ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್‌ ಮೇಲ್ಸೇತುವೆ–ಬೇರಿಂಗ್‌ ದುರಸ್ತಿ

ಗೊರಗುಂಟೆಪಾಳ್ಯ– ಹೆಬ್ಬಾಳ ನಡುವಿನ ಹೊರವರ್ತುಲ ರಸ್ತೆ ಬಳಿ ದೋಷ
Last Updated 20 ಫೆಬ್ರುವರಿ 2022, 21:29 IST
ಅಕ್ಷರ ಗಾತ್ರ

ಬೆಂಗಳೂರು: ಗೊರಗುಂಟೆಪಾಳ್ಯ– ಹೆಬ್ಬಾಳ ನಡುವಿನ ಹೊರವರ್ತುಲ ರಸ್ತೆಯಲ್ಲಿ ಎಂಇಎಸ್‌ ಬಳಿಯ ಮೇಲ್ಸೇತುವೆಯ ಬೇರಿಂಗ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, ಅದರ ದುರಸ್ತಿ ಕಾರ್ಯವನ್ನು ನೈರುತ್ಯ ರೈಲ್ವೆ ಕೈಗೆತ್ತಿಕೊಂಡಿದೆ.

2017ರಲ್ಲಿ ನಿರ್ಮಿಸಿದ್ದ ಈ ಮೇಲ್ಸೇತುವೆಯನ್ನು ನೈರುತ್ಯ ರೈಲ್ವೆಯು ಬಿಬಿಎಂಪಿಗೆ ಹಸ್ತಾಂತರಿಸಿತ್ತು. ಇದರ ಬೇರಿಂಗ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು. ಅದನ್ನು ದುರಸ್ತಿಪಡಿಸುವಂತೆ ಕೋರಿ ಬಿಬಿಎಂಪಿಯು ನೈರುತ್ಯ ರೈಲ್ವೆ ಅಧಿಕಾರಿಗಳಿಗೆ 2021ರ ನವೆಂಬರ್‌ 25ರಂದು ಪತ್ರ ಬರೆದಿತ್ತು.

‘ತಜ್ಞರು ತಪಾಸಣೆ ನಡೆಸಿದ ಸಂದರ್ಭದಲ್ಲಿ ಎಂಇಎಸ್‌ ಮೇಲ್ಸೇತುವೆಯ ಬೇರಿಂಗ್‌ನಲ್ಲಿ ದೋಷವಿರುವುದು ಗಮನಕ್ಕೆ ಬಂದಿದೆ. ರೈಲ್ವೆ ಇಲಾಖೆಗೆ ಪತ್ರ ಬರೆದು ಈ ಬಗ್ಗೆ ಗಮನ ಸೆಳೆದಿದ್ದೇವೆ. ಅವರು ಬೇರಿಂಗ್‌ ದುರಸ್ತಿಪಡಿಸಲು ಕ್ರಮಕೈಗೊಂಡಿದ್ದಾರೆ’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಬಿಎಂಪಿಯು ನೈರುತ್ಯ ರೈಲ್ವೆಗೆ ಬರೆದ ಪತ್ರದ ಪ್ರಕಾರ, ಮೇಲ್ಸೇತುವೆಯ ಬೇರಿಂಗ್‌ಗಳ ಹಾಗೂ ಸಂರಚನೆಗೆ ಸಂಬಂಧಿಸಿದ ಅಂಶಗಳ ನಿರ್ವಹಣೆ ರೈಲ್ವೆ ಇಲಾಖೆ ಜವಾಬ್ದಾರಿ. ಮೇಲ್ಸೇತುವೆಯ ತಡೆಗೋಡೆ ಹಾಗೂಮೇಲ್ಮೈನ ನಿರ್ವಹಣೆ ಮಾಡುವುದು ಮತ್ತು ಡಾಂಬರೀಕಣ ಬಿಬಿಎಂಪಿಯ ಜವಾಬ್ದಾರಿ.

ಈ ಮೇಲ್ಸೇತುವೆ ನಿರ್ಮಾಣಗೊಂಡ ಮೂರೇ ವರ್ಷಗಳಲ್ಲಿ ಡಾಂಬರು ಪದರದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. 2020ರ ಆಗಸ್ಟ್‌ನಲ್ಲಿ ಈ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿ, ದೋಷ ಸರಿಪಡಿಸಲಾಗಿತ್ತು. ಈ ದುರಸ್ತಿ ಕಾರ್ಯಕ್ಕೆ ಬಿಬಿಎಂಪಿ ₹ 3 ಕೋಟಿ ವೆಚ್ಚ ಮಾಡಿತ್ತು. 2021ರ ಜುಲೈನಲ್ಲಿ ಇಲ್ಲಿನ ಕಾಂಕ್ರಿಟ್‌ ಸ್ಲ್ಯಾಬ್‌ಗಳನ್ನು ಜೋಡಿಸಿದ ಜಾಗದಲ್ಲೂ ಬಿರುಕು ಕಂಡುಬಂದಿತ್ತು. ತಜ್ಞರಿಂದ ಕೂಲಂಕಷವಾಗಿ ಪರಿಶೀಲಿಸಿದಾಗ ಮೇಲ್ಸೇತುವೆಯ ಸಂರಚನೆಯಲ್ಲೇ ದೋಷ ಇರುವುದು, ಇದರ ಕಾಂಕ್ರೀಟ್‌ ಸ್ಲ್ಯಾಬ್‌ಗಳು ಸ್ಥಳಾಂತರಗೊಂಡು ಕಂಪಿಸುತ್ತಿರುವುದು ಅದರಿಂದಾಗಿ ಬೇರಿಂಗ್‌ಗಳಿಗೆ ಹಾನಿ ಆಗಿರುವುದು ಪತ್ತೆಯಾಗಿತ್ತು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ 42 ಮೇಲ್ಸೇತುವೆಗಳಿದ್ದು, ನಾವು ಪ್ರತಿ ವರ್ಷವೂ ಈ ಎಲ್ಲ ಮೇಲ್ಸೇತುವೆಗಳ ತಪಾಸಣೆ ನಡೆಸುತ್ತೇವೆ. ತಪಾಸಣೆ ವೇಳೆ ಮೇಲ್ಸೇತುವೆಯಲ್ಲಿ ದೋಷ ಇರುವುದು ಸಂದೇಹ ವ್ಯಕ್ತವಾದರೆ ಅದನ್ನು ಸಂರಚನೆಯ ಪರೀಕ್ಷೆಗೆ ಒಳಪಡಿಸುತ್ತೇವೆ. ಮೇಲ್ಸೇತುವೆಯ ದೋಷವಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೂ ಅವುಗಳ ಸಂರಚನೆಯ ಪರೀಕ್ಷೆ ನಡೆಸುತ್ತೇವೆ’ ಎಂದು ಪ್ರಹ್ಲಾದ್‌ ಮಾಹಿತಿ ನೀಡಿದರು.

ಐಟಿಸಿ ಮೇಲ್ಸೇತುವೆಯಲ್ಲೂ ದೋಷ

ಐಟಿಸಿ ಕಾರ್ಖಾನೆ ಬಳಿಯ ಮೇಲ್ಸೇತುವೆಯಲ್ಲಿ ದೋಷ ಕಾಣಿಸಿಕೊಂಡಿರುವ ಸಂದೇಹವಿದ್ದು ಇದನ್ನೂ ಸಂರಚನಾ ಪರೀಕ್ಷೆಗೆ ಒಳಪಡಿಸಲು ಬಿಬಿಎಂಪಿ ನಿರ್ಧರಿಸಿದೆ.

‘ಈ ಮೇಲ್ಸೇತುವೆಯಲ್ಲಿ ಹೊರನೋಟಕ್ಕೆ ಯಾವುದೇ ದೋಷ ಕಾಣಿಸಿಲ್ಲ. ನಾನ್‌ಡಿಸ್ಟ್ರಕ್ಟಿವ್‌ ಪರೀಕ್ಷೆ ಸಂದರ್ಭದಲ್ಲಿ ಈ ಮೇಲ್ಸೇತುವೆಯ ಸಾಮರ್ಥ್ಯ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಹಾಗಾಗಿ ಇದನ್ನು ಇನ್ನೊಮ್ಮೆ ಕೂಲಂಕಷವಾಗಿ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದೇವೆ’ ಎಂದು ಬಿ.ಎಸ್‌.ಪ್ರಹ್ಲಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT