ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕ್ಷಾಮ ಆವರಿಸಿದ ಮೇಲೆ ಯುದ್ಧೋಪಾದಿಯ ಕ್ರಮ !

Published 5 ಏಪ್ರಿಲ್ 2024, 23:33 IST
Last Updated 5 ಏಪ್ರಿಲ್ 2024, 23:33 IST
ಅಕ್ಷರ ಗಾತ್ರ

ಬೆಂಗಳೂರು: ಜಲಕ್ಷಾಮ ನಗರವನ್ನು ಆವರಿಸಿದ ಮೇಲೆ, ಜಲಮಂಡಳಿ ಸಮರೋಪಾದಿಯಲ್ಲಿ ಜಲ ಸಂರಕ್ಷಣೆಗೆ ಮುಂದಾಗಿದೆ. ಹೀಗಾಗಿ ‘ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ‘ ಎಂಬ ಮಾತು ಜಲಮಂಡಳಿಯ ಪ್ರಸ್ತುತದ ಕಾರ್ಯವೈಖರಿಗೆ ಪೂರ್ಣಪ್ರಮಾಣದಲ್ಲಿ ಅನ್ವಯವಾಗುತ್ತದೆ..!

ಕಾವೇರಿ ನೀರಿನ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ಬೆಂಗಳೂರು ಜಲಮಂಡಳಿ, ಹಿಂದಿನ ವರ್ಷಗಳಲ್ಲಿ ಕೊಳವೆಬಾವಿಗಳು ಬತ್ತಿದ್ದರೂ, ಅಂತರ್ಜಲ ಮಟ್ಟ ಕಡಿಮೆಯಾದರೂ ಹೆಚ್ಚು ನಿಗಾವಹಿಸುತ್ತಿರಲಿಲ್ಲ. 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗಿದೆ ಎಂದರೆ, ‘ಅದು ನನ್ನ ಭಾಗದ್ದಲ್ಲ, ಬಿಬಿಎಂಪಿಯದ್ದು’ ಎಂದು ಜಾರಿಕೊಳ್ಳುತ್ತಿತ್ತು. ಆದರೆ, ಇದೀಗ ಲೋಕಸಭಾ ಚುನಾವಣೆಯ ಸಂದರ್ಭವಾಗಿರುವುದರಿಂದ ‘ಎಲ್ಲ ಸಮಸ್ಯೆಯನ್ನು ತಾನೇ ನಿರ್ವಹಿಸುತ್ತೇನೆ’ ಎಂದು ಹೇಳಿಕೊಂಡು ಪ್ರತಿನಿತ್ಯವೂ ಜಲಮಂಡಳಿ ಅಧ್ಯಕ್ಷರೇ ಬೀದಿಗಿಳಿದಿದ್ದಾರೆ. ಹೀಗಾದರೂ, ನೀರಿನ ಸಮಸ್ಯೆ ನಿವಾರಣೆಯಾಗುತ್ತಿರುವುದಕ್ಕೆ ನಾಗರಿಕರಿಗೆ ಸದ್ಯಕ್ಕೆ ಸಂತಸವಾಗಿದೆ.

ಹಿಂದೆಂದೂ ಕಾಣದಂತಹ ಜಲಕ್ಷಾಮ ಈ ಬಾರಿ ನಗರದ ಜನರನ್ನು ಬಾಧಿಸುತ್ತಿದೆ. 2022ರಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ 2023ರಲ್ಲಿ ಸಮಸ್ಯೆ ಇರಲಿಲ್ಲ. ಆದರೆ, ಕಳೆದ ವರ್ಷ ಮಳೆಯಾಗದ ಕಾರಣ ಹಾಗೂ ಅಭಿವೃದ್ಧಿಗಾಗಿ ಕೆರೆಗಳಲ್ಲಿನ ನೀರೆಲ್ಲ ಖಾಲಿ ಮಾಡಿದ್ದರಿಂದ ಅಂತರ್ಜಲ ಕುಸಿದಿದೆ. ಈ ವರ್ಷ ಮಾರ್ಚ್‌ನಲ್ಲಿಯೇ ನೀರಿನ ಸಮಸ್ಯೆ ಎದುರಾಯಿತು. ಸಮಸ್ಯೆ ಪರಿಹರಿಸಲು ಜಲಮಂಡಳಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೊಳವೆಬಾವಿ ಕೊರೆಸುವುದು, ಟ್ಯಾಂಕರ್‌ನಲ್ಲಿ ನೀರು ಪೂರೈಸುವುದು, ಖಾಸಗಿ ಟ್ಯಾಂಕರ್‌ಗಳಿಗೆ ಬಾಡಿಗೆ ನಿಗದಿ ಮಾಡುವುದು, ನಲ್ಲಿಗಳಿಗೆ ಏರಿಯೇಟರ್‌, ವಾಹನ– ಉದ್ಯಾನಗಳಿಗೆ ನೀರು ಬಳಕೆ ನಿರ್ಬಂಧಿಸುವ ಕೆಲಸ ಮಾಡತೊಡಗಿದೆ ಜಲಮಂಡಳಿ. ಅಲ್ಲದೆ, ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ, ‘ನಗರದ ಕೇಂದ್ರ ಭಾಗದ ಜನರಿಗೆ ಹಿಂದಿನಂತೆಯೇ ಜುಲೈ ಅಂತ್ಯದವರೆಗೆ ಕಾವೇರಿ ನೀರು ಪೂರೈಸಲಾಗುತ್ತದೆ. ನೀರಿನ ಕೊರತೆ ಇಲ್ಲ’ ಎಂದು ಜಲಮಂಡಳಿ ಅಧ್ಯಕ್ಷರೇ ಹೇಳಿದ ಮೇಲೆ ದಂಡ ಏಕೆ ವಿಧಿಸಬೇಕು‘ ಎಂಬ ಪ್ರಶ್ನೆಯನ್ನೂ ನಾಗರಿಕರು ಕೇಳುತ್ತಿದ್ದಾರೆ.

‘ಈ ದಂಡ, ನಿಯಮ, ಕಾಯ್ದೆಗಳೆಲ್ಲ 1964ರಲ್ಲೇ ಜಾರಿಯಾಗಿವೆ. ಅವು ಅನುಷ್ಠಾನವೇ ಆಗಿಲ್ಲ. ಇದೀಗ ಅವುಗಳನ್ನು ಜಾರಿಗೆ ತರಲಾಗಿದೆ. ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯಬಾರದು ಎಂಬ ನಿಯಮ ಹತ್ತಾರು ವರ್ಷಗಳಿಂದ ಇದೆ. ಇದೀಗ ಕಾನೂನು ಕ್ರಮದ ಬೆದರಿಕೆ ಹಾಕಲಾಗುತ್ತಿದೆ. ಆದರೂ ಕೊಳವೆಬಾವಿ ಕೊರೆಯುವುದು ನಿಂತಿಲ್ಲ. ಲೋಕಸಭೆ ಚುನಾವಣೆಯ ನಂತರವೂ ಇವೆಲ್ಲ ಕ್ರಮಗಳು ಅನುಷ್ಠಾನದಲ್ಲಿರುತ್ತವೆಯೇ? ಜಿಲ್ಲಾಡಳಿತ ನಿಗದಿಪಡಿಸಿರುವ ದರಕ್ಕೆ ಖಾಸಗಿ ಟ್ಯಾಂಕರ್‌ಗಳು ನೀರು ಪೂರೈಸುತ್ತಿಲ್ಲ. ದೂರು ನೀಡಿದರೆ ಅವರ ಮೇಲೆ ಕ್ರಮವೂ ಆಗುತ್ತಿಲ್ಲ. ಚುನಾವಣೆ ಮುಗಿದ ಮೇಲೆ ಈ ಕಷ್ಟ ಕೇಳೋರ‍್ಯಾರು’ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಚುನಾವಣೆ ಸಂದರ್ಭವಾಗಿರುವುದರಿಂದ ರಾಜಕೀಯ ಪಕ್ಷಗಳು ನಗರದಲ್ಲಿನ ನೀರಿನ ಸಮಸ್ಯೆಯನ್ನು ಬೊಟ್ಟು ಮಾಡಿ, ಪ್ರಚಾರ, ಅಪಪ್ರಚಾರ ಮಾಡುತ್ತವೆ ಎಂಬ ಮಾಹಿತಿ ಜಲಮಂಡಳಿಗೆ ಇದ್ದೇ ಇದೆ. ಹೀಗಾಗಿಯೇ, ಕಾವೇರಿ 5ನೇ ಹಂತದ ಯೋಜನೆಯಲ್ಲಾಗಿರುವ ವಿಳಂಬವನ್ನು ಮುಚ್ಚಿಕೊಳ್ಳಲು ಕೆರೆಗಳಿಗೆ ಸಂಸ್ಕರಿಸಿದ ನೀರು, ಅಂತರ್ಜಲ ವೃದ್ಧಿ, ನೀರಿನ ಮಿತಬಳಕೆ ಎಂದೆಲ್ಲ ಮಾತನಾಡುತ್ತಿದೆ. ಆದರೆ,  ಶೇ 28ರಷ್ಟು ನೀರು ಸೋರಿಕೆಯಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವ ತುರ್ತು ಕೆಲಸ ಮಾತ್ರ ಆಗಿಲ್ಲ. ಇಷ್ಟಾದರೂ, ಸಂಸ್ಕರಿತ ನೀರಿನ ಬಗ್ಗೆ ಇದೀಗ ಇಷ್ಟೊಂದು ಕಾಳಜಿ ವಹಿಸುತ್ತಿರುವ ಜಲಮಂಡಳಿ, ಜನವರಿಯಿಂದಲೇ ಆ ನೀರನ್ನು ಕೆರೆಗಳಿಗೆ ಹರಿಸಿ, ತುಂಬಿಸಿದ್ದರೆ ಈಗ ಕೊಳವೆಬಾವಿಗಳು ಬತ್ತುತ್ತಿರಲಿಲ್ಲ. ಈಗ ಕಾಡುತ್ತಿರುವ ನೀರಿನ ಅಭಾವ, ಸೃಷ್ಟಿಯಾಗಿರುವ ‘ಕೃತಕ ಅಭಾವ’ ಎರಡೂ ಬಾಧಿಸುತ್ತಿರಲಿಲ್ಲ.

ದೊಮ್ಮಲೂರಿನಲ್ಲಿ ಟ್ಯಾಂಕರ್‌ಗಳು ನೀರು ತುಂಬಿಸಿಕೊಳ್ಳುತ್ತಿರುವ ದೃಶ್ಯ
–ಪ್ರಜಾವಾಣಿ ಚಿತ್ರ
ದೊಮ್ಮಲೂರಿನಲ್ಲಿ ಟ್ಯಾಂಕರ್‌ಗಳು ನೀರು ತುಂಬಿಸಿಕೊಳ್ಳುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ
ಟ್ಯಾಂಕರ್‌ಗಳಿಂದ ‘ಉಚಿತ ನೀರು’ ಪೂರೈಸುತ್ತಿರುವ ಜಲಮಂಡಳಿ
ಟ್ಯಾಂಕರ್‌ಗಳಿಂದ ‘ಉಚಿತ ನೀರು’ ಪೂರೈಸುತ್ತಿರುವ ಜಲಮಂಡಳಿ
ಟ್ಯಾಂಕ್‌ಗಳಿಂದ ‘ಉಚಿತ ನೀರು’ ಕೊಂಡೊಯ್ಯುತ್ತಿರುವ ಮಹಿಳೆಯರು
ಟ್ಯಾಂಕ್‌ಗಳಿಂದ ‘ಉಚಿತ ನೀರು’ ಕೊಂಡೊಯ್ಯುತ್ತಿರುವ ಮಹಿಳೆಯರು

ಮತದಾನದ ನಂತರ ಏನು?

‘ಲೋಕಸಭೆ ಚುನಾವಣೆ ಇರುವುದರಿಂದಲೇ ಜಲಮಂಡಳಿ ಇಷ್ಟೊಂದು ಕಾರ್ಯಗತವಾಗಿದೆ. ಕಾವೇರಿ 5ನೇ ಹಂತದ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಸಿಲ್ಲ. ಚುನಾವಣೆಯಲ್ಲಿ ನೀರಿನ ಬಗ್ಗೆ ಆರೋಪ ಹೆಚ್ಚಾಗಬಾರದು ಎಂದು ಇಷ್ಟು ಕ್ರಿಯಾಶೀಲವಾಗಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ತಜ್ಞರಿಂದ ಬಹುಮತದ ಒಪ್ಪಿಗೆ ಇಲ್ಲದಿದ್ದರೂ ಅಂತರ್ಜಲದ ಕೊರತೆ ಇದ್ದರೂ ಇನ್ನೊಂದು ತಿಂಗಳಲ್ಲಿ 300ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲೂ ಜಲಮಂಡಳಿ ಯೋಜನೆ ಹೊಂದಿದೆ.

‘ವೇತನ ಕೊಡುವುದಕ್ಕೂ ಜಲಮಂಡಳಿಯಲ್ಲಿ ಹಣವಿಲ್ಲ ನೀರಿನ ದರ ಏರಿಸಬೇಕು’ ಎಂದೆಲ್ಲ ಹೇಳುವ ಸಂದರ್ಭದಲ್ಲಿ ನೂರಾರು ಕೋಟಿ ವೆಚ್ಚ ಮಾಡಲು ಮುಂದಾಗಿರುವುದು ಚುನಾವಣೆಯ ಗಿಮಿಕ್‌ ಮಾತ್ರ’ ಎಂಬ ಆರೋಪವೂ ವ್ಯಕ್ತವಾಗಿದೆ. ‘ಮೇ 15ಕ್ಕೆ ಕಾವೇರಿಯಿಂದ 770 ಎಂಎಲ್‌ಡಿ ನೀರು’ ಎಂದು ಬಿಂಬಿಸಲಾಗುತ್ತಿದ್ದು ಚುನಾವಣೆಯ ಮತದಾನ ಮುಗಿದ ಮೇಲೂ ಅದೇ ಗಡುವು ಇರುತ್ತದೆಯೇ’ ಎಂದು ರಾಜರಾಜೇಶ್ವರಿನಗರದ ಟಿ.ಇ. ಶ್ರೀನಿವಾಸ್‌ ಪ್ರಶ್ನಿಸಿದರು.

ಒಳಚರಂಡಿ ತ್ಯಾಜ್ಯದ ಬಗ್ಗೆ ಮಾತಿಲ್ಲ!

‘ಸಂಸ್ಕರಿತ ನೀರಿನ ಬಳಕೆ ನೀರಿನ ಉಳಿಕೆ ಮಿತವ್ಯಯದ ಬಗ್ಗೆ ಅತಿಹೆಚ್ಚು ಪ್ರಚಾರ ಮಾಡುತ್ತಿರುವ ಜಲಮಂಡಳಿ ಒಳಚರಂಡಿ ತ್ಯಾಜ್ಯದ ಬಗ್ಗೆ ಮಾತೇ ಆಡುತ್ತಿಲ್ಲ. ನಗರದಲ್ಲಿರುವ ಕೆರೆಗಳು ಮಲಿನಗೊಂಡು ಅಂತರ್ಜಲವೂ ಕಲುಷಿತಗೊಂಡಿರುವುದಕ್ಕೆ ಒಳಚರಂಡಿ ನೀರು ನೇರವಾಗಿ ಕೆರೆಗಳಿಗೆ ಹರಿಯುತ್ತಿರುವುದೇ ಪ್ರಮುಖ ಕಾರಣ ಎಂದು ತಜ್ಞರೇ ಹೇಳುತ್ತಿದ್ದಾರೆ.

ಆದರೆ ಇದೀಗ ಟ್ಯಾಂಕರ್‌ ನೀರು ಕೊಡಲು ಸಾವಿರಾರು ಟ್ಯಾಂಕ್‌ ಅಳವಡಿಸಲು ಯುದ್ಧೋಪಾದಿಯಲ್ಲಿರುವ ಜಲಮಂಡಳಿ ತಜ್ಞರನ್ನು ಜೊತೆಗಿಟ್ಟುಕೊಂಡು ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುತ್ತೇವೆ ಎಂದು ಹೇಳುತ್ತಿದೆ. ಹತ್ತಾರು ವರ್ಷಗಳಿಂದ ಒಳಚರಂಡಿ ನೀರಿನಿಂದ ಅದೇ ಕೆರೆಗಳನ್ನು ಕಲುಷಿತಗೊಳಿಸಿ ರುವುದಕ್ಕೆ ಇನ್ನೂ ಮಾಲಿನ್ಯಗೊಳಿಸುತ್ತಿರುವುದಕ್ಕೆ ಜಲಮಂಡಳಿಗೆ ದಂಡವೇ ಇಲ್ಲವೇ’ ಎಂಬ ಪರಿಸರ ಕಾರ್ಯಕರ್ತ ಗೌಡಯ್ಯ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT