ಬುಧವಾರ, ಜೂನ್ 29, 2022
26 °C

ಪುರುಷರ ಆರೋಗ್ಯ: ಬೈಕ್ ರ್‍ಯಾಲಿ ನಡೆಸಿದ ವೈದ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪುರುಷರ ಆರೋಗ್ಯ ಪ್ರೋತ್ಸಾಹಿಸಲು ನಗರದ ಮಣಿಪಾಲ್ ಆಸ್ಪತ್ರೆಯ ವೈದ್ಯರು ಭಾನುವಾರ 35 ಕಿ.ಮೀ. ಬೈಕ್ ರ್‍ಯಾಲಿ ನಡೆಸಿ, ಹೃದ್ರೋಗ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದರು. 

ಭಾರತ್ ಬಿಯರ್ಡ್ ಕ್ಲಬ್ ಸಹಯೋಗದೊಂದಿಗೆ ನಡೆದ ಈ ರ್‍ಯಾಲಿಗೆ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಾಲನೆ ದೊರೆಯಿತು. ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರ ಜತೆಗೆ 250ಕ್ಕೂ ಅಧಿಕ ಬೈಕ್ ಸವಾರರು ರ್‍ಯಾಲಿಗೆ ಬೆಂಬಲ ಸೂಚಿಸಿದರು. ಟ್ರಿನಿಟಿ ವೃತ್ತ, ಕಬ್ಬನ್‍ ಉದ್ಯಾನ, ಸ್ಯಾಂಕಿ ರಸ್ತೆ ಮತ್ತು ದೊಡ್ಡಬಳ್ಳಾಪುರದ ಮೂಲಕ ಸಾಗಿ, ಎಂಬೆಸಿ ಇಂಟರ್‌ನ್ಯಾಷನಲ್ ರೈಡಿಂಗ್ ಸ್ಕೂಲ್‍ನಲ್ಲಿ ರ್‍ಯಾಲಿ ಕೊನೆಗೊಂಡಿತು. 

ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ಡಾ. ನವೀನ್ ಚಂದ್ರ, ‘ತಂಬಾಕು ಉತ್ಪನ್ನಗಳ ಸೇವನೆ, ಪಾಶ್ಚಾತ್ಯ ಜೀವನಶೈಲಿ ಸೇರಿದಂತೆ ವಿವಿಧ ಕಾರಣಗಳಿಂದ ಯುವಜನರಲ್ಲಿ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅತಿಯಾದ ವ್ಯಾಯಾಮದಿಂದ ಹೃದಯ ಸ್ತಂಭನಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೃದಯಾಘಾತವನ್ನು ಲಘುವಾಗಿ ಪರಿಗಣಿಸಬಾರದು. ಹೃದಯದ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿದಾಗ ಹೃದಯಾಘಾತ ಸಂಭವಿಸುತ್ತದೆ’ ಎಂದು ಹೇಳಿದರು. 

ಶ್ವಾಸಕೋಶ ತಜ್ಞ ಡಾ. ಸಚಿನ್ ಡಿ., ‘ನೇರ ಮತ್ತು ಪರೋಕ್ಷ ಧೂಮಪಾನಗಳೆರಡೂ ನಮ್ಮ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಧೂಮಪಾನವು ಶ್ವಾಸಕೋಶದ ಕಾರ್ಯಕ್ಷಮತೆ ಹದಗೆಡಿಸಿ, ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತದೆ. ಹೃದ್ರೋಗ ಸೇರಿದಂತೆ ಹಲವು ಸಾಂಕ್ರಾಮಿಕವಲ್ಲದ ರೋಗಗಳು ಬರಲು ಪರೋಕ್ಷ ಧೂಮಪಾನ ಪ್ರಮುಖ ಕಾರಣ’ ಎಂದು ತಿಳಿಸಿದರು.

ಪುರುಷ ರೋಗಶಾಸ್ತ್ರ ಸಲಹಾತಜ್ಞ ಡಾ. ಪ್ರಶಾಂತ್ ಗಣೇಶ್, ‘ಬದಲಾದ ಜೀವನಶೈಲಿಯಿಂದಾಗಿ ಪುರುಷರಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹೆಚ್ಚಿನ ಪುರುಷರು ಅನಾರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ಹೆಚ್ಚಾಗಿ ಹೃದಯ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು