ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಸೊಪ್ಪು ದುಬಾರಿ: ತರಕಾರಿಗಳ ದರ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇತ್ತೀಚೆಗೆ ಸುರಿದ ಮುಂಗಾರಿನಿಂದಾಗಿ ಕೆಲ ತರಕಾರಿಗಳು ಹಾಗೂ ಸೊಪ್ಪಿನ ದರಗಳು ದಿಢೀರ್ ಏರಿಕೆ ಕಂಡಿವೆ. ‘ಮಳೆ ಬಿಡುವು ನೀಡಿದರೆ ದರಗಳು ಸ್ಥಿರವಾಗಿ ಇರಲಿದ್ದು, ಒಂದು ವೇಳೆ ಭಾರಿ ಮಳೆ ಮುಂದುವರಿದರೆ ದರ ಮತ್ತಷ್ಟು ಏರಲಿದೆ’ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಕೆ.ಜಿ.ಗೆ ₹40ರಂತೆ ಮಾರಾಟವಾಗುತ್ತಿದ್ದ ಕ್ಯಾರೆಟ್ ದರ ಎರಡು ವಾರಗಳಿಂದ ಏರಿಕೆ ಕಂಡಿದ್ದು, ಸದ್ಯ ಕೆ.ಜಿ.ಗೆ ₹85ರವರೆಗೆ ಮಾರಾಟ ಆಗುತ್ತಿದೆ. ಬದನೆ, ಬೆಂಡೆ, ಈರುಳ್ಳಿ ಹಾಗೂ ಹೂಕೋಸು ದರಗಳು ತುಸು ಏರಿವೆ. ಬೀನ್ಸ್‌, ಎಲೆಕೋಸು, ಮೂಲಂಗಿ, ಟೊಮೆಟೊ ಸೇರಿದಂತೆ ಹಲವು ತರಕಾರಿಗಳ ದರ ಕಡಿಮೆ ಇದೆ. ಹಣ್ಣಿನ ದರಗಳು ಅಷ್ಟೇನೂ ಏರಿಲ್ಲ.

‘ಜುಲೈ ಮೊದಲ ವಾರದಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಇದರಿಂದ ತೋಟದಲ್ಲಿದ್ದ ತರಕಾರಿ ಮತ್ತು ಸೊಪ್ಪಿಗೆ ಹಾನಿಯಾಗಿದೆ. ಹಾಗಾಗಿ, ಎರಡು ವಾರಗಳಿಂದ ದರ ದಿಢೀರ್ ಏರಿದೆ’ ಎಂದು ತರಕಾರಿ ಮತ್ತು ಸೊಪ್ಪಿನ ವ್ಯಾಪಾರಿ ಕುಮಾರ್ ತಿಳಿಸಿದರು. 

‘ಈ ವಾರದಲ್ಲಿ ಆಷಾಢ ಮುಗಿಯಲಿದೆ. ಬಳಿಕ ಸಾಲು ಸಾಲು ಹಬ್ಬಗಳು ಬರಲಿದ್ದು, ಆ ಸಮಯದಲ್ಲಿ ದರಗಳು ಸಾಮಾನ್ಯವಾಗಿ ಹೆಚ್ಚಳವಾಗುತ್ತವೆ. ಈಗ ಮಳೆ ಕಡಿಮೆ ಆಗಿರುವುದರಿಂದ ಮುಂದಿನ ವಾರದಲ್ಲಿ ದರಗಳು ಕಡಿಮೆಯಾದರೂ ಆಗಬಹುದು’ ಎಂದು ವಿವರಿಸಿದರು.

ಸೊಪ್ಪುಗಳು ದುಬಾರಿ: ಪ್ರತಿ ಕಟ್ಟು ಸೊಪ್ಪಿನ ದರ ₹10 ಆಸುಪಾಸಿನಲ್ಲಿತ್ತು. ಈಗ ಎಲ್ಲ ಸೊಪ್ಪುಗಳ ದರಗಳೂ ಹೆಚ್ಚಾಗಿವೆ. ಕೊತ್ತಂಬರಿ, ಸಬ್ಬಕ್ಕಿ ಹಾಗೂ ಮೆಂತ್ಯೆ ಸೊಪ್ಪು ಪ್ರತಿ ಕಟ್ಟಿಗೆ ಚಿಲ್ಲರೆ ದರ ₹20ರಷ್ಟಿದೆ. ಪಾಲಕ್ ಮತ್ತು ದಂಟಿನ ಸೊಪ್ಪಿನ ದರಗಳೂ ದುಪ್ಪಟ್ಟಾಗಿದೆ.

‘ಧಾರಾಕಾರ ಮಳೆಗೆ ಸೊಪ್ಪು ಬೇಗ ಹಾಳಾಗುತ್ತದೆ. ಹಾಗಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದ ಸೊಪ್ಪು ಪೂರೈಕೆ ಆಗುತ್ತಿದೆ. ಹಾಗಾಗಿ, ಮಳೆಗಾಲದಲ್ಲಿ ಸೊಪ್ಪಿಗೆ ಬೇಡಿಕೆ ಹೆಚ್ಚು. ಇತ್ತೀಚಿನ ಮಳೆಯ ಕಾರಣದಿಂದ ಸೊಪ್ಪಿನ ದರಗಳು ಎರಡು ಪಟ್ಟು ಹೆಚ್ಚಾಗಿವೆ’ ಎಂದು ಸೊಪ್ಪಿನ ವ್ಯಾಪಾರಿ ಅಮರೇಶ್‌ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು