ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ಪ್ರಗತಿ ಮಾತು ಹೊರಗೆ: ಮತದ ಕನಸು ಒಳಗೆ

Published 7 ಏಪ್ರಿಲ್ 2024, 0:18 IST
Last Updated 7 ಏಪ್ರಿಲ್ 2024, 0:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು ನಾಡು, ದೇಶ ಮಾತ್ರವಲ್ಲ; ವಿಶ್ವದ ಗಮನ ಸೆಳೆಯುವ ನಗರ. ಇಲ್ಲಿ ನಡೆಯುವ ವಿದ್ಯಮಾನಗಳು ಅನೇಕ ಬಾರಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬಂದಿದ್ದೂ ಉಂಟು. ಹೀಗಾಗಿ, ಬೆಂಗಳೂರಿನ ಅಭಿವೃದ್ಧಿ, ಮೂಲಸೌಕರ್ಯ ವಿಷಯದಲ್ಲಿ ‘ತಮ್ಮ ಕೊಡುಗೆಗಳೇ ಅಪಾರ’ ಎಂದು ಬಿಂಬಿಸಿಕೊಂಡು ಅದನ್ನು ಮತವಾಗಿ ಪರಿವರ್ತಿಸಿಕೊಳ್ಳಲು ರಾಜಕೀಯ ಪಕ್ಷಗಳು ಪೈಪೋಟಿಗೆ ಇಳಿಯುವುದು ಸಾಮಾನ್ಯ.

ಐದು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಬೆಂಗಳೂರಿನಲ್ಲಿ ಇಡೀ ರಾಜ್ಯ, ದೇಶದ ಹಲವು ರಾಜ್ಯಗಳ ಜನ ಇಲ್ಲಿ ವಾಸವಿದ್ದಾರೆ. ಹೀಗಾಗಿ ಇಲ್ಲಿನ ‘ಸಾಧನೆ’ ಮುಂದಿಟ್ಟುಕೊಂಡು ಮತ ಪ್ರಭಾವಿಸುವ ಯತ್ನ ಹೊಸದೇನೂ ಅಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ನಾಯಕರು ಬೆಂಗಳೂರಿನ ಅಭಿವೃದ್ಧಿ–ಸಮಸ್ಯೆಗಳನ್ನು ಚುನಾವಣೆಯಲ್ಲಿ ಯಶಸ್ಸು–ವೈಫಲ್ಯದ ದಾಳವಾಗಿ ಈ ಚುನಾವಣೆಯಲ್ಲೂ ಬಳಸುತ್ತಿವೆ. ಸಂಚಾರ ದಟ್ಟಣೆ, ಈಗ ಎದುರಾಗಿರುವ ನೀರಿನ ಸಮಸ್ಯೆಗಳಿಗೆ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳ ನೇತಾರರು ಕಾರಣರು. ಹಾಗಿದ್ದರೂ, ಆಡಳಿತಾರೂಢ ಪಕ್ಷದ ವೈಫಲ್ಯ ಎಂದೇ ಬಿಂಬಿಸುವುದು ರಾಜಕೀಯ ಪಕ್ಷಗಳ ಚಾಳಿ. ಅದು ಈಗಲೂ ಮುಂದುವರಿದಿದೆ.

ಬೆಂಗಳೂರಿನ ಅಭಿವೃದ್ಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಪಾತ್ರ–ಪಾಲಿದ್ದರೂ, ಅದನ್ನು ಒತ್ತಡ ಹೇರಿಯೇ ಪಡೆದುಕೊಳ್ಳಬೇಕಾದ ಅನಿವಾರ್ಯ ಇಲ್ಲಿದೆ. ಬಿಜೆಪಿ ಸರ್ಕಾರವಿದ್ದಾಗ ಘೋಷಿಸಿದ್ದ ಬೃಹತ್‌ ಯೋಜನೆಗಳಿಗೆ ಕಾಂಗ್ರೆಸ್‌ ಸರ್ಕಾರ ತಡೆಹಾಕಿದರೆ, ಅದೇ ರೀತಿಯ ಅಡ್ಡಗಾಲು ಹಾಕುವ ಕೆಲಸವನ್ನು ಬಿಜೆಪಿಯೂ ಮಾಡಿದೆ. ಈ ಎರಡೂ ಪಕ್ಷಗಳು ತಮ್ಮ ಅಧಿಕಾರದ ಕೊನೆಯ ಅವಧಿಯಲ್ಲಿ ಬೃಹತ್‌ ಯೋಜನೆಗಳನ್ನು ಪ್ರಕಟಿಸಿ, ‘ಕ್ರೆಡಿಟ್‌ ಲೈನ್‌’ ಪಡೆದುಕೊಂಡಿ ದ್ದರೂ, ಅವುಗಳ ಅನುಷ್ಠಾನದ ತೊಡಕನ್ನು ನಿವಾರಿಸುವಲ್ಲಿ ಯಾರೂ ಮುಂದಾಗಿಲ್ಲ ಎಂಬುದೂ ಇಲ್ಲಿನ ವಾಸ್ತವ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳು  ಐದು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿವೆ. ನಗರದಲ್ಲಾಗುವ ಅಭಿವೃದ್ಧಿ ಯೋಜನೆಗಳು ಗ್ರಾಮಾಂತರ ಕ್ಷೇತ್ರದ ಜನರ ಮೇಲೂ ಪರಿಣಾಮ ಬೀರುತ್ತವೆ. ಆದ್ದರಿಂದಲೇ, ನಗರದ ಹೃದಯಭಾಗದಿಂದ ಹೊರವಲಯದ ಪ್ರದೇಶಗಳನ್ನು ಸಂಪರ್ಕಿಸುವ ₹50 ಸಾವಿರ ಕೋಟಿ ವೆಚ್ಚದ ಸುರಂಗ ರಸ್ತೆ ‘ಪರಿಕಲ್ಪನೆ’ಯೂ ಘೋಷಣೆಯಾಗಿದೆ. ₹2 ಸಾವಿರ ಕೋಟಿ ವೆಚ್ಚ ವೈಟ್‌ ಟಾಪಿಂಗ್‌ಗೆ ಮರುಚಾಲನೆ ನೀಡಲಾಗಿದೆ. ‘ಬ್ರ್ಯಾಂಡ್‌ ಬೆಂಗಳೂರು’ ಎಂಬ ಹೆಸರಿನಡಿ ಹಳೆಯ ಯೋಜನೆಗಳಿಗೆ ಹೊಸ ವೇದಿಕೆಯಡಿ ಜನರಿಂದ ಸಲಹೆ ಪಡೆದು ಮರುಜೀವವನ್ನೂ ನೀಡಲಾಗಿದೆ. ಈ ಮೂಲಕ ‘ಬ್ರ್ಯಾಂಡ್‌’ ಘೋಷವಾಕ್ಯದಲ್ಲಿ ಹೊಸ ಬೆಂಗಳೂರನ್ನು ನಿರ್ಮಿಸುವ ‘ಕ್ರೆಡಿಟ್‌ ಲೈನ್‌’ ಅನ್ನು ಕಾಂಗ್ರೆಸ್‌ ಕಳೆದ ಎಂಟು ತಿಂಗಳಿಂದ ಮಾಡುತ್ತಿದೆ. ‘ಹಿಂದಿನ ಸರ್ಕಾರ ಕೇವಲ ಘೋಷಣೆ ಮಾಡಲಾಗಿದ್ದ ಯೋಜನೆಗಳಿಗೆ ನಾವು ಹಣ ನೀಡುತ್ತಿದ್ದೇವೆ. ಯೋಜನೆಗಳೆಲ್ಲ ನಮ್ಮವೇ’ ಎಂದು ಹೇಳಿಕೊಳ್ಳಲಾಗುತ್ತಿದೆ.

‘ಬ್ರ್ಯಾಂಡ್‌ ಬೆಂಗಳೂರು ರೂಪಿಸುವ ಯೋಜನೆ ನಮ್ಮದು. ಸಾವಿರಾರು ಕೋಟಿಯ ಅನುದಾನವನ್ನು ನೀಡಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಸೌಕರ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ನಮ್ಮ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದೆ ಕಾಮಗಾರಿಗಳಿಗೆ ತಡೆಯಾಗಿದ್ದಾರೆ’ ಎಂದು ಬಿಜೆಪಿ ನಾಯಕರು ತಮ್ಮ ಹಿಂದಿನ ಯೋಜನೆಗಳನ್ನೇ ಹೇಳುತ್ತಾ, ಮತದಾರರನ್ನು ಎತ್ತಿಕಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಘೋಷಿಸಿದ ಯೋಜನೆಗಳನ್ನು ಜನರ ಮುಂದಿಟ್ಟು ಮತ ಪಡೆದುಕೊಳ್ಳುವ ಯೋಜನೆ ಹೊಂದಿದ್ದರೂ, ನಗರದಲ್ಲಿ ಗುಣಮಟ್ಟದ ವಿದ್ಯುತ್‌, ನಿತ್ಯವೂ ಕುಡಿಯುವ ನೀರು, ಗುಂಡಿ ಕಾಣದ ರಸ್ತೆಗಳು, ಮಳೆ ನೀರು ಮನೆಗೆ ಹರಿಯದಂತೆ ತಡೆಯುವ ಚರಂಡಿ, ವಾಹನ ದಟ್ಟಣೆಯಿಲ್ಲದ ಸುಗಮ ಸಂಚಾರ ಹತ್ತಾರು ವರ್ಷಗಳಿಂದ ಇನ್ನೂ ಸಾಧ್ಯವಾಗಿಲ್ಲ. ಕನಿಷ್ಠ ಮೂಲಸೌಕರ್ಯವನ್ನು ಯಾವ ಕೊರತೆಯೂ ಇಲ್ಲದಂತೆ ನೀಡುವಲ್ಲಿ ಎಲ್ಲ ಪಕ್ಷಗಳೂ ಅಧಿಕಾರಕ್ಕೆ ಬಂದಾಗ ವಿಫಲವಾಗಿವೆ ಎಂಬುದಂತೂ ಸ್ಪಷ್ಟ. ಇದೆಲ್ಲ ಜನರ ಮನಸ್ಸಿಲ್ಲಿ ಬೇರೂರಿರುವ ವಿಷಯಗಳು ಎಂಬುದರ ಅರಿವು ಪಕ್ಷಗಳಿಗೂ ಇದೆ. ಹೀಗಾಗಿ, ಮತ ಸೆಳೆಯಲು ರಾಷ್ಟ್ರ, ವಿದೇಶಗಳ ಪ್ರಕರಣಗಳನ್ನೂ ಮತದಾರರಿಗೆ ಮುಂದಿಡುವ ಪ್ರಯತ್ನಗಳಾಗುತ್ತಿವೆ. 

ಸಾವಿರಾರು ಕೋಟಿ ವೆಚ್ಚದ ಯೋಜನೆಗಳು

ಬಿಜೆಪಿ ಹಾಗೂ ಕಾಂಗ್ರೆಸ್‌ ಸರ್ಕಾರಗಳು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಸಾವಿರಾರು ಕೋಟಿ ವೆಚ್ಚ ಯೋಜನೆಗಳನ್ನು ಪ್ರಕಟಿಸಿವೆ. ಮೂಲಸೌಕರ್ಯ ಸೇರಿದಂತೆ ಆಕರ್ಷಕ, ಹೈಟೆಕ್‌ ವ್ಯವಸ್ಥೆಯುಳ್ಳ ಸೌಲಭ್ಯಗಳ ಅನುಷ್ಠಾನಕ್ಕಾಗಿ ನೂರಾರು ಕೋಟಿ ವೆಚ್ಚದ ನೀಲನಕ್ಷೆಗಳನ್ನಷ್ಟೇ ‘ಬೃಹತ್’ ಪ್ರಮಾಣದಲ್ಲಿ ವರ್ಷಗಳಿಂದ ತೋರಿಸಲಾಗುತ್ತಿದೆ.

₹52 ಸಾವಿರ ಕೋಟಿ ವೆಚ್ಚದ 100 ಕಿ.ಮೀ ಸುರಂಗ ರಸ್ತೆ, ₹25 ಸಾವಿರ ಕೋಟಿ ವೆಚ್ಚದ 75 ಕಿ.ಮೀ ಉದ್ದದ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌), ₹17 ಸಾವಿರ ಕೋಟಿ ವೆಚ್ಚದ 208 ಕಿ.ಮೀ ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ (ಎಸ್‌ಟಿಆರ್‌ಆರ್). ಇದಲ್ಲದೆ, ವೈಟ್‌ ಟಾಪಿಂಗ್‌, ಮೇಲ್ಸೇತುವೆ, ಮಳೆಗಾಲದಲ್ಲಿ ಸಂಕಷ್ಟ ನಿವಾರಣೆ, ತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ತಂತ್ರಜ್ಞಾನ ಎಂದೆಲ್ಲ ಸಾವಿರಾರು ಕೋಟಿ ವೆಚ್ಚದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕೆಲವು ಇನ್ನೂ ಆರಂಭವೇ ಆಗಿಲ್ಲ, ಮತ್ತೆ ಕೆಲವು ನಾಲ್ಕಾರು ವರ್ಷದಿಂದ ಕುಂಟುತ್ತಲೇ ಸಾಗಿವೆ. ‘ಅನುದಾನ ಬಿಡುಗಡೆ ಆಗಿಲ್ಲ’ ಎಂಬ ಪಕ್ಷಗಳ ಪರಸ್ಪರ ವಾಗ್ದಾಳಿ ಮಾತ್ರ ನಿರಂತರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT