ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸದಸ್ಯೆ ಪತಿಯ ಮೇಲೆ ಸಗಣಿ ಎರಚಿದ ವ್ಯಾಪಾರಿಗಳು!

ಫುಟ್‌ಪಾತ್‌ ಅಂಗಡಿಗಳ ತೆರವು ವೇಳೆ ಪಾಲಿಕೆ ಸದಸ್ಯೆಯ ಪತಿ, ಮಗನ ಮೇಲೆ ಕೃತ್ಯ
Last Updated 13 ಮೇ 2020, 20:35 IST
ಅಕ್ಷರ ಗಾತ್ರ

ಬೆಂಗಳೂರು: ಪಾದಚಾರಿ ಮಾರ್ಗದಲ್ಲಿದ್ದ ತರಕಾರಿ ಅಂಗಡಿಗಳನ್ನು ತೆರವುಗೊಳಿಸಲು ಅಧಿಕಾರಿಗಳ ಜತೆ ಬಂದಿದ್ದ ಬಿಬಿಎಂಪಿ ಸದಸ್ಯೆ ಪ್ರತಿಭಾ ಧನರಾಜ್‌ ಅವರ ಪತಿ ಧನರಾಜ್‌ ಮತ್ತು ಮಗ ವೈಷ್ಣವ್‌ ಮೇಲೆ ಬೀದಿಬದಿ ವ್ಯಾಪಾರಿಗಳು ಸಗಣಿ ಎರಚಿದ ಘಟನೆ ಬುಧವಾರ ಬೆಳಿಗ್ಗೆ 6 ಗಂಟೆಗೆ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ನಡೆದಿದೆ.

ಘಟನೆಯನ್ನು ಖಂಡಿಸಿ ಪರ ಮತ್ತು ವಿರುದ್ಧ ಗುಂಪುಗಳು ಪ್ರತಿಭಟನೆ ನಡೆಸಿದ್ದರಿಂದ ಕೆಲಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಬಂದ ಕಲಾಸಿಪಾಳ್ಯ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಸಗಣಿ ಎರಚಿದ ಆರೋಪದಲ್ಲಿ ಸೆಂಥಿಲ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಲಾಸಿಪಾಳ್ಯದ ಫುಟ್‌ಪಾತ್‌ಗಳ ಮೇಲೆ ಬೀದಿಬದಿ ವ್ಯಾಪಾರಿಗಳು ತೆರೆದಿದ್ದ ಅಂಗಡಿಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿ ರವೀಂದ್ರ ಮತ್ತಿತರರ ಜತೆ ಧನರಾಜ್ ಬಂದಿದ್ದರು. ಈ ಮಾಹಿತಿ ಸಿಗುತ್ತಿದ್ದಂತೆ ವ್ಯಾಪಾರಿಗಳು, ಸಗಣಿ ಪ್ಯಾಕೆಟ್ ಸಿದ್ಧಪಡಿಸಿಕೊಂಡಿದ್ದರು. ಅಂಗಡಿಗಳನ್ನು ತೆರವುಗೊಳಿ ಸಲು ಮುಂದಾಗುತ್ತಿದ್ದಂತೆ ಸಗಣಿ ಪ್ಯಾಕೆಟ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆಯುತ್ತಿದ್ದ ಮಧ್ಯೆಯೇ ಧನರಾಜ್ ಬೆಂಬಲಿಗರು ಮತ್ತು ಸ್ಥಳೀಯ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಸ್ಥಳೀಯರು ಹಾಗೂ ಬಿಬಿಎಂಪಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದ್ದಾರೆ.

ಪರ–ವಿರುದ್ಧ ಪ್ರತಿಭಟನೆ: ಸಗಣಿ ಎರಚಿದವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಧನರಾಜ್ ಬೆಂಬಲಿಗರೊಂದಿಗೆ ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದ್ದಾರೆ. ಆಗ ವ್ಯಾಪಾರಿಗಳ ಗುಂಪೊಂದು ಧನರಾಜ್ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು, ‘ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಯಮದ ಅನ್ವಯ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ’ ಎಂದು ಪ್ರತಿಭಟನನಿರತರನ್ನು ಚದುರಿಸಿದರು.

ಬಳಿಕ ಧನರಾಜ್ ಅವರು ಮಗನ ಜೊತೆ ಕಲಾಸಿಪಾಳ್ಯ ಠಾಣೆಗೆ ಬಂದು ದೂರು ನೀಡಿದ್ದಾರೆ. ಬೀದಿಬದಿ ವ್ಯಾಪಾರಿಗಳೂ ಕೂಡಾ ಪ್ರತಿದೂರು ನೀಡಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಹಫ್ತಾವಸೂಲಿ ಮಾಡುವ ಕಿಡಿಗೇಡಿಗಳ ಕೃತ್ಯ’

ಘಟನೆ ಕುರಿತು ಪ್ರತಿಕ್ರಿಯಿಸಿದ ಪ್ರತಿಭಾ ಧನರಾಜ್, ‘ಅನುಮತಿ ಇಲ್ಲದೆ ಕಲಾಸಿಪಾಳ್ಯ ಮುಖ್ಯರಸ್ತೆ ಬದಿಯಲ್ಲಿ ವ್ಯಾಪಾರಿಗಳು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಬುಧವಾರ ಬೆಳಿಗ್ಗೆ 5.30ಕ್ಕೆ ಮಾರುಕಟ್ಟೆ ಪರಿಶೀಲನೆಗೆ ಬರುವುದಾಗಿ ಬಿಬಿಎಂಪಿ ಅಧಿಕಾರಿ ರವೀಂದ್ರ ತಿಳಿಸಿದ್ದರು. ಕಾರಣಾಂತರಗಳಿಂದ ಪರಿಶೀಲನೆಗೆ ನನಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ, ಅಧಿಕಾರಿಗಳ ಜೊತೆ ಪತಿ ತೆರಳಿದ್ದರು. ಈ ವೇಳೆ ವ್ಯಾಪಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಸಗಣಿ ಎರಚಿದ್ದಾರೆ’ ಎಂದರು.

‘ಕೆಲವು ಕಿಡಿಗೇಡಿಗಳು ಮಾರುಕಟ್ಟೆ ವ್ಯಾಪಾರಿಗಳಿಂದ ಪ್ರತಿದಿನ ₹ 500 ರಿಂದ ₹ 1000ದವರೆಗೆಹಫ್ತಾವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ‘ ಎಂದು ಆರೋಪಿಸಿದರು.

ವ್ಯಾಪಾರಿಗಳ ಆರೋಪ: ‘ಕಲಾಸಿಪಾಳ್ಯದಲ್ಲಿ ವ್ಯಾಪಾರ ನಡೆಸುವವರು ತಮ್ಮಿಂದಲೇ ಬಡ್ಡಿಗೆ ಹಣ ಪಡೆಯುವಂತೆ ಧನರಾಜ್ ಕಡೆಯವರು ಒತ್ತಾಯಿಸುತ್ತಿದ್ದಾರೆ. ಬಡ್ಡಿ ವ್ಯವಹಾರ ನಡೆಸುವ ಧನರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೆಲವು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT