ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿಕೂಟದ ಮೇಯರ್ ಅಭ್ಯರ್ಥಿಗೆ ಕೊನೆ ಕ್ಷಣದಲ್ಲಿ ಕೈಕೊಟ್ಟ ಸದಸ್ಯರು ಇವರೇ

ಮತದಾನ ಪ್ರಕ್ರಿಯೆಯಿಂದ ದೂರ ಉಳಿದದ್ದು ನಿಜ: ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಶರವಣ ಹೇಳಿಕೆ
Last Updated 3 ಅಕ್ಟೋಬರ್ 2019, 5:12 IST
ಅಕ್ಷರ ಗಾತ್ರ

ಬೆಂಗಳೂರು: ಮೇಯರ್‌–ಉಪ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮುಂದುವರಿಸಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೂ, ಜೆಡಿಎಸ್‌ನ ತಲಾ ಮೂವರು ವಿಧಾನ ಪರಿಷತ್‌ ಸದಸ್ಯರು ಹಾಗೂ ಕಾರ್ಪೊರೇಟರ್‌ಗಳು ಮೈತ್ರಿಕೂಟದ ಮೇಯರ್‌ ಅಭ್ಯರ್ಥಿ ಆರ್‌.ಎಸ್‌. ಸತ್ಯನಾರಾಯಣ ಅವರಿಗೆ ‘ಕೈ’ಕೊಟ್ಟಿದ್ದಾರೆ.

‘ಕೊನೆ ಕ್ಷಣದಲ್ಲಿ ಕಾಡಿದ ಕೆಲವು ಗೊಂದಲಗಳಿಂದಾಗಿ ನಾವು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದು ನಿಜ’ ಎಂದು ವಿಧಾನ ಪರಿಷತ್‌ ಸದಸ್ಯ ಜೆ.ಡಿಎಸ್‌ ಟಿ.ಎ.ಶರವಣ ಒಪ್ಪಿಕೊಂಡರು.

ಸದಸ್ಯರ ಒಟ್ಟು ಸಂಖ್ಯಾಬಲದ ಪ್ರಕಾರ, ಸತ್ಯನಾರಾಯಣ ಅವರಿಗೆ 118 ಮತಗಳು ಸಿಗಬೇಕಿತ್ತು. ಆದರೆ, ದಕ್ಕಿದ್ದು 112 ಮತಗಳು ಮಾತ್ರ.

ಬಹಿರಂಗ ಮತದಾನದ ವೇಳೆ ಮೈತ್ರಿ ಅಭ್ಯರ್ಥಿ ಪರ ಕೈ ಎತ್ತಿದ್ದ ಆರು ಮಂದಿ ನಿಗದಿತ ನಮೂನೆಯಲ್ಲಿ ಸಹಿ ಹಾಕದ ಕಾರಣ ಕಾಂಗ್ರೆಸ್‌ ಅಭ್ಯರ್ಥಿಗೆ ಅಷ್ಟು ಮತಗಳು ಕಡಿಮೆ ಬಿದ್ದಿದ್ದವು. ಪಾಲಿಕೆ ಅಧಿಕಾರಿಗಳ ಪ್ರಕಾರ, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ರಮೇಶ ಗೌಡ, ಸಿ.ಆರ್‌.ಮನೋಹರ್‌, ಪಾಲಿಕೆ ಸದಸ್ಯ ಆನಂದ್‌, ಉಮೇ ಸಲ್ಮಾ ಹಾಗೂ ನೇತ್ರಾ ಸಹಿ ಹಾಕಿಲ್ಲ.

‘ನಾವು ಸಹಿ ಹಾಕದಿರುವುದು ನಿಜ. ಗೊಂದಲಮಯವಾಗಿದ್ದ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡುವಂತೆ ನಾವು ಚುನಾವಣಾಧಿಕಾರಿ ಹರ್ಷಗುಪ್ತ ಅವರನ್ನು ಒತ್ತಾಯಿಸಿದೆವು. ಅದಕ್ಕವರು ಒಪ್ಪಲಿಲ್ಲ. ಒಮ್ಮೆ ಸಭಾತ್ಯಾಗಕ್ಕೂ ಮುಂದಾದೆವು. ಬಳಿಕ ಅದರ ಬದಲು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಲು ನಿರ್ಧರಿಸಿದೆವು’ ಎಂದು ಶರವಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊನೆ ಕ್ಷಣದಲ್ಲಿ ನಿರ್ಧಾರಕ್ಕೆ ಬಂದಿದ್ದರಿಂದ ಪಕ್ಷದ ಎಲ್ಲ ಮತದಾರರಿಗೆ ಈ ಸಂದೇಶ ರವಾನಿಸಲು ಆಗಲಿಲ್ಲ. ಪಕ್ಷದ ಕೆಲವರು ಸತ್ಯನಾರಾಯಣ ಪರ ಮತ ಚಲಾಯಿಸಿದ್ದಾರೆ’ ಎಂದರು.

ಉಪಮೇಯರ್‌ ಅಭ್ಯರ್ಥಿ ಗಂಗಮ್ಮ ಪರ 116 ಮತ ಮಾತ್ರ ಚಲಾವಣೆಯಾಗಿವೆ. ಅವರಿಗೆ ಕೈಕೊಟ್ಟ ಇಬ್ಬರು ಕಾಂಗ್ರೆಸ್‌ನವರೋ ಜೆಡಿಎಸ್‌ನವರೋ ತಿಳಿದಿಲ್ಲ.

‘ಸಿದ್ದರಾಮಯ್ಯ ಮೇಲೆ ಸಿಟ್ಟಿನಿಂದ ಕ್ರಮ’

‘ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಕಾಂಗ್ರೆಸ್‌ ಮುಖಂಡರು, ಅದರಲ್ಲೂ ಸಿದ್ದರಾಮಯ್ಯ ನಮ್ಮ ಪಕ್ಷದ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಅವರ ವರ್ತನೆಯಿಂದ ಬೇಸರವಾಗಿತ್ತು. ಅವರ ಪಕ್ಷದ ಮೇಯರ್‌ ಅಭ್ಯರ್ಥಿ ಪರ ಮತ ಚಲಾಯಿಸಲು ಮನಸ್ಸು ಬರಲಿಲ್ಲ’ ಎಂದು ಶರವಣ ತಿಳಿಸಿದರು.

ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲೇ ಇಂತಹ ನಿಲುವು ತಳೆಯಬಹುದಿತ್ತಲ್ಲ ಎಂಬ ಪ್ರಶ್ನೆಗೆ, ‘ನಾವು ಚುನಾವಣೆ ಮುಂದಕ್ಕೆ ಹೋಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಈ ಕಾರಣಕ್ಕೆ ಮತದಾನವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದರು.

ಜೆಡಿಎಸ್‌ ಜೊತೆ ಬಿಜೆಪಿ ಒಳ ಒಪ್ಪಂದ?

ಸಚಿವ ಆರ್‌.ಅಶೋಕ, ನೂತನ ಮೇಯರ್‌ ಎಂ.ಗೌತಮ್ ಕುಮಾರ್ ಹಾಗೂ ಉಪಮೇಯರ್‌ ಸಿ.ಆರ್‌. ರಾಮಮೋಹನ ರಾಜು ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜೊತೆ ಮಾತನಾಡುವ ವಿಡಿಯೊವೊಂದು ಬಹಿರಂಗಗೊಂಡಿದೆ.

‘ನಾವು ಜೆಡಿಎಸ್‌ ಜೊತೆ ಮೊದಲೇ ಮಾತುಕತೆ ಮಾಡಿಕೊಂಡಿದ್ದೆವು. ಹಾಗಾಗಿ, ಅವರಲ್ಲಿ ಕೆಲವರು ಕಾಂಗ್ರೆಸ್‌ ಅಭ್ಯರ್ಥಿ ಪರ ಕೈ ಎತ್ತಿದ್ದರೂ ನಿಗದಿತ ನಮೂನೆಯಲ್ಲಿ ಸಹಿ ಮಾಡಿಲ್ಲ. ಹಾಗಾಗಿ, ನಮ್ಮ ಅಭ್ಯರ್ಥಿ ಹೆಚ್ಚು ಅಂತರದಿಂದ ಗೆಲ್ಲಲು ಸಾಧ್ಯವಾಯಿತು’ ಎಂಬ ಅಂಶ ಈ ಮಾತುಕತೆ ವೇಳೆ ಪ್ರಸ್ತಾಪವಾಗಿದೆ.

‘ನಮ್ಮ ಅಭ್ಯರ್ಥಿ ಕನಿಷ್ಠ 4ರಿಂದ 5 ಮತಗಳ ಅಂತರದಿಂದ ಗೆಲ್ಲಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ನಿಮಗೆ ಹೆಚ್ಚು ಅನುದಾನ ಕೊಡುತ್ತೇವೆ ಎಂದು ಜೆಡಿಎಸ್‌ನವರಿಗೆ ಹೇಳಿದ್ದೆ. ಹಾಗಾಗಿ, ಅವರು ನಮ್ಮ ಪರ ನಿಂತರು’ ಎಂದು ಅಶೋಕ ಹೇಳಿದಾಗ ಯಡಿಯೂರಪ್ಪ ಅವರು ನಸು ನಕ್ಕಿದ್ದು ವಿಡಿಯೊದಲ್ಲಿ ದಾಖಲಾಗಿದೆ.

‘ಬಿಜೆಪಿಯ ಮೇಯರ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥ ನಾರಾಯಣ ಹಾಗೂ ಅಶೋಕ ಅವರು ಮತದಾನ ಆರಂಭವಾಗುವುದಕ್ಕೆ ಮುನ್ನ ನಮ್ಮ ಬಳಿ ಬಂದು ಕೇಳಿಕೊಂಡಿದ್ದು ನಿಜ. ಅದಕ್ಕೆ ನಾವು ಒಪ್ಪಿಕೊಂಡಿಲ್ಲ. ನಾವು ಕಾಂಗ್ರೆಸ್‌ನವರಿಗೂ ಮತ ಹಾಕಿಲ್ಲ. ಬಿಜೆಪಿಯವರಿಗೂ ಮತ ಹಾಕಿಲ್ಲ’ ಎಂದು ಶರವಣ ಸ್ಪಷ್ಟಪಡಿಸಿದರು.

**

ನಾನಂತೂ ಮೈತ್ರಿಕೂಟದ ಅಭ್ಯರ್ಥಿ ಪರ ಸಹಿ ಹಾಕಿದ್ದೇನೆ. ಬೇರೆಯವರ ವಿಚಾರ ನನಗೆ ಗೊತ್ತಿಲ್ಲ. ಕೆಲವು ನಮೂನೆಗಳು ಆಚೀಚೆ ಆಗಿ ಗೊಂದಲ ಸೃಷ್ಟಿಯಾಗಿರಬಹುದು
– ನೇತ್ರಾ ನಾರಾಯಣ್‌, ಪಾಲಿಕೆಯಲ್ಲಿ ಜೆಡಿಎಸ್‌ ಪಕ್ಷದ ನಾಯಕಿ.

**

ಮತದಾನದಿಂದ ದೂರ ಉಳಿದ ಬಗ್ಗೆ ದೇವೇಗೌಡರ ಗಮನಕ್ಕೂ ತಂದಿದ್ದೇನೆ. ಆಗಿದ್ದು ಆಗಿ ಹೋಯಿತು. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ
–ಟಿ.ಎ.ಶರವಣ, ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT