ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ

ಬಿಜೆಪಿಯಲ್ಲಿ ಬದಲಾವಣೆ ಅನುಮಾನ
Published 21 ಜನವರಿ 2024, 19:15 IST
Last Updated 21 ಜನವರಿ 2024, 19:15 IST
ಅಕ್ಷರ ಗಾತ್ರ

ಬೆಂಗಳೂರು: ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಿಜೆಪಿ ವಶದಲ್ಲಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್‌ ಪಕ್ಷದಲ್ಲಿ ಈ ಬಾರಿ ತೀವ್ರ ಪೈಪೋಟಿ ನಡೆಯುತ್ತಿದೆ. ಮೂರು ಬಾರಿ ಗೆದ್ದಿರುವ ಸಂಸದ ಪಿ.ಸಿ. ಮೋಹನ್‌ ಅವರನ್ನೇ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ಇದೆ. ‘ಕೈ’ ಪಾಳಯದಲ್ಲಿ ಪ್ರಬಲ ಪ್ರತಿಸ್ಪರ್ಧಿಗಾಗಿ ಶೋಧ ಮುಂದುವರಿದಿದೆ.

2008ರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಆ ಬಳಿಕ ನಡೆದ 2009, 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ. ಮೋಹನ್‌ ಸತತ ಗೆಲುವು ಸಾಧಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ. ಹಿಂದಿನಂತೆಯೇ ಕಾಂಗ್ರೆಸ್‌ ಐದು ಮತ್ತು ಬಿಜೆಪಿ ಮೂರು ಸ್ಥಾನ ಗಳಿಸಿವೆ.

ಮುಸ್ಲಿಂ ಮತದಾರರ ಬಾಹುಳ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಈ ಬಾರಿ ಗೆಲುವು ಸಾಧಿಸಬಹುದು ಎಂಬ ಅಂದಾಜು ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್ ನಲಪಾಡ್‌ ಹ್ಯಾರೀಸ್‌ ಎಐಸಿಸಿ ಮಟ್ಟದಲ್ಲಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್‌ ಖಾನ್‌ ಅವರ ಮಗ ಹಾಗೂ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್‌ ಮತ್ತು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್‌.ಎ. ಹುಸೇನ್‌ ಕೂಡ ಇಲ್ಲಿ ಟಿಕೆಟ್‌ ಆಕಾಂಕ್ಷಿಗಳು.

2019ರ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡಿ, 70,968 ಮತಗಳ ಅಂತರದಿಂದ ಸೋತಿದ್ದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್‌ ಅರ್ಷದ್‌ ಅವರನ್ನು ಪುನಃ ಕಣಕ್ಕಿಳಿಸಿದರೆ ಗೆಲುವು ಸುಲಭವಾಗಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿದೆ. ರಾಜ್ಯಸಭಾ ಸದಸ್ಯ ಸೈಯದ್‌ ನಾಸೀರ್‌ ಹುಸೇನ್‌ ಅವರನ್ನು ಕಣಕ್ಕಿಳಿಸಬೇಕೆಂಬ ಸಲಹೆಯನ್ನೂ ಕೆಲವರು ಮುಂದಿಟ್ಟಿದ್ದಾರೆ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.

2019ರ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ವಿಧಾನ ಪರಿಷತ್‌ನ ಸದಸ್ಯ ಬಿ.ಕೆ. ಹರಿಪ್ರಸಾದ್‌ ಈ ಬಾರಿ ಬೆಂಗಳೂರು ಕೇಂದ್ರದಿಂದ ಟಿಕೆಟ್‌ ಬಯಸಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ಗೊತ್ತಾಗಿದೆ.

‘ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೂ, ಪಕ್ಷಕ್ಕೆ ಗೆಲ್ಲುವ ಅಭ್ಯರ್ಥಿಗಳೇ ಮುಖ್ಯ. ಎಲ್ಲ ಆಯಾಮಗಳಿಂದಲೂ ಪರಿಶೀಲನೆ ನಡೆಸಿ, ಗೆಲ್ಲುವ ಸಾಧ್ಯತೆ ಇರುವವರಿಗೆ ಟಿಕೆಟ್‌ ನೀಡಬೇಕು ಎಂಬ ಚರ್ಚೆ ನಡೆದಿದೆ’ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

ಬದಲಾವಣೆಯ ಸುಳಿವಿಲ್ಲ: ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಬಿಜೆಪಿಯಲ್ಲಿದೆ. ಆದರೆ, ಪಿ.ಸಿ. ಮೋಹನ್‌ ಅವರೇ ಮತ್ತೆ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ಹೊಸಬರ ಯಾವುದೇ ಹೆಸರುಗಳು ಈವರೆಗೆ ಚರ್ಚೆಗೆ ಬಂದಿಲ್ಲ.

ಕ್ಷೇತ್ರವಾರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುವ ಪ್ರಕ್ರಿಯೆ ಬಿಜೆಪಿಯಲ್ಲಿ ಪ್ರಗತಿಯಲ್ಲಿದೆ. ಅಭ್ಯರ್ಥಿಗಳ ಕುರಿತ ಚರ್ಚೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಕ್ಷೇತ್ರವಾರು ಸಮಾಲೋಚನಾ ಸಭೆಗಳನ್ನು ನಡೆಸಿದ ಬಳಕವೇ ಈ ಕುರಿತ ಸ್ಪಷ್ಟತೆ ಸಿಗಲಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು.

ಅಜ್ಜಯ್ಯನ ಮಾತೇ ಅಂತಿಮವಾಗುತ್ತಾ?
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ತುಮಕೂರು ಜಿಲ್ಲೆಯ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಜ್ಜಯ್ಯ ಅವರ ಕಟ್ಟಾ ಅನುಯಾಯಿ. ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಅಜ್ಜಯ್ಯ ಅವರು ಶಿವಕುಮಾರ್‌ ಅವರಿಗೆ ಹೇಳಿದ್ದಾರೆ. ಈ ಕಾರಣದಿಂದ ಮೂರೂ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸುವಂತೆ ಶಿವಕುಮಾರ್‌ ಪಟ್ಟು ಹಿಡಿಯುವ ಸಾಧ್ಯತೆ ಇದೆ’ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು. ‘ಮೂರೂ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಲು ಒಪ್ಪಿಗೆ ದೊರತರೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರ ಪತ್ನಿ ಟಬು ರಾವ್‌ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ಶಿವಕುಮಾರ್‌ ಯೋಚಿಸಿದ್ದಾರೆ’ ಎಂಬ ಮಾಹಿತಿ ಪಕ್ಷದ ವಲಯದೊಳಗೆ ಚರ್ಚೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT