ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆತನ ವ್ಯಾಜ್ಯ: ಮೋದಿ ಆಸ್ಪತ್ರೆಗೆ ಬೀಗ, ಪ್ರತಿಭಟನೆ

ಹಣ, ದಾಖಲೆ ಕಳ್ಳತನ ಆರೋಪದಡಿ ಎಫ್‌ಐಆರ್
Last Updated 8 ಡಿಸೆಂಬರ್ 2022, 16:44 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ಎಂ.ಸಿ. ಮೋದಿ ಕಣ್ಣಿನ ಆಸ್ಪತ್ರೆ ಒಡೆತನದ ವಿಚಾರವಾಗಿ ಸಂಬಂಧಿಕರ ನಡುವೆ ವ್ಯಾಜ್ಯ ಉಂಟಾಗಿದ್ದು, ಮೋದಿ ಅವರ ಅಣ್ಣನ ಮಗ ಸುಭಾಷ್ ಹಾಗೂ ಇತರರು ಆಸ್ಪತ್ರೆಗೆ ಬೀಗ ಹಾಕಿದ್ದಾರೆ. ಇದನ್ನು ಖಂಡಿಸಿ ಆಸ್ಪತ್ರೆಯ ಉದ್ಯೋಗಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಪದ್ಮಭೂಷಣ ಡಾ. ಎಂ.ಸಿ. ಮೋದಿ ಪಬ್ಲಿಕ್ ಟ್ರಸ್ಟ್ ಅಡಿಯಲ್ಲಿ ರಾಜಾಜಿನಗರದ ಪಶ್ಚಿಮ ಕಾರ್ಡ್‌ ರಸ್ತೆಯ 2ನೇ ಹಂತದಲ್ಲಿ ಆಸ್ಪತ್ರೆ ಸ್ಥಾಪಿಸಲಾಗಿದೆ. ಟ್ರಸ್ಟಿಗಳಾದ ಎಂ.ಸಿ. ಮೋದಿ, ಮಗ ಅಮರನಾಥ್ ಹಾಗೂ ಸೊಸೆ ಸುವರ್ಣಾ ತೀರಿಕೊಂಡ ನಂತರ ವಾರಸುದಾರರಿಲ್ಲದಿದ್ದರಿಂದ ಉದ್ಯೋಗಿಗಳೇ ಆಸ್ಪತ್ರೆ ಆಡಳಿತ ನಡೆಸುತ್ತಿದ್ದಾರೆ. ಇದರ ನಡುವೆಯೇ ಸಂಬಂಧಿಕರು ಎಂಬುದಾಗಿ ಹೇಳುತ್ತಿರುವ ಹಲವರು, ಆಸ್ಪತ್ರೆಯ ಒಡೆತನ ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

‘ನಾನು ಟ್ರಸ್ಟಿ. ಆಸ್ಪತ್ರೆ ಒಡೆತನ ನನಗೆ ಸೇರಿದೆಂದು ಹೈಕೋರ್ಟ್ ಆದೇಶ ನೀಡಿದೆ’ ಎಂಬುದಾಗಿ ಹೇಳಿ ಡಿ. 2ರಂದು ಸಂಜೆ ಆಸ್ಪತ್ರೆಗೆ ಬಂದಿದ್ದ ಸುಭಾಷ್ ಹಾಗೂ ಇತರರು, ಆಡಳಿತ ಮಂಡಳಿ ಕಚೇರಿಗೆ ಹೋಗಿದ್ದರು. ಒಡೆತನ ತಮ್ಮದೆಂದು ಉದ್ಯೋಗಿಗಳಿಗೆ ಹೇಳಿದ್ದರು. ಅದಕ್ಕೆ ಒಪ್ಪದ ಉದ್ಯೋಗಿಗಳು, ‘ಟ್ರಸ್ಟ್‌ಗೆ ವಾರಸುದಾರರು ಇಲ್ಲ. ನೀವು ಟ್ರಸ್ಟಿ ಎಂಬುದು ಸುಳ್ಳು. ನಿಮಗೆ ಇಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು’ ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಮೂಲಗಳು ಹೇಳಿವೆ.

‘ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸುಭಾಷ್ ಹಾಗೂ ಇತರರು, ಆಸ್ಪತ್ರೆಗೆ ಬೀಗ ಹಾಕಿಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಉದ್ಯೋಗಿಗಳು, ‘ನೂರಾರು ಕೋಟಿ ಮೌಲ್ಯದ ಆಸ್ಪತ್ರೆಯ ಆಸ್ತಿ ಕಬಳಿಸಲು ಹುನ್ನಾರ ನಡೆಸಿರುವ ಸುಭಾಷ್ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂಬುದಾಗಿ ಒತ್ತಾಯಿಸುತ್ತಿದ್ದಾರೆ. ಆದರೆ, ಒಡೆತನದ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಣ, ದಾಖಲೆ ಕಳ್ಳತನ ಆರೋಪ: ‘ಸುಭಾಷ್ ಮೋದಿ, ಅವರ ಮಗ ಮಲ್ಲಿಕಾರ್ಜುನ್ ಹಾಗೂ ಸೊಸೆ ಪ್ರಿಯದರ್ಶಿನಿ ಆಸ್ಪತ್ರೆಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಕೋಟಿಗೂ ಹೆಚ್ಚು ಹಣ ಹಾಗೂ ಟ್ರಸ್ಟ್‌ನ ದಾಖಲೆಗಳನ್ನು ಕದ್ದುಕೊಂಡು ಹೋಗಿದ್ದಾರೆ’ ಎಂದು ಆರೋಪಿಸಿ ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್ ಅವರು ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಮೂವರೂ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಸುವರ್ಣಾ ಮೋದಿ ಅವರ ಸಂಬಂಧಿ ಎಂದು ಹೇಳಿಕೊಂಡಿರುವ ಲೀಲಾದೇವಿ ಪ್ರಸಾದ್ ಅವರು ಡಿ. 3ರಂದು ದೂರು ನೀಡಿದ್ದಾರೆ. ಹಣ ಹಾಗೂ ದಾಖಲೆ ಕಳ್ಳತನ ಪ್ರಕರಣ ದಾಖಲಾಗುತ್ತಿದ್ದಂತೆ ಸುಭಾಷ್ ಹಾಗೂ ಇತರರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಜೊತೆಗೆ, ಆಸ್ಪತ್ರೆ ಬಳಿ ಭದ್ರತೆಗಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT