ಗುರುವಾರ , ಸೆಪ್ಟೆಂಬರ್ 29, 2022
26 °C
ಪ್ರತಿಭಟನೆಯ ಎಚ್ಚರಿಕೆ

ಮದರಸಾ: ಅನಗತ್ಯ ಹಸ್ತಕ್ಷೇಪ ಬೇಡ ಎಂದ ಆಲ್‌ ಇಂಡಿಯಾ ಇಮಾಮ್ಸ್ ಕೌನ್ಸಿಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದ ಮದರಸಾಗಳು ನಿಗದಿತ ಧಾರ್ಮಿಕ ಶಿಕ್ಷಣವನ್ನಷ್ಟೇ ನೀಡುತ್ತಿವೆ. ಪರಿಶೀಲನೆಗೆ ಸದಾ ಬಾಗಿಲುಗಳು ತೆರೆದಿರುತ್ತವೆ. ಹಾಗಾಗಿ ಸರ್ಕಾರದ ಹಸ್ತಕ್ಷೇಪ ಅನಗತ್ಯ’ ಎಂದು ಆಲ್ ಇಂಡಿಯಾ ಇಮಾಮ್ಸ್‌ ಕೌನ್ಸಿಲ್ ಮುಖಂಡರು ಹೇಳಿದರು.

‘ಮದರಸಾಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆ ಮಾತ್ರ ಧಾರ್ಮಿಕ ಶಿಕ್ಷಣ ಬೋಧನೆ ಮಾಡಲಾಗುತ್ತದೆ. ನಂತರ ಶಾಲಾ–ಕಾಲೇಜು ಶಿಕ್ಷಣವನ್ನು ನೀಡಲಾಗುತ್ತಿದೆ’ ಎಂದು ಕೌನ್ಸಿಲ್‌ನ ರಾಜ್ಯ ಘಟಕದ ಅಧ್ಯಕ್ಷ ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಜ್ಯದಲ್ಲಿರುವ ಮದರಸಾಗಳು ಸಮುದಾಯದ ಸ್ವಂತ ಖರ್ಚಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಪಯುಕ್ತ ಪಠ್ಯಕ್ರಮಗಳನ್ನು ಅಳವಡಿಸಿಕೊಂಡು ಬೋಧನೆ ಮಾಡಲಾಗುತ್ತಿದೆ. ಕೆಲ ಮದರಸಾಗಳಿಗಷ್ಟೇ ವಕ್ಫ್ ಸಂಸ್ಥೆಯ ಮೂಲಕ ಅನುದಾನ ನೀಡಲಾಗುತ್ತಿದ್ದು, ಅದು ತೃಪ್ತಿಕರವಾಗಿಲ್ಲ. ವಾಸ್ತವ ಸ್ಥಿತಿ ಹೀಗಿದ್ದರೂ ಬಿಜೆಪಿ ಸರ್ಕಾರ ಮದರಸಾ ಶಿಕ್ಷಣ ವ್ಯವಸ್ಥೆಯಲ್ಲಿ ಮೂಗು ತೂರಿಸುತ್ತಿರುವುದು ಸಂವಿಧಾನದ 25, 29 ಮತ್ತು 30ನೇ ವಿಧಿಗಳ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಅಲ್ಪಸಂಖ್ಯಾತರು ಧಾರ್ಮಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದರು.

‘ಶಾಲಾ–ಕಾಲೇಜು ಆವರಣದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲವೆಂದು ಹೇಳಿದ್ದ ಸರ್ಕಾರ ಮತ್ತು ಶಿಕ್ಷಣ ಸಚಿವರು ಇಂದು ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿ ಧರ್ಮದ ಹೆಸರಿನಲ್ಲಿ ಮಕ್ಕಳನ್ನು ವಿಭಜನೆ ಮಾಡುತ್ತಿರುವುದು ಖಂಡನೀಯ’ ಎಂದು ಕೌನ್ಸಿಲ್‌ ಸದಸ್ಯ ಜಾಫರ್ ಸಾದಿಕ್ ಫೈಝಿ ಆಕ್ರೋಶ ವ್ಯಕ್ತಪಡಿಸಿದರು.

‘ಯಾವುದೇ ಕಾರಣಕ್ಕೂ ಮದರಸಾ ಶಿಕ್ಷಣದಲ್ಲಿ ಸರ್ಕಾರದ ಹಸ್ತಕ್ಷೇಪ ಸಹಿಸಲು ಸಾಧ್ಯವಿಲ್ಲ. ಒಂದು ವೇಳೆ ಮಧ್ಯ ಪ್ರವೇಶಿಸಿದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕೋಮು ರಾಜಕಾರಣ ಜೀವಂತವಾಗಿಡಲು ಪ್ರಯತ್ನ’
’ಬಿಜೆಪಿ ಸರ್ಕಾರ ಇತ್ತಿಚಿನ ದಿನಗಳಲ್ಲಿ ಧಾರ್ಮಿಕ ವಿಚಾರಗಳನ್ನು ಕೆದಕುತ್ತಾ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸುತ್ತಿದೆ. ಬಾಬಾ ಬುಡನ್‌ಗಿರಿ ದಾಖಲೆಗಳು ದರ್ಗಾದ ಪರವಾಗಿದ್ದರೂ ಮತ್ತೆ ಅದನ್ನು ವಿವಾದದ ಮಾಡುತ್ತಿದೆ. ಚಾಮರಾಜಪೇಟೆಯ ಈದ್ಗಾ ಮೈದಾನ ವಕ್ಫ್‌ ಬೋರ್ಡ್‌ ಆಸ್ತಿಯಾಗಿರುವ ಬಗ್ಗೆ ದಾಖಲೆಗಳಿದ್ದರೂ ಅನಗತ್ಯ ವಿವಾದ ಸೃಷ್ಟಿಸಲಾಗಿದೆ. ಇವೆಲ್ಲವನ್ನು ಸೂಕ್ಷ್ಮವಾಗಿ ನೋಡಿದರೆ ಬಿಜೆಪಿ ಧರ್ಮಗಳ ಮೂಲಕ ತನ್ನ ಕೋಮು ರಾಜಕಾರಣವನ್ನು ಜೀವಂತವಾಗಿಡಲು ಯೋಜನೆ ರೂಪಿಸುತ್ತಿದೆ‘ ಎಂದು ಕೌನ್ಸಿಲ್‌ ಸದಸ್ಯ ಜಾಫರ್ ಫೈಝಿ ಹೇಳಿದರು.

*
ಮದರಸಾ ಶಿಕ್ಷಣದಲ್ಲಿ ಸರ್ಕಾರದ ಹಸ್ತಕ್ಷೇಪ ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸಿಯುವ ಆರ್‌ಎಸ್‌ಎಸ್‌ನ ವ್ಯವಸ್ಥಿತ ಹುನ್ನಾರ
–ಮೌಲಾನಾ ಅತೀಕುರ‍್ರಹ್ಮಾನ್, ಆಲ್‌ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು