ಸೋಮವಾರ, ಮಾರ್ಚ್ 30, 2020
19 °C
ಕೊರೊನಾ ಪರಿಣಾಮ: ಆಹಾರ–ಅಗತ್ಯ ಸೇವೆ ಪೂರೈಸುತ್ತಿರುವ ವಸಂತನಗರ ನಾಗರಿಕರು

ಅಸಹಾಯಕರ ನೆರವಿಗೆ ವಾಟ್ಸ್‌ಆ್ಯಪ್‌ ಗ್ರೂಪ್‌

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾನು ಚೆನ್ನೈನಲ್ಲಿದ್ದೇನೆ. ನನ್ನ ತಂದೆ ಸಂಜಯನಗರದಲ್ಲಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿದ್ದು, ಅಡುಗೆ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆಹಾರ ಪೂರೈಸುವವರು ಯಾರಾದರೂ ಇದ್ದರೆ ಸಂಪರ್ಕ ಸಂಖ್ಯೆ ತಿಳಿಸಿ... ಮನೆಯಲ್ಲಿ ನಲ್ಲಿ ಸೋರುತ್ತಿದೆ. ಏರಿಯಾದಲ್ಲಿ ಒಳ್ಳೆಯ ಪ್ಲಂಬರ್‌ ಇದ್ದರೆ ತಿಳಿಸಿ... ಹಾಲು ಪೂರೈಸುವವರು ಯಾರಾದರೂ ಗೊತ್ತಿದ್ದರೆ ಹೇಳಿ, ಸಹಾಯವಾಗುತ್ತದೆ... 

ಹೀಗೆ ಅಗತ್ಯ ನೆರವು ಕೋರಿ ಮನವಿಗಳ ಮಹಾಪೂರವೇ ಹರಿದು ಬರುತ್ತಿರುವುದು, ವಸಂತನಗರದ ನಾಗರಿಕರು ರಚಿಸಿಕೊಂಡಿರುವ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ. 60ಕ್ಕೂ ಹೆಚ್ಚು ನಾಗರಿಕರು ಈ ಗ್ರೂಪ್‌ನಲ್ಲಿದ್ದಾರೆ. ತುರ್ತು ಅಗತ್ಯವಿರುವವರಿಗೆ ಸೇವೆ ಒದಗಿಸುವ, ತಮ್ಮ ಕೈಯಲ್ಲಾದ ಸಹಾಯ ಮಾಡುವ ಕೆಲಸವನ್ನು ಈ ಗ್ರೂಪ್‌ ಮಾಡುತ್ತಿದೆ. ಹೀಗೆ, ಮನವಿ ಮಾಡಿಕೊಂಡ ಎಲ್ಲರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಆಗಿದೆ. ಬಿಬಿಎಂಪಿಯ ಸ್ಥಳೀಯ ಕಾರ್ಪೊರೇಟರ್‌ ಸಂಪತ್‌ಕುಮಾರ್‌ ಹಾಗೂ ಹೈಗ್ರೌಂಡ್ಸ್‌ ಠಾಣೆ ಇನ್‌ಸ್ಪೆಕ್ಟರ್‌ ಸಿದ್ದೇಗೌಡ ಅವರೊಂದಿಗೆ ಈ ಗ್ರೂಪ್‌ನ ಸದಸ್ಯರು ನಿರಂತರ ಸಂಪರ್ಕದಲ್ಲಿದ್ದಾರೆ. 

‘ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸುವುದಕ್ಕೆ ನಾಲ್ಕು ತಾಸು ಮೊದಲೇ ನಾವು ಈ ಗ್ರೂಪ್‌ ರಚಿಸಿದ್ದೇವೆ. ಹಿರಿಯ ನಾಗರಿಕರಿಗೆ ಹೆಚ್ಚು ಅಪಾಯ ಎಂದು ಹೇಳಲಾಗುತ್ತಿದೆ ಮತ್ತು ಅವರು ಹೊರಗೆ ಬಾರದಿರಲು ಮನವಿ ಮಾಡಲಾಗುತ್ತಿದೆ. ಆದರೆ, ಹಿರಿಯ ನಾಗರಿಕರಲ್ಲಿ ಬಹಳಷ್ಟು ಜನ ಒಬ್ಬಂಟಿಯಾಗಿರುತ್ತಾರೆ. ಅವರಿಗೆ ಕುಳಿತಲ್ಲಿಯೇ ಸೇವೆ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಅಂಥವರನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಗ್ರೂಪ್‌ನ ಅಡ್ಮಿನ್‌ ರಾಜಕುಮಾರ್‌ ದುಗರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇಂದಿರಾ ಕ್ಯಾಂಟೀನ್‌ನವರು 25ರಿಂದ 30 ಪ್ಯಾಕೆಟ್ ಆಹಾರ ಇಟ್ಟಿರುತ್ತಾರೆ. ಈ ಬಗ್ಗೆ ಮಾಹಿತಿಯನ್ನು ತೀರಾ ಬಡವರಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಆಹಾರ ಸಾಕಾಗಲಿಲ್ಲ ಎಂದರೆ ನಿತ್ಯ ಮನೆಯೊಂದಕ್ಕೆ ಐದು ಕೆಜಿ ಅಕ್ಕಿ ಕೊಡುವುದಾಗಿ ಸ್ಥಳೀಯ ಕಾರ್ಪೊರೇಟರ್ ಹೇಳಿದ್ದಾರೆ. ನಾವು ಕೂಡ, ತೀರಾ ಅಗತ್ಯವಿರುವವರಿಗೆ ದಿನಸಿ ಮತ್ತು ಅಗತ್ಯ ಸಾಮಗ್ರಿ ಪೂರೈಸುವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು. 

ಕೈ ಮುಗಿದು ಮನವಿ: 

ವಸಂತನಗರದಲ್ಲಿ ಕಳೆದ 24ರಿಂದ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಆದರೆ, ಇದನ್ನು ಪಾಲಿಸದ ಕೆಲವರಿಗೆ ಈ ಗ್ರೂಪ್‌ನ ಸದಸ್ಯರು ಕೈ ಮುಗಿದು, ಸಾಮಾಜಿಕ ಅಂತರ ಕಾಪಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. 

‘ದಿನಸಿ ತರಲು ಹೋದಾಗ ಜನ, ಸಾಮಾಜಿಕ ಅಂತರ ಕಾಪಾಡದಿದ್ದರೆ ಅವರಿಗೆ ಮನವಿ ಮಾಡುತ್ತೇವೆ. ನಾವು ಇರದಿದ್ದರೆ ಅಂಗಡಿಯವರಿಗೆ ಫೋಟೊ ತೆಗೆದು ವಾಟ್ಸ್‌ಆ್ಯಪ್‌ಗೆ ಕಳಿಸಲು ಹೇಳಿದ್ದೇವೆ. ಹೀಗೆ, ಗ್ರೂಪ್‌ಗೆ ಬಂದ ಫೋಟೊ ನೋಡಿ, ನಮ್ಮ ಗ್ರೂಪ್‌ನ ಸದಸ್ಯರು ಸ್ಥಳಕ್ಕೆ ತೆರಳಿ, ಜನರಲ್ಲಿ ಮನವಿ ಮಾಡುತ್ತಾರೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು