ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂಪ್ರೇರಿತವಾಗಿ ಮತದಾನ ಮಾಡಲು ಉತ್ತೇಜಿಸುವಂತೆ ಸಲಹೆ: ತುಷಾರ್ ಗಿರಿನಾಥ್

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
Published 28 ಮಾರ್ಚ್ 2024, 16:00 IST
Last Updated 28 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಗೆ ಮತದಾರರು ಸ್ವಯಂಪ್ರೇರಿತವಾಗಿ ಬಂದು ಮತದಾನ ಮಾಡುವಂತೆ ಉತ್ತೇಜಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಬಿಎಲ್ಒಗಳಿಗೆ ತಿಳಿಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಬೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗದ ಅಂತಿಮ ಘಟ್ಟದ ಅಧಿಕಾರಿಗಳಾಗಿದ್ದಾರೆ. ಜನರ ನೇರ ಸಂಪರ್ಕ ಹಾಗೂ ಅವರಿಂದ ಮತದಾನ ಮಾಡಿಸುವ ಸಾಮರ್ಥ್ಯವೆಲ್ಲವೂ ನಿಮ್ಮ ಬಳಿ‌ ಇರಲಿದೆ. ಆದ್ದರಿಂದ ಎಲ್ಲರೂ ತಮ್ಮ ಆದ್ಯ ಕರ್ತವ್ಯವನ್ನು ತಿಳಿದು ಜನರಲ್ಲಿ ಅರಿವು ಮೂಡಿಸಿ ತಪ್ಪದೆ ಮತದಾನ‌ ಮಾಡಿಸಬೇಕು’ ಎಂದು ತಿಳಿಸಿದರು.

ಬೂತ್ ಮಟ್ಟದ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಮನೆ-ಮನೆ ಭೇಟಿ ನೀಡಿ ಮತದಾನದ ಪ್ರಾಮುಖ್ಯದ ಬಗ್ಗೆ ಅರಿವು ಮೂಡಿಸಬೇಕು. ನಗರದಲ್ಲಿ ಮತದಾನ ಶೇಖಡಾವಾರು ಹೆಚ್ಚಳಕ್ಕೆ ಎಲ್ಲರೂ ಶ್ರಮವಹಿಸಬೇಕೆಂದು ಹೇಳಿದರು.

ನಗರದಲ್ಲಿರುವ ದೊಡ್ಡ ಸಮುಚ್ಚಯಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆಗಳನ್ನು ನಡೆಸಿ ಮತಗಟ್ಟೆಗಳಲ್ಲಿರುವ ಸೌಲಭ್ಯ, 85 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನವಿರುವ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.

ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ಕಾಂತರಾಜು ಬೆಂಗಳೂರು ನಗರ ಜಿಲ್ಲೆಯ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ನೋಡಲ್ ಅಧಿಕಾರಿ ಅನಿತಾ ಉಪಸ್ಥಿತರಿದ್ದರು.

ಕಾರ್ಯಾಗಾರ: ‘ಸಕಾಲದಲ್ಲಿ ಮತದಾರರಿಗೆ ಮಾಹಿತಿಯನ್ನು ತಲುಪಿಸುವಲ್ಲಿ ಮಾಧ್ಯಮವು ಚುನಾವಣೆಯ ಒಂದು ಭಾಗವಾಗಿದೆ. ಕಾಲಕಾಲಕ್ಕೆ ಚುನಾವಣಾ ಆಯೋಗವು ಸೂಚಿಸುವ ನಿಯಮಗಳನ್ನು ಪಾಲಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದರು.

ಲೋಕಸಭಾ ಚುನಾವಣೆ-2024ರ ಸಂಬಂಧ ಎಂಸಿಎಂಸಿ ನಿಯಮಗಳು, ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಜಾಲತಾಣಗಳು ಹಾಗೂ ಪಾವತಿಸಿದ ಸುದ್ದಿ ಕುರಿತು ನಡೆದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿಯಿಂದ (ಎಂಸಿಎಂಸಿ)  ಯಾವುದಕ್ಕೆ ಅನುಮತಿ ಬೇಕು, ಯಾವುದಕ್ಕೆ ಅನುಮತಿ ಬೇಡ ಎಂಬುದನ್ನು ರಾಜಕೀಯ ಪ್ರತಿನಿಧಿಗಳು ಹಾಗೂ ಮಾಧ್ಯಮದ ಪ್ರತಿನಿಧಿಗಳು ಅರ್ಥೈಸಿಕೊಳ್ಳಬೇಕು ಎಂದರು.

ಜಿಲ್ಲಾ ಎಂಸಿಎಂಸಿ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT