ಸೋಮವಾರ, ಜೂಲೈ 6, 2020
23 °C
ಬಾಲಾಜಿನಗರ ನಾಗರಿಕರ ಹಿತರಕ್ಷಣಾ ವೇದಿಕೆ ನೇತೃತ್ವ

ಬಡಾವಣೆಗಳಲ್ಲಿ ಕಡಿಮೆ ಬೆಲೆಗೆ ತರಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‍ಡೌನ್‍ನಿಂದ ನಷ್ಟಕ್ಕೆ ಸಿಲುಕಿರುವ ರೈತರಿಂದ ಹಣ್ಣು, ತರಕಾರಿಗಳನ್ನು ಬಾಲಾಜಿನಗರ ನಾಗರಿಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನೇರವಾಗಿ ಖರೀದಿಸಿ ರಾಜರಾಜೇಶ್ವರಿನಗರದ ಸುತ್ತಮುತ್ತಲಿನ ಬಡಾವಣೆ ಜನರಿಗೆ ಕಡಿಮೆ ಬೆಲೆಯಲ್ಲಿ ಪೂರೈಸಲಾಗುತ್ತಿದೆ.

ಲಾಕ್‍ಡೌನ್‍ನಿಂದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದ ಕಾರಣ, ಬೆಳೆ ನಾಶ ಮಾಡಲು ರೈತರು ಮುಂದಾಗಿದ್ದರು. ಇದನ್ನು ಮನಗಂಡ ವೇದಿಕೆ 15 ದಿನಗಳಿಂದ ಜನರ ಬೇಡಿಕೆಗಳಿಗೆ ಅನುಗುಣವಾಗಿ ರೈತರಿಂದ ತಾಜಾ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡುತ್ತಿದೆ.

ನಿತ್ಯ ಕ್ಯಾರೆಟ್, ಬೀಟ್‍ರೂಟ್, ಮೂಲಂಗಿ, ತೊಂಡೆಕಾಯಿ, ಕುಂಬಳಕಾಯಿ, ಬದನೆ, ಕ್ಯಾಪ್ಸಿಕಂ ಸೇರಿ ಎಲ್ಲ ಬಗೆಯ ತರಕಾರಿಗಳು ಹಾಗೂ ಬಾಳೆಹಣ್ಣು, ಪೇರಲೆ, ಪಪ್ಪಾಯ, ದ್ರಾಕ್ಷಿಗಳನ್ನು ತಾಜಾ ಸ್ಥಿತಿಯಲ್ಲಿ ಪೂರೈಸುತ್ತಿದೆ. ನಿತ್ಯ ಒಂದೊಂದು ಬಡಾವಣೆಯಲ್ಲಿ ವೇದಿಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತಿದ್ದು, ಎಲ್ಲ ತರಕಾರಿಗಳನ್ನು ಪ್ರತಿ ಕೆ.ಜಿ.ಗೆ ಕನಿಷ್ಠ ₹20ರಂತೆ ಮಾರಾಟ ಮಾಡಲಾಗುತ್ತಿದೆ.

'ನೆಲಮಂಗಲ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ರೈತರು ಬೆಳೆದ ತರಕಾರಿಗಳನ್ನು ನೇರವಾಗಿ ಗ್ರಾಹಕರ ಕೈಸೇರುವಂತೆ ವ್ಯವಸ್ಥೆ ಮಾಡಿದ್ದೇವೆ. ನಿತ್ಯ ಕನಿಷ್ಠ 600 ಕೆ.ಜಿ.ಯಷ್ಟು ತರಕಾರಿಗಳು ಮಾರಾಟವಾಗುತ್ತಿವೆ. ಬೆಲೆ ಇಲ್ಲದ ಕಾರಣ ರೈತರು ಕಂಗಾಲಾಗಿದ್ದರು. ಲಾಕ್‍ಡೌನ್‍ನಿಂದ ಗ್ರಾಹಕರಿಗೂ ತರಕಾರಿ, ಹಣ್ಣಿನ ಸಮಸ್ಯೆಯಿತ್ತು. ಇಬ್ಬರಿಗೂ ಅನುಕೂಲವಾಗುವಂತೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ' ಎಂದು ಬಾಲಾಜಿ ನಗರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಚಂದ್ರಮೌಳಿ ತಿಳಿಸಿದರು.

‘ವೇದಿಕೆ ವತಿಯಿಂದ ಬಾಲಾಜಿ ಬಡಾವಣೆಗಳಲ್ಲಿರುವ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಉಚಿತವಾಗಿ ದಿನಸಿ ವಿತರಿಸಲಾಗುತ್ತಿದೆ. ತರಕಾರಿ ಹಣ್ಣು ಪೂರೈಸುವ ಸಾರಿಗೆ ವ್ಯವಸ್ಥೆಗೆ ಹಾಪ್‍ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆ ನೆರವಾದವು' ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು