ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಬಿಎಸ್‌ ಶುಲ್ಕ ಶೇ 15ರಷ್ಟು ಹೆಚ್ಚಳ

ಖಾಸಗಿ ವೈದ್ಯಕೀಯ ಕಾಲೇಜುಗಳ ಪಟ್ಟು–ಸರ್ಕಾರ ಒಪ್ಪಿಗೆ
Last Updated 20 ಜೂನ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಶುಲ್ಕ ಹೆಚ್ಚಳ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ, ಶೇ 15ರಷ್ಟು ಶುಲ್ಕ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿದೆ.

ಗುರುವಾರ ಇಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಇದರಿಂದಾಗಿ ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಕೋಟಾದಲ್ಲಿ ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್‌ ಮಾಡುವವರು ವಾರ್ಷಿಕ ₹97,350 ಶುಲ್ಕದ ಬದಲಿಗೆ ₹ 1,11,959 ಪಾವತಿಸಬೇಕಾಗುತ್ತದೆ. ದಂತ ವೈದ್ಯಕೀಯ ಅಭ್ಯರ್ಥಿಗಳು ₹ 63,030ರ ಬದಲಿಗೆ ₹ 72,484 ಶುಲ್ಕ ಪಾವತಿಸಬೇಕಾಗುತ್ತದೆ.

ಸರ್ಕಾರಿ ಕೋಟಾ ಸೀಟಿನ ಜತೆಗೆ ಸಾಂಸ್ಥಿಕ ಕೋಟಾ ಸೀಟಿನ ಶುಲ್ಕವನ್ನೂ ಶೇ 15ರಷ್ಟು ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ಈಹಿಂದೆ ಇದ್ದ ₹ 6.83 ಲಕ್ಷ ಶುಲ್ಕದ ಬದಲಿಗೆ ₹ 7.85 ಲಕ್ಷ ಶುಲ್ಕ ಪಾವತಿಸಬೇಕು. ದಂತ ವೈದ್ಯಕೀಯ ಕಾಲೇಜಿನಲ್ಲಿ ₹ 4.63 ಲಕ್ಷದ ಬದಲಿಗೆ ₹ 5.32 ಲಕ್ಷ ಶುಲ್ಕ ಪಾವತಿಸಬೇಕಾಗುತ್ತದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಖಾಸಗಿ ವೈದ್ಯಕೀಯ ಕಾಲೇಜುಗಳು, ಭಾಷಾ, ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಗಳು, ಡೀಮ್ಡ್‌ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಶುಲ್ಕ ಹೆಚ್ಚಳ ಮಾಡಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಆರನೇ ವೇತನ ಆಯೋಗದ ಶಿಫಾರಸಿನಂತೆವೇತನ ಹೆಚ್ಚಳ, ವೈದ್ಯಕೀಯ ಪರಿಕರಗಳ ದುಬಾರಿ ವೆಚ್ಚ ಹಾಗೂ ಕಾಲೇಜುಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಮೊದಲಾದ ಕಾರಣದಿಂದಶುಲ್ಕವನ್ನು ಶೇ 25ರಷ್ಟು ಹೆಚ್ಚಿಸಬೇಕು ಎಂದು ಖಾಸಗಿ ಕಾಲೇಜುಗಳು ಪಟ್ಟು ಹಿಡಿದಿದ್ದವು. ಆದರೆ ಶೇ 15 ರಷ್ಟು ಮಾತ್ರ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಸಮ್ಮತಿ ಸೂಚಿಸಿತು.

‘ನಾವು ಶೇ 25ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದೆವು. ಆದರೆ ನಾಲ್ಕು ದಿನದಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕಿರುವುರಿಂದ ಈ ವಿಷಯವನ್ನು ಇನ್ನಷ್ಟು ಸುದೀರ್ಘ ಎಳೆದಾಡುವುದು ಬೇಡ ಎಂಬ ಕಾರಣಕ್ಕೆ ಶೇ 15ರಷ್ಟು ಶುಲ್ಕ ಹೆಚ್ಚಳಕ್ಕೆ ಸಮ್ಮತಿಸಿದೆವು’ ಎಂದು ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನದ ಅಧ್ಯಕ್ಷ ಜಯರಾಂ ತಿಳಿಸಿದರು.

ಆದರೆ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಶುಲ್ಕದ ಪ್ರಮಾಣ ಕಳೆದ ವರ್ಷದಷ್ಟೇ ಅಂದರೆ ಕ್ರಮವಾಗಿ ₹ 50 ಸಾವಿರ ಮತ್ತು ₹ 40 ಸಾವಿರ ಮಾತ್ರ ಇರುತ್ತದೆ.

ವಿದ್ಯಾರ್ಥಿಗಳಿಗೆ ಆತಂಕ:ಶುಲ್ಕವನ್ನು ಶೇ 15ರಷ್ಟು ಹೆಚ್ಚಿಸಲು ಸರ್ಕಾರ ಸಮ್ಮತಿ ಸೂಚಿಸಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡಿದ್ದಾರೆ. ಎಂಬಿಬಿಎಸ್‌, ಬಿಡಿಎಸ್‌ ಕನಸನ್ನು ಕೈಚೆಲ್ಲಬೇಕಷ್ಟೇ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರು.

ಹಲವು ವಿದ್ಯಾರ್ಥಿ ಸಂಘಟನೆಗಳೂ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ‘ಸರ್ಕಾರ ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಬಿಗೆ ಮಣಿದಿದೆ. ಶುಲ್ಕ ಹೆಚ್ಚಳ ವಿರುದ್ಧ ನಾವು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT