ಭಾನುವಾರ, ಸೆಪ್ಟೆಂಬರ್ 27, 2020
26 °C
ಕೋವಿಡ್ ನಿಯಂತ್ರಣಕ್ಕಾಗಿ ಉಪಕರಣ ಖರೀದಿ ಪ್ರಕರಣ

ವೈದ್ಯಕೀಯ ಉಪಕರಣ ಖರೀದಿ: ಸಿಎಜಿ ವರದಿಗೆ ಪಿಎಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್ ಸೋಂಕು ಪರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಮಾಡಲಾಗಿರುವ ವೈದ್ಯಕೀಯ ಉಪಕರಣಗಳ ಖರೀದಿ ಮತ್ತು ಎಸ್‌ಡಿಆರ್‌ಎಫ್‌ ಹಣದ ಖರ್ಚಿನ ಸಂಬಂಧ ವಿಶೇಷ ಲೆಕ್ಕಪರಿಶೋಧನೆ‌ ನಡೆಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮಹಾಲೇಖಪಾಲರಿಗೆ (ಸಿಎಜಿ) ನಿರ್ದೇಶನ ನೀಡಿದೆ.

ಇದಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಿ 15 ದಿನಗಳಲ್ಲಿ ಆಡಿಟ್‌ ಮಾಡಿಸಬೇಕು ಎಂದು ಸಮಿತಿಯ ಅಧ್ಯಕ್ಷ ಎಚ್‌.ಕೆ.ಪಾಟೀಲ ಸೂಚಿಸಿದ್ದಾರೆ.

ಇದಕ್ಕಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯು ಸರ್ಕಾರಿ ಮತ್ತು ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್‌ ನಿರ್ವಹಣೆಗಾಗಿ ಖರೀದಿಸಿರುವ ಎಲ್ಲ ಉಪಕರಣಗಳ ಮಾಹಿತಿಯನ್ನು ಒದಗಿಸಬೇಕು ಎಂದು ಹೇಳಿದ್ದಾರೆ.

ಸ್ಯಾನಿಟೈಸರ್‌, ಪಿಪಿಇ ಕಿಟ್‌, ವೆಂಟಿಲೇಟರ್‌, ಆಂಬುಲೆನ್ಸ್‌ ಖರೀದಿಯ ಪ್ರತಿ ಸಾಮಗ್ರಿಯ ದರ, ಕಂಪನಿ ಮತ್ತು ವೈದ್ಯಕೀಯ ಕಾಲೇಜುವಾರು ಪೂರ್ಣ ಮಾಹಿತಿಯನ್ನು ಒದಗಿಸಬೇಕು. ತಜ್ಞರ ಶಿಫಾರಸ್ಸಿಲ್ಲದೆ ಪಿಪಿಇ ಕಿಟ್‌, ಮಾಸ್ಕ್‌ ಸೇರಿದಂತೆ ಯಾವ ಯಾವ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದೆ. ಈ ಖರೀದಿಯ ಜವಾಬ್ದಾರಿಯನ್ನು ಯಾವ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗಿತ್ತು ಎಂಬುದರ ಪೂರ್ಣ ವಿವರ ಒದಗಿಸಬೇಕು.

ಅಂಬುಲೆನ್ಸ್ ಮತ್ತು ಇತರ ಸಲಕರಣೆಗಳ ಖರೀದಿ ಅಂದಾಜು ವೆಚ್ಚವನ್ನು ₹815 ಕೋಟಿಗೆ ಏರಿಕೆ ಆಗಿರುವುದಕ್ಕೆ ತಜ್ಞರು ಅಥವಾ ಅಧಿಕಾರಿಗಳು ಸಭೆಯಲ್ಲಿ ನೀಡಿರುವ ಸಮರ್ಥನೆಯನ್ನು ಸಭಾ ನಡಾವಳಿಗಳೊಂದಿಗೆ ಒದಗಿಸಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯು ಎಷ್ಟು ಎನ್‌–95 ಮಾಸ್ಕ್‌ಗಳನ್ನು ಖರೀದಿಸಿದೆ. ಯಾವ ಕಂಪನಿಗಳಿಂದ ಎಷ್ಟು ದರದಲ್ಲಿ ಖರೀದಿಸಲಾಗಿದೆ ಎಂಬ ವಿವರ ನೀಡಬೇಕು. ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಮಧ್ಯೆ ನಡೆದ ಸಭೆಯ ನಡಾವಳಿಗಳನ್ನೂ ಒದಗಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಸರಬರಾಜು ಮಾಡಿದ್ದ ಪಿಪಿಇ ಕಿಟ್‌ಗಳ ಗುಣಮಟ್ಟವನ್ನು ಯಾವ ಹಂತದಲ್ಲಿ ಪರಿಶೀಲಿಸಲಾಗಿದೆ? ಖರೀದಿಸಿದ ಉಪಕರಣಗಳನ್ನು ದಾಸ್ತಾನಿಗೆ ತೆಗೆದುಕೊಳ್ಳುವ ಮುನ್ನ ಗುಣಮಟ್ಟ, ಸರಬರಾಜು ಮಾಡಿದ ಒಟ್ಟು ಸಂಖ್ಯೆ, ಯಾವ ಹಂತದ ಅಧಿಕಾರಿಗಳು ಪರಿಶೀಲಿಸಿದರು, ಡೆಲಿವರಿ ಚಲನ್‌ ಮತ್ತು ದಾಸ್ತಾನಿಗೆ ತಾಳೆ ಹಾಕಿ ಪ್ರಮಾಣೀ ಕರಿಸಿದವರು ಯಾರು ಎಂಬುದರ ವಿವರವನ್ನೂ ಸಿಎಜಿಗೆ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು