ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ನಿವಾರಣೆ ಸವಾಲು: ಸಚಿವ ಶರಣಪ್ರಕಾಶ ಪಾಟೀಲ ಕಳವಳ

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಕಳವಳ
Published 30 ಜನವರಿ 2024, 14:59 IST
Last Updated 30 ಜನವರಿ 2024, 14:59 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳು ಮತ್ತು ಮಹಿಳೆಯರು ಹೆಚ್ಚಾಗಿ ಅಪೌಷ್ಟಿಕತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಪೌಷ್ಟಿಕ ಆಹಾರ ವಿತರಣೆ ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಕೌಶಲ್ಯಾಭಿವೃದ್ಧಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದರು. 

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಆಹಾರ ಪೌಷ್ಟಿಕತೆ, ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಅನಕ್ಷರತೆ ಮತ್ತು ಬಡತನ ಈಗಲೂ ಇದೆ. ಬಡವರಿಗೆ ಪೌಷ್ಟಿಕ ಆಹಾರ ಅಗತ್ಯ ಪ್ರಮಾಣದಲ್ಲಿ ಸಿಗುತ್ತಿಲ್ಲ. ಹೀಗಾಗಿ, ಮಕ್ಕಳಲ್ಲಿನ ಪೌಷ್ಟಿಕಾಂಶದ ಕೊರತೆ ನೀಗಿಸಲು ಸರ್ಕಾರವು ಶಾಲೆಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ ವಿತರಿಸುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು ಮತ್ತು ಚಿಕ್ಕಿ ನೀಡಲಾಗುತ್ತಿದೆ. ಇಷ್ಟಾಗಿಯೂ ಹೆಚ್ಚುತ್ತಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸುವುದು ಸವಾಲಾಗಿದೆ’ ಎಂದು ಹೇಳಿದರು.

‘ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ‘ಅನಿಮಿಯ ಮುಕ್ತ ಪೌಷ್ಟಿಕ ಕರ್ನಾಟಕ’ (ಎಎನ್‍ಪಿಕೆ) ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಆರೋಗ್ಯ ಸುಧಾರಣೆಗೆ ಇದು ಸಹಕಾರಿಯಾಗಿದೆ. ಯಾವುದೇ ಒಂದು ಯೋಜನೆ ಅಥವಾ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಮಹಿಳೆಯರ ಪಾತ್ರ ಮುಖ್ಯವಾಗುತ್ತದೆ. ಈ ಹಿಂದೆ ಎಸ್.ಎಂ.ಕೃಷ್ಣ ಅವರು ಪ್ರಾರಂಭಿಸಿದ್ದ ‘ಸ್ತ್ರೀ ಶಕ್ತಿ ಸ್ವಸಹಾಯ ಗುಂಪು’ಗಳು ಗ್ರಾಮೀಣ ಭಾಗದ ಆರ್ಥಿಕ ಸುಧಾರಣೆಗೆ ಮುನ್ನುಡಿ ಬರೆದಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

‘ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸ್ವಸಹಾಯ ಸಂಘಗಳು ಸೇರಿ ಅನೇಕ ಸಂಘ ಸಂಸ್ಥೆಗಳು ಆರ್ಥಿಕ ಸ್ವಾವಲಂಬನೆ, ಮಹಿಳೆಯರ ಸಬಲೀಕರಣಕ್ಕೆ ಒತ್ತು ಕೊಟ್ಟಿವೆ. ಇಂದಿನ ಸಮಾಜಕ್ಕೆ ಇಂತಹ ಸಂಘಗಳ ಅಗತ್ಯವಿದೆ’ ಎಂದರು. 

ಗಮನ ಸೆಳೆದ ವಸ್ತು ಪ್ರದರ್ಶನ: ಕಾರ್ಯಾಗಾರದ ಪ್ರಯುಕ್ತ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಎಲ್ಲರ ಗಮನಸೆಳೆಯಿತು. ಕರ್ನಾಟಕ, ಅಸ್ಸಾಂ, ಸಿಕ್ಕಿಂ, ನಾಗಾಲ್ಯಾಂಡ್, ಮಿಜೋರಾಂ, ಪಶ್ಚಿಮ ಬಂಗಾಳ, ಮಣಿಪುರ, ಕೇರಳ ಸೇರಿ 19 ರಾಜ್ಯಗಳ ಮಳಿಗೆಗಳು ಪ್ರದರ್ಶನದಲ್ಲಿ ಇದ್ದವು. ಸ್ಥಳೀಯ ಉತ್ಪನ್ನಗಳಿಂದ ತಯಾರಿಸಿದ ಪೌಷ್ಟಿಕ ಆಹಾರೋತ್ಪನ್ನ ಹಾಗೂ ತೆಂಗಿನ ಎಣ್ಣೆ ಸೇರಿ ವಿವಿಧ ವಾಣಿಜ್ಯೋತ್ಪನ್ನಗಳು ಪ್ರದರ್ಶನದಲ್ಲಿ ಇದ್ದವು. 

ಕೌಶಲ್ಯಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹದೇವನ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸ್ಮೃತಿ ಶರಣ್, ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕಿ ಪಿ.ಐ.ಶ್ರೀವಿದ್ಯಾ, ಕೆ.ಎಂ.ಎ.ಎಸ್ ಮುಖ್ಯ ನಿರ್ವಹಣಾಧಿಕಾರಿ ಅನುಪಮಾ ಪಾಲ್ಗೊಂಡಿದ್ದರು. 

‘ಲಾಬಿಗೆ ಅವಕಾಶ ನೀಡಿಲ್ಲ’

‘ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಹುದ್ದೆಗೆ 22 ಅರ್ಜಿ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 11 ಅರ್ಜಿಗಳ ಕಿರುಪಟ್ಟಿಯನ್ನು ಇಲಾಖೆ ತಯಾರಿಸಿತ್ತು. ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಲಾಬಿಗೆ ಅವಕಾಶ ನೀಡಿಲ್ಲ. ಡಾ.ಸಿ.ಎನ್. ಮಂಜುನಾಥ್ ಅವರು ಇದೇ 31ರಂದು ನಿವೃತ್ತರಾಗುತ್ತಾರೆ. ನಿರ್ದೇಶಕರ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಭೆ ಕರೆದಿದ್ದಾರೆ. ಇದೇ ಸಭೆಯಲ್ಲಿ ಮುಂದಿನ ನಿರ್ದೇಶಕರು ಯಾರೆಂದು ನಿರ್ಧಾರವಾಗುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು. ‘ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನೆಪ್ರೊ ಯುರಾಲಜಿ ಸಂಸ್ಥೆಯ ನಿರ್ದೇಶಕರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖೆ ರಚಿಸಿದ್ದ ಆಂತರಿಕ ಸಮಿತಿಗಳು ವರದಿ ಸಲ್ಲಿಸಿವೆ. ಈ ವರದಿಯ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT