ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | 10 ಮಹಿಳೆಯರಿಗೆ ‘ಮದುವೆ’ ವಂಚನೆ: ಆರೋಪಿ ಸೆರೆ

ವೈವಾಹಿಕ ಜಾಲತಾಣ, ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ
Published 11 ಏಪ್ರಿಲ್ 2024, 15:23 IST
Last Updated 11 ಏಪ್ರಿಲ್ 2024, 15:23 IST
ಅಕ್ಷರ ಗಾತ್ರ

ಬೆಂಗಳೂರು: ವೈವಾಹಿಕ ಜಾಲತಾಣ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ ತೆರೆದು ಮಹಿಳೆಯರನ್ನು ಸಂಪರ್ಕಿಸಿ ಮದುವೆ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿ ದೀಪಕ್‌ ಎಂಬುವವರನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬಳಿಯ ಹುಳಿಯಾರಿನ ದೀಪಕ್ (30) ಬಂಧಿತ. ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿರುವ ಮಹಿಳೆಯೊಬ್ಬರು ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಈತನಿಂದ ₹ 90 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಇದುವರೆಗೂ ರಾಜ್ಯದ 10 ಮಹಿಳೆಯರಿಗೆ ವಂಚಿಸಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಒಬ್ಬರಷ್ಟೇ ದೂರು ನೀಡಿದ್ದಾರೆ. ಉಳಿದವರಿಂದ ಹೇಳಿಕೆ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಆರೋಪಿಯಿಂದ ಯಾರಿಗಾದರೂ ವಂಚನೆ ಆಗಿದ್ದರೆ ಠಾಣೆಗೆ ಮಾಹಿತಿ ನೀಡಬಹುದು’ ಎಂದು ಕೋರಿದರು.

ನಕಲಿ ಹೆಸರಿನಲ್ಲಿ ಖಾತೆ: ‘ಪಿಯುಸಿವರೆಗೂ ಓದಿದ್ದ ಆರೋಪಿ ದೀಪಕ್, ಮಹಿಳೆಯರನ್ನು ವಂಚಿಸಿ ಹಣ ಗಳಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದ. ನಕಲಿ ಹೆಸರಿನಲ್ಲಿ ವೈವಾಹಿಕ ಜಾಲತಾಣ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆಯುತ್ತಿದ್ದ. ತಾನೊಬ್ಬ ಬ್ಯಾಂಕ್ ವ್ಯವಸ್ಥಾಪಕ, ಎಂಜಿನಿಯರ್ ಹಾಗೂ ವೈದ್ಯ ಎಂಬುದಾಗಿ ವೈಯಕ್ತಿಕ ವಿವರದಲ್ಲಿ ಬರೆದುಕೊಳ್ಳುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ವರನನ್ನು ಹುಡುಕುತ್ತಿದ್ದ ಮಹಿಳೆಯರು ಹಾಗೂ ವಿಧವೆಯರಿಗೆ ಆರೋಪಿಯೇ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಅದನ್ನು ಸ್ವೀಕರಿಸುತ್ತಿದ್ದ ಮಹಿಳೆಯರ ಜೊತೆ ಚಾಟಿಂಗ್ ಮಾಡಲಾರಂಭಿಸುತ್ತಿದ್ದ. ಮದುವೆಯಾಗುವುದಾಗಿ ಹೇಳಿ ನಂಬಿಸುತ್ತಿದ್ದ’ ಎಂದು ತಿಳಿಸಿದರು.

ಮಹಿಳೆಯರ ಹೆಸರಿನಲ್ಲಿ ಸಿಮ್‌ ಕಾರ್ಡ್‌: ‘ಆರ್ಥಿಕ ತೊಂದರೆ ಇರುವುದಾಗಿ ಹೇಳಿ ಮಹಿಳೆಯರಿಂದ ಆನ್‌ಲೈನ್ ಮೂಲಕ ಆರೋಪಿ ಹಣ ಪಡೆದುಕೊಳ್ಳುತ್ತಿದ್ದ. ಆತನ ಮಾತು ನಂಬಿ ಹಲವು ಮಹಿಳೆಯರು, ₹ 30 ಸಾವಿರದಿಂದ ₹ 1 ಲಕ್ಷದವರೆಗೂ ಹಣ ಕೊಟ್ಟಿದ್ದರು’ ಎಂದು ಹೇಳಿದರು.

‘ನನ್ನ ಬಳಿ ಕಚೇರಿ ಸಿಮ್‌ ಕಾರ್ಡ್‌ ಇದ್ದು, ವೈಯಕ್ತಿಕವಾಗಿ ಮಾತನಾಡಲು ಸಾಧ್ಯವಿಲ್ಲ. ಹೊಸ ಸಿಮ್ ಕಾರ್ಡ್ ಖರೀದಿಸಿ, ನಮ್ಮ ಕಚೇರಿ ಸಹಾಯಕನ ಕೈಗೆ ಕೊಟ್ಟು ಕಳುಹಿಸಿ’ ಎಂದು ಆರೋಪಿ ಮಹಿಳೆಯರಿಗೆ ಹೇಳುತ್ತಿದ್ದ. ಅವಾಗಲೂ ಮಹಿಳೆಯರು, ತಮ್ಮ ಹೆಸರಿನಲ್ಲಿ ಸಿಮ್‌ಕಾರ್ಡ್‌ ಖರೀದಿಸುತ್ತಿದ್ದರು. ಕಚೇರಿ ಸಹಾಯಕನ ಸೋಗಿನಲ್ಲಿ ಮಹಿಳೆಯರ ಬಳಿ ಹೋಗುತ್ತಿದ್ದ ಆರೋಪಿ, ಸಿಮ್‌ ಕಾರ್ಡ್ ಪಡೆದು ನಾಪತ್ತೆಯಾಗುತ್ತಿದ್ದ. ಅದೇ ಸಿಮ್‌ ಕಾರ್ಡ್‌ಗಳನ್ನು ಮತ್ತೊಬ್ಬ ಮಹಿಳೆಯನ್ನು ವಂಚಿಸಲು ಬಳಸುತ್ತಿದ್ದ’ ಎಂದು ತಿಳಿಸಿದರು.

ಎರಡು ದಿನದಲ್ಲಿ 10 ಸಿಮ್ ಬಳಕೆ

‘ಮಹಿಳೆಯರ ಹೆಸರಿನ ಸಿಮ್‌ಕಾರ್ಡ್ ಬಳಸಿಯೇ ಆರೋಪಿ ಕೃತ್ಯ ಎಸಗುತ್ತಿದ್ದ. ಹೀಗಾಗಿ ಆರಂಭದಲ್ಲಿ ಆರೋಪಿ ಬಗ್ಗೆ ಸುಳಿವು ಪತ್ತೆಯಾಗಲಿಲ್ಲ. ಈತನ ಬಂಧನಕ್ಕೆ ಎರಡು ದಿನ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲೂ ಆರೋಪಿ 10 ಸಿಮ್‌ ಕಾರ್ಡ್‌ಗಳನ್ನು ಬದಲಾಯಿಸಿದ್ದ. ತಾಂತ್ರಿಕ ಪುರಾವೆಗಳಿಂದ ಆರೋಪಿ ಸಿಕ್ಕಿಬಿದ್ದ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT