ಸೋಮವಾರ, ಸೆಪ್ಟೆಂಬರ್ 16, 2019
27 °C
ಪಾಲಿಕೆ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥರ ಸೂಚನೆ

‘ಚಿಕಿತ್ಸಾ ವೆಚ್ಚ ಅಧಿಕಾರಿಗಳ ಹೆಗಲಿಗೆ’

Published:
Updated:

ಬೆಂಗಳೂರು: ‘ರಸ್ತೆ ಗುಂಡಿಯ ಕಾರಣದಿಂದ ವಾಹನ ಅಪಘಾತ ಸಂಭವಿಸಿದರೆ ಆಯಾ ವಾರ್ಡ್‌ನ ಸಹಾಯಕ ಎಂಜಿನಿಯರ್‌ (ಎಇ) ಅವರೇ ನೇರ ಹೊಣೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಅವರೇ ಪಾವತಿಸಬೇಕಾಗುತ್ತದೆ’

ಪಾಲಿಕೆ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಎಂ.ಆರ್‌.ವೆಂಕ ಟೇಶ್‌ ನೀಡಿರುವ ಎಚ್ಚರಿಕೆ ಇದು.

ಪಾಲಿಕೆಯ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು ಹಾಗೂ ಪಾದಚಾರಿ ಮಾರ್ಗ ದುರಸ್ತಿ ಕುರಿತು ಮೇಯರ್‌ ಗಂಗಾಂಬಿಕೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಎಇಗಳು ತಮ್ಮ ಕಾರ್ಯವೇನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಜನರು ವಾರ್ಡ್‌ನ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರೆ ಎಇಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ. ಅದಕ್ಕೆ ಆಸ್ಪದ ನೀಡದೆ ಪ್ರತಿನಿತ್ಯ ವಾರ್ಡ್ ಪರಿಶೀಲಿಸಿ ಇರುವ ಸಮಸ್ಯೆ ಬಗ್ಗೆ ಪಟ್ಟಿ‌ಮಾಡಿ ಮೇಲಧಿಕಾರಿಗಳಿಗೆ ತಿಳಿಸಬೇಕು. ವಾರ್ಡ್ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಮೇಯರ್‌ ಗಂಗಾಂಬಿಕೆ, ‘ವಾರ್ಡ್‌ ನಲ್ಲಿ ಇರುವ ಸಮಸ್ಯೆಯು ಬಿಬಿಎಂಪಿ, ಬೆಸ್ಕಾಂ ಅಥವಾ ಜಲಮಂಡಳಿ‌ಗಳ ಪೈಕಿ ಯಾರ ವ್ಯಾಪ್ತಿಗೆ ಬರಲಿದೆ ಎಂಬುದನ್ನೂ ಎಇಗಳು ತಿಳಿದುಕೊಂಡು ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ದೂರು ಸಲ್ಲಿಸಿದರೆ ಅದನ್ನು ತ್ವರಿತವಾಗಿ ಬಗೆಹರಿಸಿದರೆ ಪಾಲಿಕೆ ಮೇಲೆ ಜನರಲ್ಲೂ ಭರವಸೆ ಮೂಡುತ್ತದೆ’ ಎಂದರು.

‘ಪ್ರತಿಯೊಂದು ಕಾಮಗಾರಿ ಕೈಗೆತ್ತಿಕೊಳ್ಳುವಾಗಲೂ ಆಯಾ ವಾರ್ಡ್‌ನ ಪಾಲಿಕೆ ಸದಸ್ಯರು ಹಾಗೂ ಸಹಾಯಕ ಎಂಜಿನಿಯರ್ ಗಮನಕ್ಕೆ ತರಬೇಕು. ಅವರ ಗಮನಕ್ಕೆ ಬಾರದೆ ಯಾವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತಿಲ್ಲ’ ಎಂದು ಯೋಜನಾ ವಿಭಾಗದ ಅಧಿಕಾರಿಗಳಿಗೆ ಮೇಯರ್‌ ಸೂಚಿಸಿದರು.

‘ಮನಸ್ಸಿಲ್ಲದಿದ್ದರೆ ಬೇರೆ ಕಡೆ ವರ್ಗ ಮಾಡಿಸಿಕೊಳ್ಳಿ’

‘ನಿಮ್ಮ ಹೊಣೆಯನ್ನು ಸರಿಯಾಗಿ ನಿರ್ವಹಿಸಬೇಕು. ಕೆಲಸ ಮಾಡಲು ಕಷ್ಟವೆನಿಸಿದರೆ ಅಥವಾ ಮನಸ್ಸಿಲ್ಲದಿದ್ದರೆ ವರ್ಗಾವಣೆ ಮಾಡಿಕೊಂಡು ಬೇರೆ ಕಡೆ ಹೋಗಿ’ ಎಂದು ಮೇಯರ್‌ ಅವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಉದ್ದೇಶಿಸಿ ಹೇಳಿದರು.

ಪೂರ್ವ ವಲಯದ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಳ್ಳುವ ಸಂಬಂಧ ಮೇಯರ್‌ ಸಭೆ ನಡೆಸಿದರು. ‘ನಿಮ್ಮ ಕಾರ್ಯವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ನಿಮಗೆ ಚೆನ್ನಾಗಿಯೇ ಮಾಹಿತಿ ಇರುತ್ತದೆ. ಅವುಗಳ ನಿವಾರಣೆಗೆ ಯಾವುದೇ ಸಬೂಬು ನೀಡದೆ ಕ್ರಮ ಕಯಗೊಳ್ಳಬೇಕು. ಇಲ್ಲವಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು‌ ಎಚ್ಚರಿಕೆ ನೀಡಿದರು. ‘ರಸ್ತೆಗಳಲ್ಲಿ ಕಾಮಗಾರಿ ನಡೆಸುವಾಗ ಕಡ್ಡಾಯವಾಗಿ ಬ್ಯಾರಿಕೇಡ್ ಅಳವಡಿಸಬೇಕು. ಇಲ್ಲದಿದ್ದರೆ ಅಪಘಾತಕ್ಕೆ ಆಸ್ಪದ ನೀಡಿದಂತಾಗುತ್ತದೆ’ ಎಂದರು. 

ಒಎಫ್‌ಸಿ ತೆರವುಗೊಳಿಸಿ: ‘ವಾರ್ಡ್‌ಗಳಲ್ಲಿ ಮರ, ಮೇಲ್ಸೇತುವೆ, ಕೆಳಸೇತುವೆ, ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಒಎಫ್‌ಸಿ ಕೇಬಲ್‌ಗಳನ್ನು ಇಂದಿನಿಂದಲೇ ತೆರವು ಮಾಡಬೇಕು’ ಎಂದು ಮೇಯರ್‌ ಸೂಚಿಸಿದರು.

ಎಂ.ಆರ್.ವೆಂಕಟೇಶ್, ‘ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಮ್ಮ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿ ತಿಂಗಳೂ ವರದಿ ಸಲ್ಲಿಸಬೇಕು’ ಎಂದರು.

Post Comments (+)