ಮಂಗಳವಾರ, ಸೆಪ್ಟೆಂಬರ್ 21, 2021
26 °C
ರೈಲು ನಿಲ್ದಾಣದ ಆವರಣದಲ್ಲೇ ಕುಳಿತ ಮಹಿಳೆಯರು * ಅನುಮತಿ ನಿರಾಕರಿಸುತ್ತಿರುವ ಪೊಲೀಸರು

ಮದ್ಯ ನಿಷೇಧ ಹೋರಾಟಗಾರರಿಗೆ ದಿಗ್ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು’ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ನಗರಕ್ಕೆ ಬಂದಿರುವ ಹೋರಾಟಗಾರರಿಗೆ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಆವರಣದಲ್ಲೇ ದಿಗ್ಬಂಧನ ವಿಧಿಸಲಾಗಿದೆ.

ಮದ್ಯ ನಿಷೇಧ ಆಂದೋಲನ – ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ರಾಯಚೂರು, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಬೀದರ್, ಕಲಬುರ್ಗಿ, ಗದಗ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಮಹಿಳೆಯರು ಗುರುವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದಾರೆ.

ಪ್ರತಿಭಟನೆ ಬಗ್ಗೆ ಮೊದಲೇ ಮಾಹಿತಿ ಕಲೆಹಾಕಿದ್ದ ಪೊಲೀಸರು, ನಿಲ್ದಾಣದ ಆವರಣದಲ್ಲೇ ಹೋರಾಟಗಾರರನ್ನು ತಡೆದರು. ‘ನಿಮ್ಮ ಪ್ರತಿಭಟನೆಗೆ ಅವಕಾಶವಿಲ್ಲ. ವಾಪಸ್ ಹೋಗಿ’ ಎಂದು ಹೇಳಿದರು.

‘ಪ್ರಜಾಪ್ರಭುತ್ವದ ಹಕ್ಕಿನಡಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಬಂದಿದ್ದೇವೆ’ ಎಂಬುದಾಗಿ ಹೇಳಿದ ಹೋರಾಟಗಾರರು, ನಿಲ್ದಾಣದ ಆವರಣದಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್.ದೊರೆಸ್ವಾಮಿ ಅವರು ಸ್ಥಳಕ್ಕೆ ಬಂದು ಬೆಂಬಲ ನೀಡಿದರು.

‘ಓಟು ಕೊಟ್ಟವರಿಗೆ ಬಾರು ; ಓಟು ಪಡೆದವನಿಗೆ ಕಾರು’, ‘ಮದ್ಯ ನಿಷೇಧಿಸಿ ಕುಟುಂಬಗಳ ರಕ್ಷಿಸಿ’, ‘ಮದ್ಯದ ಸಹವಾಸ; ಹೆಂಡತಿ– ಮಕ್ಕಳು ಉಪವಾಸ’... ಎಂಬ ಘೋಷಣಾ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. 

ಜಾಗ ಖಾಲಿ ಮಾಡಲು ಒತ್ತಡ: ‘ಮದ್ಯದಿಂದ ಕುಟುಂಬಗಳು ಬೀದಿಗೆ ಬರುತ್ತಿವೆ. ಮದ್ಯ ನಿಷೇಧಕ್ಕೆ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಯಾವುದೇ ಸರ್ಕಾರ ಬಂದರೂ ನಮ್ಮ ಕೂಗಿಗೆ ಸ್ಪಂದಿಸುತ್ತಿಲ್ಲ’ ಎಂದು ಹೋರಾಟಗಾರ್ತಿ ಸ್ವರ್ಣಾ ಭಟ್ ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮ ನಡಿಗೆ ಮದ್ಯ ಮುಕ್ತ ಕರ್ನಾಟಕದೆಡೆಗೆ’ ಘೋಷವಾಕ್ಯದಡಿ ಪ್ರತಿಭಟನೆ ಮಾಡಲು ಮಹಿಳೆಯರ ಸಮೇತ ನಗರಕ್ಕೆ ಬಂದಿದ್ದೇವೆ. ಸ್ವಾತಂತ್ರ್ಯ ಉದ್ಯಾನ ಅಥವಾಆ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡುತ್ತಿಲ್ಲ. ಬೇರೆ ಸಂಘಟನೆಯವರು ಅಲ್ಲಿ ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಈಗ ರೈಲು ನಿಲ್ದಾಣದ ಆವರಣದಲ್ಲೇ ನಾವೆಲ್ಲರೂ ಕುಳಿತಿದ್ದು, ಇಲ್ಲಿಯೂ ಜಾಗ ಖಾಲಿ ಮಾಡುವಂತೆ ರೈಲು ಇಲಾಖೆಯವರು ಹೇಳುತ್ತಿದ್ದಾರೆ’ ಎಂದು ಅವರು ದೂರಿದರು.

‘ಕಳೆದ ಬಾರಿ ಬೃಹತ್ ಪಾದಯಾತ್ರೆ ನಡೆಸಲಾಗಿತ್ತು. ನಗರದಲ್ಲಿ ದೊಡ್ಡ ಸಮಾವೇಶ ಮಾಡಲಾಗಿತ್ತು. ಆದರೆ, ಈ ಬಾರಿ ಉದ್ದೇಶಪೂರ್ವಕ ಪ್ರತಿಭಟನೆ ಹತ್ತಿಕ್ಕಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ಪೊಲೀಸರನ್ನು ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

ಹೋರಾಟಗಾರ್ತಿ ವಿದ್ಯಾ ಪಾಟೀಲ, ‘ಸಂವಿಧಾನದ 73ನೇ ತಿದ್ದುಪಡಿ ಆಶಯದಂತೆ ಗ್ರಾಮಗಳ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನು ಗ್ರಾಮಸಭೆಗೆ ನೀಡಬೇಕು. ‘ಮದ್ಯ ಮುಕ್ತ ಕರ್ನಾಟಕ ನೀತಿ’ ರೂಪಿಸಿ ಅದರ ಜಾರಿಗೆ ಸಮಿತಿ ರಚಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿರುವ ಅಕ್ರಮ ಮದ್ಯ ಮಾರಾಟವನ್ನು ತ್ವರಿತವಾಗಿ ತಡೆಯಬೇಕು. ಕುಡಿತದ ಚಟಕ್ಕೆ ಅಂಟಿಕೊಂಡು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಅನುಮತಿ ನಿರಾಕರಿಸಿದ ಡಿಸಿಪಿ
ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಅನುಮತಿ ಕೋರಿ ಸಂಘಟನೆಯ ಮಲ್ಲಿಗೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಪಶ್ಚಿಮ ವಿಭಾಗದ ಡಿಸಿಪಿ ಬಿ. ರಮೇಶ್ ತಿರಸ್ಕರಿಸಿದ್ದಾರೆ.

ಹಿಂಬರಹ ನೀಡಿರುವ ರಮೇಶ್, ‘ಸಂಘಟನೆಯಿಂದ ಈ ಹಿಂದೆ ನಡೆದ ಪ್ರತಿಭಟನೆ ವೇಳೆ ಪೊಲೀಸರ ಸೂಚನೆಗಳನ್ನು ಉಲ್ಲಂಘಿಸಿದ್ದೀರಾ. ಹೀಗಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಲಾಗಿದೆ’ ಎಂದಿದ್ದಾರೆ. 

ಅಶ್ರುವಾಯು ವಾಹನ; ಮಹಿಳೆಯರ ಅಸಮಾಧಾನ
50ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಅಶ್ರುವಾಯು ವಾಹನ ನಿಲ್ಲಿಸಲಾಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಹಿಳೆಯರು, ‘ನಮ್ಮದು ಅಹಿಂಸಾತ್ಮಕ ಹೋರಾಟ. ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ನಾವ್ಯಾರೂ ಕಳ್ಳತನ, ದರೋಡೆ, ಕೊಲೆ ಮಾಡಿಲ್ಲ. ಹೀಗಿರುವಾಗ ಈ ಸ್ಥಳದಲ್ಲಿ ಅಶ್ರುವಾಯು ವಾಹನ ನಿಲ್ಲಿಸುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು