ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಗುತ್ತಿಗೆ: ನಿಗಮದಿಂದ ಅಧ್ಯಯನ

ಎರಡನೇ ಹಂತದ ಕಾರ್ಯಾಚರಣೆ ಮತ್ತು ನಿರ್ವಹಣೆ: ಚೆನ್ನೈ ಮಾದರಿ ಜಾರಿಗೆ ಆಡಳಿತ ಮಂಡಳಿ ಸಲಹೆ
Last Updated 4 ಅಕ್ಟೋಬರ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೋ' ಎರಡನೇ ಹಂತದ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಗುತ್ತಿಗೆ ನೀಡಲು ನಿರ್ಧರಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ರೈಲುಗಳನ್ನೂ ಗುತ್ತಿಗೆ ಪಡೆಯುವ ಚಿಂತನೆಯಲ್ಲಿದೆ. ಆದರೆ, ಹೀಗೆ ಗುತ್ತಿಗೆ ನೀಡುವುದರಿಂದ ಅಸುರಕ್ಷತೆ ಹೆಚ್ಚಾಗುತ್ತದೆಯಲ್ಲದೆ, ಕಾಮಗಾರಿಯೂ ವಿಳಂಬವಾಗಲಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ.

ದೆಹಲಿ ಮೆಟ್ರೊ ಮಾದರಿಯಂತೆ ಎರಡು ಮತ್ತು ಮೂರನೇ ಹಂತದ ವಿಸ್ತರಣೆ ವೇಳೆ ರೈಲುಗಳನ್ನು ಗುತ್ತಿಗೆ ಪಡೆಯಲು ನಿಗಮ ನಿರ್ಧರಿಸಿದೆ ಎನ್ನಲಾಗಿದೆ. ದೆಹಲಿ ಮೆಟ್ರೊದಲ್ಲಿ 35 ವರ್ಷಗಳವರೆಗೆ ರೈಲುಗಳನ್ನು ಗುತ್ತಿಗೆ ಪಡೆಯಲಾಗಿದೆ. ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವನ್ನು ಸಾಧ್ಯವಾದಷ್ಟು ತಗ್ಗಿಸುವ ಉದ್ದೇಶದಿಂದ ಗುತ್ತಿಗೆ ವ್ಯವಸ್ಥೆ ವಿಸ್ತರಣೆಗೆ ಮುಂದಾಗಿದೆ. ಇದರಿಂದಾಗುವ ಉಳಿತಾಯವನ್ನು ನಿರ್ಮಾಣ ಕಾರ್ಯಕ್ಕೆ ವಿನಿಯೋಗಿಸುವ ಉದ್ದೇಶ ನಿಗಮದ್ದು ಎನ್ನಲಾಗಿದೆ.

ನೇರಳೆ ಮತ್ತು ಹಸಿರು ಮಾರ್ಗಗಳ 42 ಕಿ.ಮೀ. ವ್ಯಾಪ್ತಿಯಲ್ಲಿ ನಿತ್ಯ 51 ರೈಲುಗಳು ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಮೂರು ಬೋಗಿಗಳಿದ್ದ ರೈಲಿನ ಸಾಮರ್ಥ್ಯವನ್ನು ಆರು ಬೋಗಿಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಮತ್ತೆ 150 ಬೋಗಿಗಳನ್ನು ತಯಾರಿಸಿಕೊಡಲು ಭಾರತ್‌ ಅರ್ಥ್‌ ಮೂವರ್ಸ್‌ಗೆ (ಬಿಇಎಂಎಲ್‌) ಬೇಡಿಕೆ ಇರಿಸಿತ್ತು. ಬಿಇಎಂಎಲ್‌ ಈಗಾಗಲೇ 100 ಬೋಗಿಗಳನ್ನು ಪೂರೈಸಿದ್ದು, 25ಕ್ಕೂ ಅಧಿಕ ರೈಲುಗಳು ಆರು ಬೋಗಿಗಳ ರೈಲುಗಳಾಗಿ ಮಾರ್ಪಟ್ಟಿವೆ.

ಎರಡನೇ ಹಂತದಲ್ಲಿ ಆರು ಬೋಗಿಗಳ 36 ರೈಲುಗಳ ಅವಶ್ಯಕತೆ ಇದ್ದು, ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆ
ದಿದೆ. ಸಾಮಾನ್ಯವಾಗಿ ಆರು ಬೋಗಿಗಳ ಒಂದು ರೈಲಿಗೆ ಅಂದಾಜು ₹50 ಕೋಟಿಯಿಂದ ₹60 ಕೋಟಿ ಆಗುತ್ತದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ತಂತ್ರಜ್ಞಾನ ಸೋರಿಕೆ ಸಾಧ್ಯತೆ:ಡ್ರಾಯಿಂಗ್‌, ಪ್ಲ್ಯಾನ್‌ ಮುಂತಾದ ತಾಂತ್ರಿಕ ಮಾಹಿತಿ ಹೊರಗೆ ಸೋರಿಕೆ ಆಗುತ್ತದೆ. ನಾಳೆ ಏನಾದರೂ ಹೆಚ್ಚು ಕಡಿಮೆಯಾದರೆ ಬಿಎಂಆರ್‌ಸಿಎಲ್‌ ನಮಗೆ ಸಂಬಂಧವೇ ಇಲ್ಲ. ಬೇರೆಯವರಿಗೆ ಗುತ್ತಿಗೆ ಕೊಟ್ಟಿದ್ದೆವು ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು’ ಎಂದು ಹೇಳುತ್ತಾರೆ ಮೆಟ್ರೊ ನೌಕರರ ಸಂಘದ ಪದಾಧಿಕಾರಿಗಳು.

‘ಗುತ್ತಿಗೆ ನೌಕರರಿಗೆ ತಾಂತ್ರಿಕ ನಿಪುಣತೆ ಇರದ ಕಾರಣ ಅವರಿಗೆ ತರಬೇತಿ ನೀಡಬೇಕಾಗುತ್ತದೆ. ತರಬೇತಿ ನೀಡುವುದರಿಂದ ಕಾಮಗಾರಿ ಇನ್ನೂ ವಿಳಂಬವಾಗುತ್ತದೆ’ ಎಂದು ಸಂಘದ ಉಪಾಧ್ಯಕ್ಷ ರ್ಯನಾರಾಯಣ‌ಮೂರ್ತಿ ಹೇಳುತ್ತಾರೆ.

‘ರೈಲು ಗುತ್ತಿಗೆ ತರುವುದಕ್ಕೂ, ಖರೀದಿಗೂ ಏನು ವ್ಯತ್ಯಾಸವಿದೆ. ರೈಲು ಖರೀದಿಗೆ ₹4 ಕೋಟಿ ಆಗುತ್ತದೆ. ಅದರ ಬದಲು ಗುತ್ತಿಗೆಗೆ, ನಿರ್ವಹಣೆಗೆ ಮತ್ತೆ ಖರ್ಚು ಮಾಡಲೇಬೇಕಾಗುತ್ತದೆ. ನಿಗಮವು ಲಾಭದ ಉದ್ದೇಶಕ್ಕಿಂತ ಸೇವೆಯನ್ನೇ ಪ್ರಮುಖವಾಗಿಟ್ಟುಕೊಂಡು ಕೆಲಸ ಮಾಡಬೇಕು. ಭಾರತೀಯ ರೈಲ್ವೆಯು ನಷ್ಟದಲ್ಲಿದೆ ಎಂದು ಹೇಳಲಾಗುತ್ತಿದೆ. ಹಾಗೆಂದು, ಗುತ್ತಿಗೆ ಪಡೆಯುವುದು ಪರಿಹಾರವೇ’ ಎಂದು ಅವರು ಪ್ರಶ್ನಿಸಿದರು.

ವಿವಿಧ ಮಾದರಿಗಳ ಅಧ್ಯಯನ: ಅಜಯ್ ಸೇಠ್‌

ಮೆಟ್ರೊ ಎರಡನೇ ಹಂತದ ನಿರ್ವಹಣೆ ಮತ್ತು ಕಾರ್ಯಾಚರಣೆ ಕಾರ್ಯವನ್ನು ಗುತ್ತಿಗೆ ಕೊಡುವುದು ಹಾಗೂ ರೈಲುಗಳನ್ನು ಗುತ್ತಿಗೆ ಪಡೆಯುವ ಕುರಿತು ವಿವಿಧ ಮಾದರಿಯ ಅಧ್ಯಯನ ಮಾಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದರು.

‘ಗುತ್ತಿಗೆ ಕುರಿತು ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಹಲವರು ಸಲಹೆ ನೀಡಿದ್ದಾರೆ. ಆದರೆ, ಈ ಕುರಿತು ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವಿವಿಧ ಮಾದರಿಗಳ ಅಧ್ಯಯನ ನಡೆಸಿ ನಂತರ ತೀರ್ಮಾನಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಹೇಳಿದರು.

‘ಗುತ್ತಿಗೆ ಪಡೆದವರಿಗೆ ತರಬೇತಿ ನೀಡುವುದರಿಂದ ಕಾಮಗಾರಿ ವಿಳಂಬವಾಗುತ್ತದೆ ಎನ್ನುವುದು ಸರಿಯಲ್ಲ. ಆಯಾ ವಿಭಾಗಕ್ಕೆ ಆಯಾಯ ಕೆಲಸ ನೀಡಬಹುದು. ಕೆಪಿಟಿಸಿಎಲ್‌, ಬೆಸ್ಕಾಂ ಅವರವರ ಕೆಲಸ ಮಾಡಿದರೆ ವಿಳಂಬವಾಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

‘ಮುಂಬೈ, ಚೆನ್ನೈ ಮೆಟ್ರೊ ರೈಲು ನಿಗಮವು ಈಗಾಗಲೇ ಈ ವ್ಯವಸ್ಥೆ ಅಳವಡಿಸಿಕೊಂಡಿವೆ. ದೆಹಲಿ ನಿಗಮವೂ ಯೋಚನೆ ಮಾಡುತ್ತಿದೆ. ಈಗ ಬೆಮೆಲ್‌ನಿಂದ ಬೋಗಿಯನ್ನು ಖರೀದಿಸುತ್ತಿದ್ದೇವೆ. ಬೆಮೆಲ್‌ನವರೇ ಬೋಗಿಗಳ ನಿರ್ವಹಣೆ ಮಾಡುತ್ತೇವೆ ಎಂದರೆ, ಅವರಿಗೇ ಗುತ್ತಿಗೆ ನೀಡಬಹುದು. ಇದರಿಂದ ಅನುಕೂಲವಾಗುತ್ತದೆ ಎಂಬ ಚಿಂತನೆಯಿದೆ. ಆದರೆ, ಈವರೆಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಸೇಠ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT