ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಕೃತಿ ಆಧಾರಿತ ನಾಟಕ: 'ಮದುಮಗಳಿಗೆ' ಕಲಾಗ್ರಾಮ ಸಜ್ಜು

ಜ.20ರಿಂದ 9ಗಂಟೆಗಳ ರಾತ್ರಿ ಪೂರ್ತಿ ರಂಗ ಪ್ರಯೋಗ
Last Updated 18 ಜನವರಿ 2020, 21:49 IST
ಅಕ್ಷರ ಗಾತ್ರ

ಬೆಂಗಳೂರು:ಕುವೆಂಪು ಅವರ ಕಾದಂಬರಿ ಆಧಾರಿತ ‘ಮಲೆಗಳಲ್ಲಿ ಮದುಮಗಳು’ ರಂಗಪ್ರಯೋಗಕ್ಕೆ ರಾಷ್ಟ್ರೀಯ ನಾಟಕ ಶಾಲೆಯು (ಎನ್‌ಎಸ್‌ಡಿ) ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ವೇದಿಕೆಗಳನ್ನು ಸಿದ್ಧಗೊಳಿಸಿದೆ. ರಾತ್ರಿ ಪೂರ್ತಿ 9 ಗಂಟೆ ಅವಧಿಯ ರಂಗ ಪ್ರಯೋಗಕ್ಕೆ ಜ.20ರಂದು ಚಾಲನೆ ದೊರೆಯಲಿದೆ.

ನಾಟಕ ಈಗಾಗಲೇ 85 ಪ್ರದರ್ಶನಗಳನ್ನು ಪೂರೈಸಿದೆ. ಎನ್‌ಎಸ್‌ಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮತ್ತೆ
24 ಪ್ರದರ್ಶನಗಳನ್ನು (ಫೆ.29ರವರೆಗೆ) ಏರ್ಪಡಿಸುವ ಮೂಲಕ 109 ಪ್ರದರ್ಶನಗಳನ್ನು ಪೂರೈಸಿ, ರಾಷ್ಟ್ರಕವಿಗೆ ನಮನ ಸಲ್ಲಿಸಲು ಮುಂದಾಗಿದೆ.

ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ರಾತ್ರಿ 8.30ಕ್ಕೆ ಪ್ರಾರಂಭವಾಗುವ ಈ ನಾಟಕ ಮುಂಜಾನೆ 5.30ರವರೆಗೆ ನಡೆಯಲಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ‘ಕುವೆಂಪು ಅವರ 700 ಪುಟಗಳ ಈ ಕಾದಂಬರಿಯನ್ನು ಓದಲು ಸಾಧ್ಯವಾಗದವರಿಗೆ ಅದರ ಸತ್ವವನ್ನು ದೃಶ್ಯದ ಮೂಲಕ ಉಣಬಡಿಸುವ ಪ್ರಯತ್ನವಿದು. 19ನೇ ಶತಮಾನದ ಕೊನೆಯ ಪಾದದ ಮಲೆನಾಡಿನ ಕತೆ ಇದಾಗಿದೆ’ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ರಿಯಾಯಿತಿ: ಎನ್‌ಎಸ್‌ಡಿ ನಿರ್ದೇಶಕ ಸಿ.ಬಸವಲಿಂಗಯ್ಯ, ‘ಈ ರಂಗ ಪ್ರಯೋಗವನ್ನು 2010ರಲ್ಲಿ ಮೈಸೂರಿನ ರಂಗಾಯಣ ಪ್ರಾರಂಭಿಸಿತು.

ಅಲ್ಲಿ ಯಶಸ್ವಿಯಾಗಿ 15 ಪ್ರದರ್ಶನಗಳು ನಡೆದವು. ಬಳಿಕ 70 ಪ್ರದರ್ಶನಗಳನ್ನು ಕಲಾಗ್ರಾಮದಲ್ಲಿ ಪ್ರಸ್ತುತಪಡಿಸಲಾಗಿದೆ’ ಎಂದರು.

‘ಪ್ರದರ್ಶನಗಳನ್ನು ವೀಕ್ಷಿಸಿದವರಲ್ಲಿ ಬಹುತೇಕರು ಯುವಜನರು. ಹಿರಿಯ ನಾಗರಿಕರೂ ಉತ್ಸಾಹದಿಂದ ಬರುತ್ತಿದ್ದಾರೆ. ವಿದ್ಯಾರ್ಥಿಗಳು ಈ ನಾಟಕದ ಬಗ್ಗೆ ತಿಳಿದುಕೊಳ್ಳಬೇಕು. ಹಾಗಾಗಿ ಅವರಿಗೆ ₹ 150 ಟಿಕೆಟ್ ದರ ನಿಗದಿ ಪಡಿಸಲಾಗಿದೆ’ ಎಂದರು.

‘ಸಾಮಾನ್ಯವಾಗಿ ಸರ್ಕಾರಿ ಪ್ರಾಯೋಜಿತ ನಾಟಕಗಳಲ್ಲಿ ಮಾಡಿದ ವೆಚ್ಚ ವಾಪಸು ಬರುವುದು ಕಷ್ಟ. ಆದರೆ, ಈ ನಾಟಕ ವೀಕ್ಷಿಸಲು ಕಲಾ ರಸಿಕರು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಬರುತ್ತಿದ್ದಾರೆ.ಕಲಾವಿದರಿಗೆ ಊಟ, ವಸತಿ, ಗೌರವಧನ, ರಂಗತಾಲೀಮು, ಸೆಟ್‌ಗಳ ಜೋಡಣೆ, ಧ್ವನಿ-ಬೆಳಕು ವ್ಯವಸ್ಥೆಗೆ ಹಣ ಖರ್ಚಾಗುತ್ತಿದೆ. ಈ ಕಾರಣದಿಂದಾಗಿ ಟಿಕೆಟ್‌ ದರದಿಂದ ವೆಚ್ಚವನ್ನು ಹೊಂದಿಸುವುದು ಅನಿವಾರ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಸಾಂಸ್ಕೃತಿಕ ಸಮುಚ್ಚಯ: ತಿಂಗಳಲ್ಲಿ ಪುನಾರಂಭ
ಬೆಂಗಳೂರು:
‘ಬೆಂಕಿ ಅವಘಡದಿಂದ ಹಾನಿಗೊಳಗಾಗಿದ್ದ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಒಂದು ತಿಂಗಳಲ್ಲಿ ಇಲ್ಲಿ ಚಟುವಟಿಕೆಯನ್ನು ಪುನಾರಂಭ ಮಾಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ತಿಳಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಕಲಾಗ್ರಾಮಕ್ಕೆ ಜೀವ ತುಂಬುವ ನಿಟ್ಟಿನಲ್ಲಿ ನೂತನ ಸ್ಪರ್ಶ ಕಾರ್ಯವನ್ನು ಪ್ರಾರಂಭಿಸಲಾಗುತ್ತದೆ. ಕಲಾವಿದರಿಗೆ ಸಮಸ್ಯೆಯಾಗದ ರೀತಿಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗುವುದು. ಮುಂದಿನ ಒಂದು ವರ್ಷದಲ್ಲಿ ಕಲಾಗ್ರಾಮವನ್ನು ಚಟುವಟಿಕೆಯ ತಾಣವನ್ನಾಗಿಸುತ್ತೇವೆ. ಆವರಣ ಸ್ವಚ್ಛತೆ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಕಲಾಗ್ರಾಮದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಬೇಡಿಕೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

2018 ಡಿಸೆಂಬರ್ ತಿಂಗಳಲ್ಲಿ ಶಾರ್ಟ್ ಸರ್ಕೀಟ್‌ನಿಂದಸಾಂಸ್ಕೃತಿಕ ಸಮುಚ್ಚಯದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಧ್ವನಿ–ಬೆಳಕಿನವ್ಯವಸ್ಥೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ವರ್ಷ ಕಳೆದರೂ ದುರಸ್ತಿ ನಡೆಯದ ಹಿನ್ನೆಲೆಯಲ್ಲಿ ಕಲಾವಿದರು ರವಿಂದ್ರ ಕಲಾಕ್ಷೇತ್ರದ ಮುಂದೆ ಕಳೆದ ಮೇ ತಿಂಗಳಿನಲ್ಲಿ ಪ್ರತಿಭಟನೆ ನಡೆಸಿದ್ದರು. ಇದನ್ನು ದುರಸ್ತಿಪಡಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಇಲಾಖೆಯನ್ನು ಒತ್ತಾಯಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT