ಸೋಮವಾರ, ಜನವರಿ 27, 2020
23 °C

ಮಂಗಳೂರು ಗಲಭೆ: ನ್ಯಾಯಾಂಗ ತನಿಖೆಗೆ ಖಾದರ್ ಒತ್ತಾಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾನೂನು ಸುವ್ಯವಸ್ಥೆ ನಿಭಾಯಿಸಲು ವಿಫಲವಾಗಿರುವ ರಾಜ್ಯ ಸರ್ಕಾರ ಅಲ್ಪಸಂಖ್ಯಾತರು ಮತ್ತು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ವ್ಯವಸ್ಥಿತ ಸಂಚಾಗಿ ಮಂಗಳೂರು ಗಲಭೆಯನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಶಾಸಕ ಯು.ಟಿ.ಖಾದರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಸಮಸ್ಯೆ ಅಥವಾ ಗೊಂದಲ ಉದ್ಭವಿಸಿದಾಗ ಸಂಬಂಧಿಸಿದವರ ಜೊತೆಗೆ ಕುಳಿತು ಅಧಿಕಾರದಲ್ಲಿರುವ ಮಾತನಾಡಬೇಕು. ಅದು ಬಿಟ್ಟು ಪ್ರತಿಭಟನೆ ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು.

ಮಂಗಳೂರು ಗಲಭೆಗಳ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿ ಮೂಲಕ ನ್ಯಾಯಾಂಗ ತನಿಖೆ ಮಾಡಿಸಬೇಕು. ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್‌ ತನಿಖೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ ಯಡಿಯೂರಪ್ಪ. ಇದನ್ನು ನಾವು ಒಪ್ಪುವುದಿಲ್ಲ ಎಂದರು.

ಮಂಗಳೂರು ಗಲಭೆಗಳಿಗೆ ಬಿಜೆಪಿಯ ಒಳಜಗಳಗಳೇ ಕಾರಣ ಎಂಬ ಅನುಮಾನ ನನ್ನದು. ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಲು ಅವರ ಪಕ್ಷದವರೇ ಇಂಥ ಕೆಲಸ ಮಾಡಿರಬಹುದು ಎಂದು ವಿಶ್ಲೇಷಿಸಿದರು.

ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ಹೊಣೆ ಎಂದರೆ ಇವರು ಇರುವುದು ಏಕೆ? ನನ್ನ ಮೇಲೆ ಮತ್ತು ಕಾಂಗ್ರೆಸ್ ಮೇಲೆ ವ್ಯರ್ಥ ಆರೋಪ ಮಾಡುವುದು ಬಿಟ್ಟು ಸಮಾಜದಲ್ಲಿ ಶಾಂತಿ ಕಾಪಾಡಿ ಎಂದು ಆಗ್ರಹಿಸಿದರು.

ಪೌರತ್ವ ಮಸೂದೆ ಬೆಂಬಲಿಸುವವರು ಬಿಜೆಪಿಯವರು ಎಂತಲೂ, ವಿರೋಧಿಸುವವರು ಕಾಂಗ್ರೆಸ್ ಬೆಂಬಲಿಗರು ಎಂದು ಹೇಳ್ತಿದ್ದಾರೆ. ಇವರು ಕೆಲಸದಲ್ಲಿ ಅಲ್ಲ, ತಪ್ಪು ಮಾಹಿತಿ ಕೊಡುವುದರಲ್ಲಿ ಮಾತ್ರ ನಂಬರ್ 1 ಎಂದು ಛೇಡಿಸಿದರು.

ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸಿ ಕೇವಲ ಕಾಂಗ್ರೆಸ್ ಮಾತ್ರವೇ ಪ್ರತಿಭಟನೆ ಮಾಡ್ತಿಲ್ಲ. ಅಸ್ಸಾಂ, ತ್ರಿಪುರ, ಬಿಹಾರ, ಒಡಿಶಾದಲ್ಲಿ ಪ್ರತಿಭಟನೆ ಮಾಡ್ತಿರೋದು ಯಾರು? ಕೇರಳದಲ್ಲಿ ಈ ಕಾಯ್ದೆ ಒಪ್ಪುತ್ತಿಲ್ಲ. ಅಲ್ಲೇನು ಕಾಂಗ್ರೆಸ್ ಆಡಳಿತವಿದೆಯೇ ಎಂದು ಪ್ರಶ್ನಿಸಿದರು.

ಅಧಿಕಾರ ಮತ್ತು ರಾಜಕೀಯ ಕಾರಣಗಳಿಗಾಗಿ ಬಿಜೆಪಿ ದೇಶದ ಹಿತ ಬಲಿಕೊಡಲು ಹಿಂದೆಮುಂದೆ ನೋಡುವುದಿಲ್ಲ. ಕಾಶ್ಮೀರದಲ್ಲಿ ಪಿಡಿಪಿ ಜೊತೆಗೆ ಅಧಿಕಾರ ನಡೆಸಿದ್ದು ಯಾರು? ಪಾಕಿಸ್ತಾನಕ್ಕೆ ಬಸ್, ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ಯಾರು? ಕ್ರಿಕೆಟ್ ಪಂದ್ಯಕ್ಕೆ ಅವಕಾಶ ಕೊಟ್ಟಿದ್ದು ಯಾರು ಎಂದು ಕೇಳಿದರು.

ಅಧಿಕಾರ ಉಳಿಸಿಕೊಳ್ಳಲು ಬೇಕಾದ ತಂತ್ರ ಅನುಸರಿಸುವ ಬಿಜೆಪಿ ಅಂಥವರು ಬಲಿಷ್ಠರಾಗಿದ್ದರೆ ಬೇಕಾದಂತೆ ತಂತ್ರ ಹೆಣೆಯುತ್ತೆ. ಅಂಥವರ ಎದುರು ಮಾತನಾಡುವ ಧಂ ಇವರಿಗೆ ಇಲ್ಲ. ಬಿಜೆಪಿ ಪರವಾಗಿ ಇರುವವರು ಮಾತ್ರ ದೇಶಪ್ರೇಮಿಗಳಾ? ಉಳಿದವರು ದೇಶಕ್ಕೆ ಉಪದ್ರವ ಮಾಡುವವರಾ? ಎನ್‌ಆರ್‌ಸಿ, ಸಿಎಎಗೆ ಸಂಬಂಧಿಸಿದಿಂತೆ ನಡೆದ ಪ್ರತಿಭಟನೆಗಳಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಇರುವ ಕಡೆ ಮಾತ್ರ ಹಿಂಸಾಚಾರ ನಡೆದಿದೆ. ಗೋಲಿಬಾರ್ ಆಗಿದೆ. ಉಳಿದ ಸರ್ಕಾರಗಳು ಸೂಕ್ತವಾಗಿ ನಿಭಾಯಿಸಲಿಲ್ಲ. ಇದು ರಾಜ್ಯ ಸರ್ಕಾರದ ಹೊಣೆಗೇಡಿತನ ಎಂದು ಆಕ್ಷೇಪಿಸಿದರು.

ಜನರ ಪ್ರತಿನಿಧಿಯಾಗಿ ಜನರ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದು ತಪ್ಪಾ? ನನ್ನನ್ನು ಗುರಿಯಾಗಿಸುವುದು ಕೇವಲ ರಾಜಕೀಯ ತಂತ್ರ ಮಾತ್ರ. ಅದು ಟೈಂ ವೇಸ್ಟ್‌. ನನ್ನ ಕ್ಷೇತ್ರದ ಜನ ಇವರ ಮಾತು ನಂಬುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು