ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮೇಯರ್‌ ಪತ್ರ: ಏನೀ ಮರ್ಮ?

Last Updated 10 ಸೆಪ್ಟೆಂಬರ್ 2020, 5:19 IST
ಅಕ್ಷರ ಗಾತ್ರ

ಪತ್ರ 1: ಬಿಬಿಎಂಪಿ ವ್ಯಾಪ್ತಿಯಲ್ಲಿ ನಕಲಿ ದಾಖಲೆ ನೀಡಿ ಟೆಂಡರ್‌ ಪಡೆದಿರುವ ಆರು ಕಾಮಗಾರಿಗಳ ಗುತ್ತಿಗೆಯನ್ನು ರದ್ದುಪಡಿಸಬೇಕು ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.

ಪತ್ರ 2: ನಗರದಲ್ಲಿ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲು ಶಾಪೂರ್ಜಿ ಪಲ್ಲೋಂಜಿ, ಎಸ್‌ಎಂಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈವೇಟ್‌ ಲಿಮಿಟೆಡ್‌ಗಳ ಒಕ್ಕೂಟಕ್ಕೆ (ಎಸ್ಕೊ) ನೀಡಿರುವ ಗುತ್ತಿಗೆಯನ್ನು ರದ್ದುಪಡಿಸಬೇಕು.

ಪತ್ರ 3: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊರಾಂಗಣ ಜಾಹೀರಾತು ಪ್ರದರ್ಶನನ್ನು ನಿಷೇಧಿಸಲಾಗಿದೆ. ಹೊರಾಂಗಣ ಜಾಹೀರಾತು ಅಸೋಸಿಯೇಷನ್‌ಗಳ ಪ್ರತಿನಿಧಿಗಳು ಒತ್ತಡ ಹೇರಿ ಬಿಬಿಎಂಪಿ ಜಾಹೀರಾತು ನಿಯಮಗಳ ಕರಡಿನಲ್ಲಿ ಹೋರ್ಡಿಂಗ್‌ ಪ್ರದರ್ಶನಕ್ಕೆ ಅನುವಾಗುವಂತೆ ಬದಲಾವಣೆ ಮಾಡಲು ಹಿಂಬಾಗಿಲಿನಿಂದ ಪ್ರಯತ್ನಿಸಿದ್ದಾರೆ. ಹಾಗಾಗಿ ಹೋರ್ಡಿಂಗ್‌ ಹಾವಳಿಗೆ ಮತ್ತೆ ಅವಕಾಶ ಕಲ್ಪಿಸಬಾರದು.

–ನಗರದ ಮೇಯರ್‌ ಎಂ. ಗೌತಮ್‌ ಕುಮಾರ್ ಅವರು 15 ದಿನಗಳ ಕಿರು ಅವಧಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಬರೆದಿರುವ ಪತ್ರಗಳ ಸಾರ ಇದು. ಈ ಪತ್ರಗಳ ಹಿಂದಿರುವ ಉದ್ದೇಶವೇನು? ಪಾಲಿಕೆಯ ವ್ಯವಸ್ಥೆಯ ಶುದ್ಧೀಕರಣದ ಭಾಗವೇ ಅಥವಾ ಸ್ವ ಹಿತಾಸಕ್ತಿಯೇ? ಎಂಬ ಚರ್ಚೆಗಳು ಅಧಿಕಾರಿಗಳ ಹಾಗೂ ಪಾಲಿಕೆ ಸದಸ್ಯರ ವಲಯದಲ್ಲಿ ಆರಂಭವಾಗಿವೆ.

ಪಾಲಿಕೆ ಸದಸ್ಯರ ಅಧಿಕಾರದ ಅವಧಿ ಸೆಪ್ಟೆಂಬರ್‌ 10ಕ್ಕೆ ಮುಕ್ತಾಯಗೊಳ್ಳಲಿದೆ. ಪಾಲಿಕೆಯಲ್ಲಿ ಆರಂಭದ ನಾಲ್ಕು ವರ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಆಡಳಿತವಿತ್ತು. ರಾಜ್ಯದಲ್ಲಿ ಮೈತ್ರಿ ಸರ್ಕಾರ ‍‍ಪತನಗೊಂಡ ಬೆನ್ನಲ್ಲೇ ಪಾಲಿಕೆಯಲ್ಲಿ ಆಡಳಿತದ ಚುಕ್ಕಾಣಿ ಬಿಜೆಪಿಗೆ ಸಿಕ್ಕಿತು. ಮೇಯರ್ ಸ್ಥಾನಕ್ಕೆ ಪದ್ಮನಾಭ ರೆಡ್ಡಿ, ಉಮೇಶ್ ಶೆಟ್ಟಿ, ಮಂಜುನಾಥ ರಾಜು, ಎಲ್‌.ಶ್ರೀನಿವಾಸ್‌ ಆಕಾಂಕ್ಷಿಗಳಾಗಿದ್ದರು. ಆದರೆ, ಅದೃಷ್ಟ ಖುಲಾಯಿಸಿದ್ದು ಗೌತಮ್‌ ಕುಮಾರ್ ಅವರಿಗೆ. ಆರ್‌ಎಸ್‌ಎಸ್‌ ನಾಯಕರ ಕೃಪಾಕಟಾಕ್ಷ ಇದಕ್ಕೆ ಕಾರಣ ಎಂದು ಪಕ್ಷದ ಪಡಸಾಲೆಯಲ್ಲಿ ಕೇಳಿ ಬಂದಿತ್ತು. ಪಕ್ಷದ ನಾಯಕರು ಗೌತಮ್‌ ಕುಮಾರ್ ಅವರ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟಿದ್ದರು. ಆದರೆ, ಮೇಯರ್‌ ಅವರು ತಮ್ಮ ಅವಧಿಯ ಬಹುತೇಕ ಕಾಲ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ (ಜುಲೈ 18ರಂದು ಅವರು ವರ್ಗವಾಗಿದ್ದಾರೆ) ಜತೆಗೆ ಸಂಘರ್ಷದಲ್ಲೇ ಕಾಲ ಕಳೆದರು. ಕೋವಿಡ್‌ ಸಂಕಷ್ಟದ ಕಾಲದಲ್ಲೂ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿಲ್ಲ ಎಂಬ ಟೀಕೆಗಳು ಪಕ್ಷದ ವಲಯದಲ್ಲೇ ವ್ಯಕ್ತವಾಯಿತು. ಆದರೆ, ಕೊನೆಯ ಒಂದು ತಿಂಗಳಲ್ಲಿ ವಿಪರೀತ ಚುರುಕಾದರು. ಅದು ಕೆಲಸದಲ್ಲಿ ಅಲ್ಲ, ಪತ್ರ ಬರೆಯುವುದರಲ್ಲಿ.

ಕಾಮಗಾರಿ ಗುತ್ತಿಗೆ ಪಡೆಯಲು ಗುತ್ತಿಗೆದಾರರು ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂಬುದು ಮೇಯರ್ ಆರೋಪ. ಗೋವಿಂದರಾಜನಗರ, ಯಲಹಂಕ, ಮಹದೇವಪುರ ವ್ಯಾಪ್ತಿಯ ಕಾಮಗಾರಿಗಳಿಗೆ ನಕಲಿ ದಾಖಲೆಗಳನ್ನು ನೀಡಲಾಗಿದೆ ಎಂದೂ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದರು. ’ಮೂರು ವಿಧಾನಸಭಾ ಕ್ಷೇತ್ರಗಳ ಉಲ್ಲೇಖ ಮಾಡಿದ್ದು ಏಕೆ. ಉಳಿದ ಕ್ಷೇತ್ರಗಳ ಬಗ್ಗೆ ಮೌನವೇಕೇ‘ ಎಂದೂ ಪ್ರಶ್ನಿಸಿದ್ದರು.

ಈ ಪತ್ರವನ್ನು ಉಲ್ಲೇಖಿಸಿ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರು ಆ. 17ರಂದು ಮೇಯರ್‌ಗೆ ಪತ್ರ ಬರೆದಿದ್ದರು. ‘ಈ ಪ್ರಕರಣವನ್ನು ಅತಿ ಗಂಭೀರ ಪ್ರಕರಣ ಎಂದು ಪರಿಗಣಿಸಿ, ಪೂರ್ಣ ಪ್ರಮಾಣದ ತನಿಖೆ ನಡೆಸಲು ಉದ್ದೇಶಿಸಲಾಗಿದೆ. ಹಾಗಾಗಿ ನಗರಾಭಿವೃದ್ಧಿ ಇಲಾಖೆಯ ಎಸಿಎಸ್‌ಗೆ ಸಲ್ಲಿಸಿದ ದೂರು ಹಾಗೂ ದಾಖಲೆಗಳ ಪ್ರತಿಗಳನ್ನು ನನ್ನ ಕಚೇರಿಗೂ ಕಳುಹಿಸಿಕೊಡಿ’ ಎಂದು ಕೋರಿದ್ದರು.

ಈ ಕುರಿತು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ನಡೆದ ಚರ್ಚೆ ವೇಳೆ ಪ್ರತಿಕ್ರಿಯಿಸಿದ್ದ ಆಯುಕ್ತರು, ‘ಸುಳ್ಳು ದಾಖಲೆ ನೀಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ಈ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು. ಈ ಕುರಿತ ದಾಖಲೆ ಒದಗಿಸಿ’ ಎಂದು ತಿಳಿಸಿದ್ದರು. ಮೇಯರ್‌ ಅವರು ಪಾಲಿಕೆ ಆಯುಕ್ತರಿಗೆ ಇಲ್ಲಿಯವರೆಗೂ ದಾಖಲೆಗಳನ್ನು ತಲುಪಿಸಿಲ್ಲ. ಮತ್ತೆ ಆ ವಿಚಾರದ ಬಗ್ಗೆ ಚಕಾರ ಎತ್ತಿಲ್ಲ. ’ಕೆಲವು ಗುತ್ತಿಗೆದಾರರು ಮೇಯರ್‌ ಅವರನ್ನು ’ಸಮಾಧಾನ‘ಪಡಿಸುವ ಕೆಲಸ ಮಾಡಿದ್ದಾರೆ. ಹಾಗಾಗಿ, ಅವರು ಮೌನಕ್ಕೆ ಶರಣಾದರು‘ ಎಂದು ಪಾಲಿಕೆಯ ಬಿಜೆಪಿ ಸದಸ್ಯರೇ ಹೇಳುವ ಮಾತಿದು. ಸಚಿವರೊಬ್ಬರು ಹಾಗೂ ಬಿಜೆಪಿಯ ಹಿರಿಯ ಶಾಸಕರೊಬ್ಬರು ಎಚ್ಚರಿಕೆ ನೀಡಿದ್ದು ಸಹ ಈ ವಿಚಾರದಲ್ಲಿ ಮೇಯರ್‌ ಮೌನ ವಹಿಸಲು ಕಾರಣ ಎಂದು ಮೇಯರ್ ಆಪ್ತ ಮೂಲಗಳು ಹೇಳಿವೆ.

’ಮೇಯರ್ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಅಗತ್ಯವೇ ಇರಲಿಲ್ಲ. ಬಿಬಿಎಂಪಿ ಆಯುಕ್ತರಿಗೆ ದಾಖಲೆಗಳನ್ನು ಸಲ್ಲಿಸಿ ಸೂಚನೆ ನೀಡಿದ್ದರೆ ಸಾಕಿತ್ತು‘ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT