಎಲ್ಲ ಮಾದರಿಯ ವಾಹನ ಸಂಚಾರಕ್ಕೆ ಅವಕಾಶ ?
Published 19 ಜನವರಿ 2024, 14:08 IST
Last Updated 19 ಜನವರಿ 2024, 14:08 IST
ಅಕ್ಷರ ಗಾತ್ರ

ಬೆಂಗಳೂರು: ಪೀಣ್ಯ ಮೇಲ್ಸೇತುವೆಯ ‘ಸಾಮರ್ಥ್ಯ ಪರೀಕ್ಷೆ‘ ಮುಕ್ತಾಯವಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಶುಕ್ರವಾರ ಬೆಳಿಗ್ಗೆಯಿಂದ ಅವಕಾಶ ಕಲ್ಪಿಸಲಾಗಿದೆ.

ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ–4ರ ತುಮಕೂರು ರಸ್ತೆಯಲ್ಲಿ ಮೂರು ದಿನಗಳ ಕಾಲ ವಿಪರೀತ ದಟ್ಟಣೆ ಉಂಟಾಗಿ, ಸವಾರರು ಸಮಸ್ಯೆಗೆ ಸಿಲುಕಿದ್ದರು. ಪೀಣ್ಯ, ಜಾಲಹಳ್ಳಿ ಕ್ರಾಸ್‌, ದಾಸರಹಳ್ಳಿ ಜಂಕ್ಷನ್‌, ನಾಗಸಂದ್ರ ಹಾಗೂ ಟೋಲ್‌ ಬಳಿ ದಟ್ಟಣೆ ತೀವ್ರವಾಗಿತ್ತು.   

ಶುಕ್ರವಾರ ಬೆಳಿಗ್ಗೆ 11ರ ಬಳಿಕ ಮೇಲ್ಸೇತುವೆಯಲ್ಲಿ ಕಾರು, ಜೀಪು, ಆಟೊ, ಬೈಕ್‌, ಆಂಬುಲೆನ್ಸ್‌ ಸೇರಿದಂತೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಇದರಿಂದ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ. ಸದ್ಯಕ್ಕೆ ಲಾರಿ, ಬಸ್‌ ಹಾಗೂ ಸರಕು ಸಾಗಣೆ ವಾಹನಗಳು ಮೇಲ್ಸೇತುವೆ ಪಕ್ಕದ ಹೆದ್ದಾರಿ ಹಾಗೂ ಸರ್ವೀಸ್‌ ರಸ್ತೆಯಲ್ಲೇ ಸಂಚರಿಸುತ್ತಿವೆ.

ಮೇಲ್ಸೇತುವೆ ಸಾಮರ್ಥ್ಯ ಪರೀಕ್ಷೆಗಾಗಿ ಜ.16ರಿಂದ 19ರ ಬೆಳಿಗ್ಗೆ 11ರವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ವರದಿ ಬರಲು ಐದು ದಿನ: 

‘16 ಟ್ರಕ್‌ ಬಳಸಿ ಎರಡು ಸ್ಥಳಗಳಲ್ಲಿ 250 ಟನ್‌ ಭಾರ ಹೇರಿ ಮೇಲ್ಸೇತುವೆ ಸಾಮರ್ಥ್ಯ ಪರೀಕ್ಷಿಸಲಾಗಿದೆ. ಪಿಲ್ಲರ್‌ಗಳಲ್ಲಿರುವ ಸ್ಪ್ರಿಂಗ್‌ ಎಷ್ಟು ಕೆಳಕ್ಕೆ ಇಳಿದಿವೆ ಹಾಗೂ ಹೊಸದಾಗಿ ಅಳವಡಿಕೆ ಮಾಡಿರುವ 240 ಕೇಬಲ್‌ಗಳ ಸಾಮರ್ಥ್ಯ ಹೇಗಿದೆ ಎಂಬುದನ್ನು ತಜ್ಞರು ನಮೂದಿಸಿಕೊಂಡಿದ್ದಾರೆ. ಮೇಲ್ಸೇತುವೆಯು ಭಾರಿ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿದೆಯೇ? ಇಲ್ಲವೇ ಎಂಬುದರ ಕುರಿತು ಐದು ದಿನಗಳ ಕಾಲ ಅಧ್ಯಯನ ನಡೆಯಲಿದೆ. ನಂತರ, ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಪ್ರಾಧಿಕಾರದ ಅಧಿಕಾರಿಗಳು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಮೇಲ್ಸೇತುವೆ ಅಧ್ಯಯನ ಸಮಿತಿ ಸದಸ್ಯ ಚಂದ್ರಕಿಶನ್‌ ತಿಳಿಸಿದರು.

ಸಾಮರ್ಥ್ಯ ಪರೀಕ್ಷೆ ಯಶಸ್ವಿ?:‌

‘ಸಾಮರ್ಥ್ಯ ಪರೀಕ್ಷೆ ಬಹುತೇಕ ಯಶಸ್ವಿಯಾಗಿದ್ದು, ಈ ತಿಂಗಳ ಅಂತ್ಯದಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿಯ ವಾಹನ ಸಂಚಾರಕ್ಕೆ ಅನುಮತಿ ಲಭಿಸುವ ಸಾಧ್ಯತೆಯಿದೆ. ಪರೀಕ್ಷೆ ವೇಳೆ ಮೇಲ್ಸೇತುವೆ ಸಾಮರ್ಥ್ಯ ಹೆಚ್ಚಿರುವುದು ಕಂಡುಬಂದಿದೆ. 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದು. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ನಡೆಸುವುದರಿಂದ ತಾಂತ್ರಿಕ ಅಧ್ಯಯನ ನಡೆದ ಮೇಲೆಯೇ ಅಂತಿಮ ವರದಿ ಸಿದ್ಧ ಪಡಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT