ಮಂಗಳವಾರ, ಜನವರಿ 18, 2022
23 °C
ಮಳೆ ಬಂದರೆ ಹೊಳೆಯಂತಾಗುವ ಜಂಕ್ಷನ್ l ಪಾದಚಾರಿ ಮಾರ್ಗದಲ್ಲೇ ವ್ಯಾಪಾರ l ನಿತ್ಯವೂ ದಟ್ಟಣೆ ಕಿರಿಕಿರಿ

‘ಸಂಪಿಗೆ’ ಹಾದಿಯಲ್ಲಿ ‘ಸಂಚಾರ’ ತೊಳಲಾಟ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಕ್ಕಟ್ಟಾದ ರಸ್ತೆಯಲ್ಲಿ ಗುಂಡಿಗಳ ದರ್ಶನ. ಮಳೆ ಬಂದರೆ ಹೊಳೆಯಂತಾಗುವ ಜಂಕ್ಷನ್. ಪಾದಚಾರಿ ಮಾರ್ಗದಲ್ಲೇ ತಾತ್ಕಾಲಿಕ ಮಳಿಗೆ ತೆರೆದು ವ್ಯಾಪಾರ. ನಡಿಗೆ ಮಾರ್ಗ ಬಿಟ್ಟು ರಸ್ತೆಯಲ್ಲೇ ಸಂಚರಿಸುವ ಜನ. ಯಾರಿಗೆ ಏನಾಗುತ್ತದೆಯೇ? ಎಂಬ ತೊಳಲಾಟದಲ್ಲಿ ಮುಂದೆ ಸಾಗುವ ಚಾಲಕರು. ಸಾಲುಗಟ್ಟಿ ನಿಲ್ಲುವ ವಾಹನಗಳಿಂದ ನಿತ್ಯವೂ ವಿಪರೀತ ದಟ್ಟಣೆ.

ಇದು, ಮಲ್ಲೇಶ್ವರ ಸಂಪಿಗೆ ರಸ್ತೆಯ ಸಂಚಾರ ವ್ಯವಸ್ಥೆಯ ಸ್ಥಿತಿ. ಶೇಷಾದ್ರಿಪುರ ರೈಲ್ವೆ ಫ್ಲಾಟ್‌ಫಾರಂ ರಸ್ತೆಯ ಶಿರೂರ್ ಜಂಕ್ಷನ್‌ನಿಂದ ಆರಂಭವಾಗುವ ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆಗೆ ಸೇರಿ ಅಂತ್ಯವಾಗುತ್ತದೆ. ಮಲ್ಲೇಶ್ವರದ ಪ್ರಮುಖ ರಸ್ತೆ ಎನಿಸಿಕೊಳ್ಳುವ ಸಂಪಿಗೆ ರಸ್ತೆಯಲ್ಲಿ ಹಲವು ವರ್ಷಗಳಿಂದಲೇ ಸಂಚಾರ ಕಿರಿಕಿರಿ ಇದ್ದು, ಇದಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಅರಣ್ಯ ಭವನ, ಶಾಸಕರ ಕಚೇರಿ, ಮಂತ್ರಿ ಸ್ಕ್ವೇರ್ ಮಾಲ್, ಮಂತ್ರಿ ಗ್ರೀನ್ಸ್ ಅಪಾರ್ಟ್‌ಮೆಂಟ್ ಸಮುಚ್ಚಯ, ಚಿತ್ರಮಂದಿರ, ವಿವಿಧ ಕಂಪನಿಗಳ ಬಟ್ಟೆ– ಆಭರಣ ಮಳಿಗೆಗಳು, ಹೋಟೆಲ್‌ಗಳು ಈ ಮಾರ್ಗದಲ್ಲಿವೆ. ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಹೂವಿನ ಮಾರುಕಟ್ಟೆ, ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ, ಈ ರಸ್ತೆಯಲ್ಲಿ ಮಾತ್ರ ಸಾರ್ವಜನಿಕರು ನೆಮ್ಮದಿಯಿಂದ ಸಂಚರಿಸಲು ಸಾಧ್ಯವಾಗುತ್ತಿಲ್ಲ.

ಕಾಮಗಾರಿ ಹೆಸರಿನಲ್ಲಿ ರಸ್ತೆಯ ಬಹುತೇಕ ಕಡೆ ಗುಂಡಿಗಳನ್ನು ಅಗೆದು, ಅವೈಜ್ಞಾನಿಕ ರೀತಿಯಲ್ಲಿ ಮುಚ್ಚಲಾಗಿದೆ. ಅಂಥ ಜಾಗದಲ್ಲಿ ಗುಂಡಿಗಳು ಹೆಚ್ಚಾಗಿದ್ದು, ವಾಹನ ಸವಾರಿ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಗುಂಡಿಯಿಂದಾಗಿ ದ್ವಿಚಕ್ರ ವಾಹನ ಸವಾರರು, ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳೂ ನಿತ್ಯವೂ ನಡೆಯುತ್ತಿರುವುದಾಗಿ ಸ್ಥಳೀಯರು ಹೇಳುತ್ತಾರೆ.

‘ಗುಂಡಿ ಬಿದ್ದ ಸ್ಥಳದಲ್ಲಿ ತಾತ್ಕಾಲಿಕ ವಾಗಿ ಕಲ್ಲು– ಕಾಂಕ್ರಿಟ್ ಮಿಶ್ರಣದ ತೇಪೆ ಹಾಕಿ ಹೋಗುತ್ತಾರೆ. ಮಳೆ ಬಂದರೆ ಹಾಗೂ ವಾಹನಗಳ ಓಡಾಟ ಹೆಚ್ಚಾದರೆ ತೇಪೆ ಕಿತ್ತು ಹೋಗುತ್ತದೆ. ಪುನಃ ಗುಂಡಿಗಳು ರಾರಾಜಿಸುತ್ತದೆ’ ಎಂದು ಆಭರಣ ಮಳಿಗೆಯೊಂದರ ವ್ಯವಸ್ಥಾಪಕ ರಾಮ್‌ಲಾಲ್‌ ಹೇಳಿದರು.

ಬಟ್ಟೆ ಮಾರಾಟ ಮಳಿಗೆ ವ್ಯಾಪಾರಿ ಆರ್. ಧನುಷ್, ‘ಜನದಟ್ಟಣೆ ಹೆಚ್ಚಿರುವ ರಸ್ತೆ ಇದು. ವ್ಯಾಪಾರವೂ ಚೆನ್ನಾಗಿದೆ. ಜನರು ಬಂದು ಹೋಗುವ ರಸ್ತೆಯೇ ಹದಗೆಡುತ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಜನರ ನಡಿಗೆಗೆ ಸಿಗದ ಪಾದಚಾರಿ ಮಾರ್ಗ: ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗ ವಿದ್ದು, ವ್ಯಾಪಾರಿಗಳು ಅದನ್ನು ಅತಿಕ್ರಮಿಸಿಕೊಂಡಿದ್ದಾರೆ. ಅಕ್ರಮವಾಗಿ ತಾತ್ಕಾಲಿಕ ಮಳಿಗೆಗಳನ್ನು ಇಟ್ಟು ಕೊಂಡು, ವ್ಯಾಪಾರ ಮಾಡುತ್ತಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸಲು ಸಾರ್ವಜನಿಕರಿಗೆ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ.

ರಸ್ತೆಯಲ್ಲಿ ವಾಹನಗಳ ಮಧ್ಯದಲ್ಲೇ ಜನ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಕೆಲವರು ಪಾದಚಾರಿ ಮಾರ್ಗದಲ್ಲೇ ನಿಂತುಕೊಂಡು ತಮಗಿಷ್ಟದ ವಸ್ತುಗಳನ್ನು ಖರೀದಿಸುವ ದೃಶ್ಯ ಸಾಮಾನ್ಯ.

'ಅಗತ್ಯ ವಸ್ತುಗಳನ್ನು ತರಲು ರಸ್ತೆಗೆ ಹೋದರೆ, ನಿಗದಿತ ಅಂಗಡಿಗೆ ಹೋಗಲು ಜಾಗವೇ ಇರುವುದಿಲ್ಲ. ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡದಂತೆ ಹೇಳಿದರೆ, ವ್ಯಾಪಾರಿಗಳು ನಮ್ಮ ಮೇಲೆಯೇ ಹರಿಹಾಯುತ್ತಿದ್ದಾರೆ. ಇದೇ ಕಾರಣಕ್ಕೆ ಜಗಳಗಳೂ ನಡೆಯುತ್ತಿವೆ’ ಎಂದು ಸ್ಥಳೀಯ ನಿವಾಸಿ ಕಮಲಮ್ಮ ಹೇಳಿದರು.

ಮಲ್ಲೇಶ್ವರ ನಿವಾಸಿ ಎಂ. ಸುಲೋಚನಾ, ‘ಪಾದಚಾರಿ ಮಾರ್ಗ ಅತಿಕ್ರಮಣವಾಗಿದ್ದರಿಂದ ಜನ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ದಟ್ಟಣೆಗೆ ಪ್ರಮುಖ ಕಾರಣ’ ಎಂದರು.

ಶಾಸಕರ ಕಚೇರಿ ರಸ್ತೆಯಲ್ಲೇ ನೀರು: ಸಂಪಿಗೆ ರಸ್ತೆಗೆ ಹೊಂದಿಕೊಂಡಿರುವ ಅಡ್ಡರಸ್ತೆಯಲ್ಲಿ ಶಾಸಕರ ಭವನ ಹಾಗೂ ಅರಣ್ಯ ಭವನವಿದ್ದು, ಅದರ ಪಕ್ಕವೇ ರಾಜಕಾಲುವೆ ಹರಿಯುತ್ತಿದೆ. ಮಳೆ ಬಂದ ಸಂದರ್ಭದಲ್ಲಿ ಕಾಲುವೆಯ ತುಂಬಿ ರಸ್ತೆಯಲ್ಲಿ ಹರಿಯುತ್ತಿದ್ದು, ಇಡೀ ರಸ್ತೆ ಹೊಳೆಯಂತಾಗುತ್ತಿದೆ.

‘ಮಳೆ ಬಂದಾಗಲೆಲ್ಲ ಶಾಸಕರ ಕಚೇರಿ ರಸ್ತೆಯಿಂದ ಹರಿದು ಬರುವ ನೀರು, ಶಿರೂರ್ ಪಾರ್ಕ್‌ ಜಂಕ್ಷನ್‌ನಲ್ಲಿ ಅಡಿಯಷ್ಟು ನಿಲ್ಲುತ್ತಿದೆ. ಇಂಥ ನೀರಿನಲ್ಲೇ ಅನಿವಾರ್ಯವಾಗಿ ವಾಹನಗಳು ಸಂಚರಿಸುವ ಸ್ಥಿತಿ ಇದೆ. ಕೆಲ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಶಾಸಕರ ಕಚೇರಿ ರಸ್ತೆಯಲ್ಲೇ ಸಮಸ್ಯೆಗಳು ಇದ್ದು, ಶಾಶ್ವತ ಪರಿಹಾರ ಸಿಗುತ್ತಿಲ್ಲ’ ಎಂದು ಸ್ಥಳೀಯರು ದೂರಿದರು.

‘ಪ್ರತಿ ಸಭೆಯಲ್ಲೂ ಪ್ರಸ್ತಾಪ’

‘ಬಿಬಿಎಂಪಿ ಅಧಿಕಾರಿಗಳ ಜೊತೆ ನಡೆಯುವ ಪ್ರತಿ ಸಭೆಯಲ್ಲೂ ಸಂಪಿಗೆ ರಸ್ತೆ ಬಗ್ಗೆ ಪ್ರಸ್ತಾಪಿಸಲಾಗುತ್ತಿದೆ. ಸಮಸ್ಯೆಗಳ ಪಟ್ಟಿಯನ್ನೂ ಅಧಿಕಾರಿಗಳಿಗೆ ನೀಡುತ್ತಿದ್ದೇವೆ. ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತೀರಾ ಅಪಾಯಕಾರಿ ಗುಂಡಿಗಳನ್ನು ನಮ್ಮ ಸಿಬ್ಬಂದಿಯೇ ಸ್ವಯಂಪ್ರೇರಿತವಾಗಿ ಮುಚ್ಚುತ್ತಿದ್ದಾರೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಿಜೆಪಿ ಕಚೇರಿಗೂ ದಾರಿ’

‘ಬಿಜೆಪಿ ಕಚೇರಿಯೂ ಸಂಪಿಗೆ ರಸ್ತೆಗೆ ಹೊಂದಿಕೊಂಡಿರುವ ಅಡ್ಡರಸ್ತೆಯಲ್ಲಿದೆ. ಮುಖ್ಯಮಂತ್ರಿ, ಸಚಿವರು ಹಾಗೂ ಮುಖಂಡರು ಸಾಕಷ್ಟು ಬಾರಿ ಇದೇ ರಸ್ತೆಯಲ್ಲೇ ಸುತ್ತಾಡುತ್ತಾರೆ. ಇಷ್ಟಾದರೂ ರಸ್ತೆ ಸುಧಾರಿಸಿಲ್ಲ’ ಎಂದು ಸ್ಥಳೀಯ ನಿವಾಸಿ ಮಹೇಶ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು