ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದ ಸೇತುವೆ ಒಡೆದು ಬಿಟ್ಟು ಹೋದರು... ಎರಡು ತಿಂಗಳಿಂದ ಸಂಪರ್ಕ ಕಡಿತ

ಮಲ್ಲೇಶ್ವರ–ಗುಟ್ಟಹಳ್ಳಿ ಮುಖ್ಯರಸ್ತೆ
Last Updated 2 ಮಾರ್ಚ್ 2022, 23:00 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದಿಂದ ಗುಟ್ಟಹಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ರಾಜಕಾಲುವೆಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸಲು ಹಳೇ ಸೇತುವೆ ಒಡೆದು ಎರಡು ತಿಂಗಳುಗಳು ಕಳೆದಿವೆ. ಸೇತುವೆಯನ್ನು ಒಡೆಯುವಾಗ ಬಿಬಿಎಂಪಿ ಅಧಿಕಾರಿಗಳಿಗೆ ಇದ್ದ ತುರ್ತು, ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲು ಇಲ್ಲ. ಸಂಪರ್ಕ ಕಡಿತಗೊಂಡಿದ್ದರಿಂದ ಇಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ.

ಮಲ್ಲೇಶ್ವರದಿಂದ ವೈಯಾಲಿಕಾವಲ್, ಗುಟ್ಟಹಳ್ಳಿ ಮತ್ತು ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು. ದತ್ತಾತ್ರೇಯ ದೇವಸ್ಥಾನದ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆಗೆ ಅಡ್ಡಲಾಗಿ ಸೇತುವೆಯೊಂದು ಇತ್ತು. ಹೊಸ ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಹಳೇ ಸೇತುವೆಯನ್ನು ಒಡೆದಿರುವ ಬಿಬಿಎಂಪಿ ಅಧಿಕಾರಿಗಳು, ಕಾಮಗಾರಿ ಆರಂಭಿಸಿಯೇ ಇಲ್ಲ.

ಈ ರಸ್ತೆಯ ಎರಡೂ ಬದಿಯಲ್ಲಿ ಅಂಗಡಿಗಳಿವೆ. ಸೇತುವೆ ಒಡೆದ ಬಳಿಕ ಬಗೆದು ತಗೆದ ಮಣ್ಣನ್ನು ಅಂಗಡಿಗಳ ಬಾಗಿಲಿಗೇ ಸುರಿಯಲಾಗಿದೆ. ತಮ್ಮ ಅಂಗಡಿಗಳಿಗೆ ತಾವೇ ಕಷ್ಟಪಟ್ಟು ಹೋಗಬೇಕಾದ ಸ್ಥಿತಿ ವ್ಯಾಪಾರಿಗಳದ್ದು. ಅಂಗಡಿಗಳನ್ನು ತೆರೆದಿಟ್ಟರೂ ಗ್ರಾಹಕರೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ದಿನವಿಡೀ ಕಾದು ಬರಿಗೈನಲ್ಲಿ ಮನೆಗೆ ಮರಳುವ ಸ್ಥಿತಿ ಇದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ರಸ್ತೆಯಲ್ಲಿ ಎತ್ತರಕ್ಕೆ ಮಣ್ಣು ಸುರಿದಿರುವುದು ಕಳ್ಳಕಾಕರಿಗೆ ಅನುಕೂಲ ಆಗಿದೆ. ಎರಡು ತಿಂಗಳಲ್ಲೇ ಮೂರು ಅಂಗಡಿಯ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ಸುಸ್ಥಿತಿಯಲ್ಲೇ ಇದ್ದ ಸೇತುವೆಯನ್ನು ಒಡೆದು ಹೋದ ಅಧಿಕಾರಿಗಳು ಮತ್ತೆ ಇತ್ತ ತಿರುಗಿಯೂ ನೋಡಿಲ್ಲ. ನಮ್ಮ ಕಷ್ಟ ಯಾರಿಗೆ ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ತಕ್ಷಣಕ್ಕೆ ಸಮಸ್ಯೆ ಹೇಳಿಕೊಳ್ಳೋಣ ಎಂದರೆ ಪಾಲಿಕೆ ಸದಸ್ಯರೂ ಇಲ್. ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಅವರ ಬಳಿ ಸಮಸ್ಯೆ ಹೇಳಿಕೊಳ್ಳೋಣ ಎಂದರೆ, ಸಚಿವರಾದ ಬಳಿಕ ಅವರೂ ಸಿಗುತ್ತಿಲ್ಲ. ಅವರ ಕಚೇರಿಗೆ ಮನವಿ ಪತ್ರ ಕೊಟ್ಟು ಬಂದರೂ ಪ್ರಯೋಜನವಾಗಿಲ್ಲ’ ಎಂದು ಈ ಪರಿಸರದ ಅಂಗಡಿ ಮಾಲೀಕರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ನೆಲದಡಿ ಹಾದು ಹೋಗಿರುವ ವಿದ್ಯುತ್ ಮಾರ್ಗದ ಬದಲಾವಣೆಗೆ ಬೆಸ್ಕಾಂಗೆ ಮನವಿ ಮಾಡಲಾಗಿದೆ. ಇಲ್ಲಿನ ವಿದ್ಯುತ್ ಮಾರ್ಗ ಸ್ಥಳಾಂತರ ಆಗದ ಹೊರತು ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ನೆಲದಡಿ ಕೇಬಲ್ ಹಾದು ಹೋಗಿರುವ ವಿಷಯ ಬಿಬಿಎಂಪಿ ಅಧಿಕಾರಿಗಳಿಗೆ ಮೊದಲೇ ಗೊತ್ತಿರಲಿಲ್ಲವೇ? ಈ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಬಳಿಕವೇ ಸೇತುವೆ ಒಡೆಯಬಹುದಿತ್ತಲ್ಲವೇ’ ಎಂಬುದು ಸ್ಥಳೀಯರ ಪ್ರಶ್ನೆ.

‘ತಾತ್ಕಾಲಿಕವಾಗಿ ಜನ ಸಂಚಾರಕ್ಕೆ ಅನುಕೂಲ ಆಗುವಂತೆ ಕನಿಷ್ಠ ಕಾಲು ಸೇತುವೆಯನ್ನಾದರೂ ನಿರ್ಮಿಸಿಕೊಡುವಂತೆ ಕೈಮುಗಿದು ಮನವಿ ಮಾಡುತ್ತಿದ್ದೇವೆ. ಅದನ್ನೂ ಮಾಡದೆ ಕಿಲೋ ಮೀಟರ್ ಸುತ್ತಾಡಿಕೊಂಡು ಬರಬೇಕಾದ ಅನಿವಾರ್ಯ ಸೃಷ್ಟಿಸಿದ್ದಾರೆ. ಸಮಸ್ಯೆ ಯಾರಿಗೆ ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ವರ್ತಕರು ನೋವಿನಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT