ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ವ್ಯವಸ್ಥೆಗೆ ಮೇಯರ್‌ ಸೂಚನೆ

ಬೆಳ್ಳಳ್ಳಿ ಕ್ವಾರಿ ಭರ್ತಿ: ಕಸ ವಿಲೇವಾರಿಗೆ ಬದಲಿ ಮಾರ್ಗ ಕಂಡುಕೊಳ್ಳಲು ಗಂಗಾಂಬಿಕೆ ಸಲಹೆ
Last Updated 26 ಜುಲೈ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಸ ವಿಲೇವಾರಿ ಮಾಡುತ್ತಿದ್ದ ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಿರುವ ಕಾರಣ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕೆ ಸೂಚನೆ ನೀಡಿದರು.

ಕಸ ವಿಲೇವಾರಿಗೆ ಸಂಬಂಧಿಸಿದಂತೆ ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಆಗದೇ ಇದ್ದರೆ ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಲ್ಲದೆ ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಾರೆ. ಹೀಗಾಗಿ, ಕಸ ವಿಲೇವಾರಿಗೆ ತ್ವರಿತವಾಗಿ ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಪ್ರತಿಕ್ರಿಯಿಸಿ, ‘ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಿರುವ ಕಾರಣ ಕಸದ ಸಮಸ್ಯೆ ಬಿಗಡಾಯಿಸಿದೆ. ಈ ಕ್ವಾರಿ ಪಕ್ಕದಲ್ಲೇ ಮಿಟಗಾನಹಳ್ಳಿ ಕ್ವಾರಿ ಇದ್ದು, ಅದರಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಬಹುದು. ಇದಕ್ಕಾಗಿ ಅಲ್ಪಾವಧಿ ಟೆಂಡರ್ ಕರೆದಿದ್ದು, ವಾರದೊಳಗಾಗಿ ಕ್ವಾರಿಗೆ ಕಸ ವಿಲೇವಾರಿ ಮಾಡಲು‌ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಬಲ್ಕ್ ಜನರೇಟರ್‌ಗಳಿಂದ ಉತ್ಪತ್ತಿಯಾಗುವ ಕಸ ಸಂಗ್ರಹಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತಿದೆ. ಒಣ ಕಸ ಸಂಗ್ರಹದ ಜವಾಬ್ದಾರಿಯನ್ನುಚಿಂದಿ ಆಯುವ ಹಾಗೂ ಸ್ವಸಹಾಯ ಸಂಘಗಳಿಗೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 8 ಸಾವಿರ ಚಿಂದಿ ಆಯುವವರಿದ್ದು, ಎಲ್ಲರೂ ಒಣ ಕಸ ಸಂಗ್ರಹಿಸಿ ಸಂಸ್ಕರಣಾ ಘಟಕಗಳಿಗೆ ಕೊಡುತ್ತಿದ್ದಾರೆ’ ಎಂದರು.

‘ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಲು ಕಣ್ಣೂರಿನಲ್ಲಿ ಸ್ಥಳ ಗುರುತಿಸಲಾಗಿದೆ. ಆದರೆ, ನಾಗರಿಕರು ರಸ್ತೆ ಹಾಗೂ ಖಾಲಿ ನಿವೇಶನಗಳಲ್ಲಿ ರಾತ್ರಿ ವೇಳೆ ಸುರಿಯುತ್ತಿದ್ದಾರೆ’ ಎಂದರು.

ಈ ವೇಳೆ ಮಾತನಾಡಿದ ಮೇಯರ್, ‘ಕಟ್ಟಡ ತ್ಯಾಜ್ಯ ಸುರಿಯಲು ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಸ್ಥಳ ಗುರುತಿಸಿ ಪಟ್ಟಿ ನೀಡಿ’ ಎಂದು‌ ಸೂಚನೆ ನೀಡಿದರು.

ಪ್ರಾಣಿ ತ್ಯಾಜ್ಯ ಬಿಸಾಡಿದರೆ ಕ್ರಮ

ಮಾಂಸದ ಅಂಗಡಿಗಳ ಮಾಲೀಕರು ಪ್ರಾಣಿ ತ್ಯಾಜ್ಯವನ್ನು ರಸ್ತೆ ಬದಿ ಅಥವಾ ರಾಜಕಾಲುವೆಗಳಿಗೆ ಬಿಸಾಡಿದರೆ ಅವರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಎಚ್ಚರಿಸಿದರು.

ಪ್ರಾಣಿ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತಿದೆ. ಇದು ಜಾರಿಯಾದ ಬಳಿಕ ಎಲ್ಲಾ ಮಾಂಸದ ಅಂಗಡಿಗಳ ಮಾಲೀಕರು ತ್ಯಾಜ್ಯವನ್ನು ಗುತ್ತಿಗೆದಾರರಿಗೇ ನೀಡಬೇಕು ಎಂದರು.

ಘನತ್ಯಾಜ್ಯ ಹೆಚ್ಚುವರಿ ಆಯುಕ್ತ ರಂದೀಪ್ ಮಾತನಾಡಿ, ‘ನಗರದಲ್ಲಿ 4 ಸಾವಿರಕ್ಕೂ ಹೆಚ್ಚು ಮಾಂಸದ ಅಂಗಡಿಗಳಿದ್ದು, ಪ್ರತಿನಿತ್ಯ 40 ಟನ್ ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಭಾನುವಾರ ಮತ್ತು ವಿಶೇಷ ದಿನಗಳಲ್ಲಿ 80ರಿಂದ 90 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ಸಂಗ್ರಹಿಸಲು ಎಂಟು ವಲಯಗಳಲ್ಲಿ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತಿದೆ’ ಎಂದು ಹೇಳಿದರು.

‘ಗುತ್ತಿಗೆದಾರರು ಪ್ರಾಣಿತ್ಯಾಜ್ಯ ಸಂಸ್ಕರಣಾ ಘಟಕ ಹೊಂದಿರದೇ ಇದ್ದಲ್ಲಿ, ಘಟಕ ಇರುವವರ ಜತೆ ಒಪ್ಪಂದ ಮಾಡಿಕೊಂಡು ಕೆಲಸ ನಿರ್ವಹಿಸಬೇಕು. ಕಂಟೇನರ್ ಮಾದರಿಯ ಆಟೋಗಳ ಮೂಲಕ ತ್ಯಾಜ್ಯ ಸಂಗ್ರಹಿಸಿ,ಕಂಟೇನರ್ ವಾಹನಗಳಿಗೆ ಕೊಡಬೇಕು. ಅದನ್ನು ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ದು ಮೀನು ಮತ್ತು ಕೋಳಿಗಳಿಗೆ ಆಹಾರ ತಯಾರಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT