ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡಿ’

Published 28 ಮೇ 2024, 15:39 IST
Last Updated 28 ಮೇ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮಡಿವಾಳ, ಕ್ರೈಸ್ತ ಸಮುದಾಯ ಹಾಗೂ ಹಕ್ಕಿಪಿಕ್ಕಿ ಜನಾಂಗದವರಿಗೆ ಆದ್ಯತೆ ನೀಡಬೇಕು ಎಂದು ವಿವಿಧ ಸಂಘಟನೆಗಳು ಕಾಂಗ್ರೆಸ್‌ ಪಕ್ಷವನ್ನು ಆಗ್ರಹಿಸಿವೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ಸಿ. ನಂಜಪ್ಪ, ‘ರಾಜ್ಯದಲ್ಲಿ ಮಡಿವಾಳ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸಾಮಾಜಿಕ ಅಸಮಾನತೆ ಹಾಗೂ ಕಡಿಮೆ ಜನಸಂಖ್ಯೆ ಹೊಂದಿರುವ ಕಾರಣ ಇದುವರೆಗೂ ಸರಿಯಾದ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ’ ಎಂದು ಒತ್ತಾಯಿಸಿದರು.

‘ಎಲ್ಲ ಪಕ್ಷಗಳು ಹಿಂದುಳಿದ ಸಮುದಾಯಗಳನ್ನು ಮೂಲೆಗುಂಪು ಮಾಡಿ, ಜಾತಿ ರಾಜಕಾರಣ ಮಾಡುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮಡಿವಾಳ ಸಮುದಾಯಕ್ಕೆ ಯಾವುದೇ ಅವಕಾಶಗಳನ್ನು ನೀಡಿಲ್ಲ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಮಡಿವಾಳ ಜನಾಂಗದ ಅರ್ಹ ವ್ಯಕ್ತಿಯೊಬ್ಬರಿಗೆ ಅವಕಾಶ ನೀಡಬೇಕು’ ಎಂದು ಹೇಳಿದರು.

ಅತಿ ಸಣ್ಣ ಸಮುದಾಯಕ್ಕೆ ಅವಕಾಶ:

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ. ನಾಗರಾಜು, ‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಹೆಳವ, ಶಿಳ್ಳೆಖ್ಯಾತ, ದೊಂಬಿದಾಸ, ಮಡಿವಾಳ, ಸವಿತಾ ಸಮಾಜ, ಹಕ್ಕಿ–ಪಿಕ್ಕಿ ಸಮುದಾಯ, ಗೋದಳಿ ಹಾಗೂ ಕಾಡುಸಿದ್ಧ ಸೇರಿದಂತೆ ಅತಿ ಹಿಂದುಳಿದ ಹಾಗೂ ಅವಕಾಶ ವಂಚಿತ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡಬೇಕು’ ಎಂದು ಒತ್ತಾಯಿಸಿದರು.

ಅಲೆಮಾರಿ ಜನಾಂಗಕ್ಕೆ ಪ್ರಾತಿನಿಧ್ಯ:

ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಬಿ.ಎಲ್. ಹನುಮಂತಪ್ಪ, ‘ವಿಧಾನಸಭೆ, ವಿಧಾನ ಪರಿಷತ್‌ಗೆ ಅಲೆಮಾರಿ, ಆದಿವಾಸಿ ಸಮುದಾಯದ ಪ್ರತಿನಿಧಿಗಳು ಕಾಲಿಟ್ಟಿಲ್ಲ. ಅವರಿಗೆ ಇದುವರೆಗೂ ಇದರ ಬಗ್ಗೆ ಅರಿವೇ ಇರಲಿಲ್ಲ. ಈ ಕಾರಣಕ್ಕೆ ನಮ್ಮ ನೋವು, ಅಸಹಾಯಕತೆ ಮತ್ತು ಸಮಸ್ಯೆಗಳ ಕುರಿತು ಈ ಎರಡು ಸದನಗಳಲ್ಲಿ ಚರ್ಚಯೇ ಆಗಿಲ್ಲ. ಆದ್ದರಿಂದ, ವಿಧಾನ ಪರಿಷತ್‌ ಚುನಾವಣೆಗೆ ನಮ್ಮ ಸಮುದಾಯದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು’ ಎಂದು ಆಗ್ರಹಿಸಿದರು.

ಕ್ರೈಸ್ತರಿಗೆ ಅವಕಾಶ:

ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿಪಾಲ್‌, ‘ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕ್ರೈಸ್ತ ಸಮುದಾಯದ ಒಬ್ಬರನ್ನು ಆಯ್ಕೆ ಮಾಡಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT