ಭಾನುವಾರ, ನವೆಂಬರ್ 17, 2019
28 °C

ಮರ್ಸಿಡಿಸ್‌ ಬೆಂಜ್‌ ಕಾರ್‌ಗಳ ಚಾಲನಾ ಸಂಭ್ರಮ

Published:
Updated:
Prajavani

ಬೆಂಗಳೂರು: ಐಷಾರಾಮಿ ಕಾರ್‌ ತಯಾರಿಸುವ ದೇಶದ ಅತಿದೊಡ್ಡ ಸಂಸ್ಥೆಯಾಗಿರುವ ಮರ್ಸಿಡಿಸ್‌ ಬೆಂಜ್‌, ತನ್ನ ವಿವಿಧ ಮಾದರಿಯ ಕಾರ್‌, ಎಸ್‌ಯುವಿಗಳ ಚಾಲನಾ ಅನುಭವದ ಸಂಭ್ರಮ ಹೆಚ್ಚಿಸುವ ಎರಡು ದಿನಗಳ ‘ಲಕ್ಸ್‌ ಡ್ರೈವ್‌ ಲೈವ್‌’ಗೆ ಶನಿವಾರ ಮಧ್ಯಾಹ್ನ ಚಾಲನೆ ನೀಡಿದೆ.

ವಿಲಾಸಿ ಬೆಂಜ್‌ ಕಾರ್‌ಗಳ ಮಾಲೀಕರ ಚಾಲನಾ ಅನುಭವ ಹೆಚ್ಚಿಸುವ ಮತ್ತು ಈ ಕಾರ್‌ಗಳನ್ನು ಖರೀದಿಸಲು ಬಯಸುವವರಿಗೆ ಸುರಕ್ಷತಾ ಸೌಲಭ್ಯಗಳನ್ನು ಪರಿಚಯಿಸುವ ಈ ಕಾರ್ಯಕ್ರಮದಲ್ಲಿ ಮೊದಲ ದಿನವೇ ವಾಹನ ಪ್ರಿಯರು ಗಮನಾರ್ಹ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಖರೀದಿದಾರರಿಗೆ ಸ್ಥಳದಲ್ಲಿ ಹಣಕಾಸು ಸೌಲಭ್ಯವನ್ನೂ ಕಲ್ಪಿಸಲಾಗಿತ್ತು.

ವಿಲಾಸಿ ಕಾರ್‌ಗಳ ರೋಮಾಂಚಕ ಚಾಲನಾ ಅನುಭವ, ರಸಪಾಕ ಮತ್ತು ಮನಕ್ಕೆ ಮುದ ನೀಡುವ ಸಂಗೀತದ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಜನಪ್ರಿಯ ನಳಪಾಕ ತಜ್ಞೆ ಸರಹ್ ಟಾಡ್‌ ಅವರು ಸ್ಥಳದಲ್ಲಿಯೇ ಸಿದ್ಧಪಡಿಸುವ ಬಾಯಿ ಚಪ್ಪರಿಸುವ ಖಾದ್ಯಗಳನ್ನು ಸವಿಯುವ ಜತೆಗೆ ಎಂಟಿವಿ ಸಂಗೀತ ರಸಧಾರೆ ಆಸ್ವಾದಿಸುವ ಅವಕಾಶವೂ ಇಲ್ಲಿದೆ. 

ವಿಶೇಷವಾಗಿ ವಿನ್ಯಾಸಗೊಳಿಸಿದ ಪರೀಕ್ಷಾರ್ಥ ಚಾಲನೆ ಟ್ರ್ಯಾಕ್‌ನಲ್ಲಿ ವಿಲಾಸಿ ಕಾರ್‌ಗಳನ್ನು ಓಡಿಸುವ ವಿಶೇಷ ಅನುಭವ ಪಡೆಯಬಹುದು. ಸ್ವಯಂ ಚಾಲನಾ ವಲಯದಲ್ಲಿ ಕಂಪನಿಯ ವಿವಿಧ ಶ್ರೇಣಿಯ ಕಾರ್‌, ಎಸ್‌ಯುವಿಗಳನ್ನು ಚಲಾಯಿಸಬಹುದು.

‘ಕಂಪನಿಯ ಪಾಲಿಗೆ ಬೆಂಗಳೂರು ಪ್ರಮುಖ ಮಾರುಕಟ್ಟೆಯಾಗಿದ್ದು, ರೋಚಕ ಅನುಭವದ ಚಾಲನೆ, ಸ್ವಾದಿಷ್ಟ ತಿನಿಸು ಮತ್ತು ಸಂಗೀತದ ಮೂಲಕ ಗ್ರಾಹಕರ ಮನ ಗೆದ್ದು ಮರ್ಸಿಡಿಸ್‌ ಬೆಂಜ್‌ ಬ್ರ್ಯಾಂಡ್‌ ಬಲಪಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಮರ್ಸಿಡಿಸ್‌ ಬೆಂಜ್‌ ಇಂಡಿಯಾದ ಸಿಇಒ ಮಾರ್ಟಿನ್‌ ಶ್ವೆಂಕ್‌ ಹೇಳಿದ್ದಾರೆ.

ನೈಸ್‌ ರಸ್ತೆಯಲ್ಲಿ ಭಾನುವಾರವೂ ಈ ಕಾರ್ಯಕ್ರಮ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಆಸಕ್ತರು  luxedrive.in ಅಂತರ್ಜಾಲ ತಾಣದಲ್ಲಿ ಹೆಸರು ನೋಂದಾಯಿಸಿ ಭಾಗವಹಿಸಬಹುದಾಗಿದೆ.

 

ಪ್ರತಿಕ್ರಿಯಿಸಿ (+)