ತಾಯಿ–ಮಗು ಸಾವು: ಮೆಟ್ರೊ ಎಂ.ಡಿ ವಿಚಾರಣೆ

ಬೆಂಗಳೂರು: ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ– ಮಗು ಮೃತಪಟ್ಟ ಪ್ರಕರಣದಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಅಂಜುಂ ಪರ್ವೇಜ್ ಅವರನ್ನು ಪೊಲೀಸರು ಶನಿವಾರ ವಿಚಾರಣೆ ನಡೆಸಿದರು.
ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿದ್ದ ಮೊದಲ ನೋಟಿಸ್ ಸ್ವೀಕರಿಸಿದ್ದ ಅಂಜುಂ, ಅನಾರೋಗ್ಯವೆಂದು ಹೇಳಿ ಗುರುವಾರ ಗೈರಾಗಿದ್ದರು. ಹೀಗಾಗಿ, ಪೊಲೀಸರು ಶುಕ್ರವಾರ ಎರಡನೇ ಬಾರಿ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗದಿದ್ದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದರು.
ಎರಡನೇ ನೋಟಿಸ್ ಕೈ ಸೇರುತ್ತಿದ್ದಂತೆ ಅಂಜುಂ, ಪೂರ್ವ ವಿಭಾಗದ ಡಿಸಿಪಿ ಕಚೇರಿಗೆ ಶನಿವಾರ ಹಾಜರಾಗಿ ವಿಚಾರಣೆ ಎದುರಿಸಿದರು. ಪ್ರಕರಣದ ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಹೇಳಿಕೆ ದಾಖಲಿಸಿದರು.
‘ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಜ. 10ರಂದು ಬೆಳಿಗ್ಗೆ ಬೈಕ್ ಮೇಲೆ ಉರುಳಿಬಿದ್ದಿತ್ತು. ಬೈಕ್‌ನಲ್ಲಿ ಹೊರಟಿದ್ದ ತಾಯಿ ತೇಜಸ್ವಿನಿ ಸುಲಾಖೆ (28) ಹಾಗೂ ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟಿದ್ದರು. ಘಟನೆಗೆ ಬಿಎಂಆರ್‌ಸಿಎಲ್ ಎಂಜಿನಿಯರ್‌ಗಳ ನಿರ್ಲಕ್ಷ್ಯ ಕಾರಣವೆಂಬ ಆರೋಪವಿದೆ. ಇದೇ ಕಾರಣಕ್ಕೆ, ಅಂಜುಂ ಅವರನ್ನು ವಿಚಾರಣೆ ಒಳಪಡಿಸಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪ್ರಕರಣ ಸಂಬಂಧ ಈಗಾಗಲೇ ಕೆಲ ಎಂಜಿನಿಯರ್‌ಗಳ ವಿಚಾರಣೆ ನಡೆಸಲಾಗಿತ್ತು. ಅವರೆಲ್ಲರ ಹೇಳಿಕೆಯಲ್ಲಿ ಉಲ್ಲೇಖವಾಗಿದ್ದ ಕೆಲ ಸಂಗತಿಗಳ ಬಗ್ಗೆ ಅಂಜುಂ ಅವರಿಂದ ಮಾಹಿತಿ ಪಡೆಯಲಾಗಿದೆ. ಇವರ ಹೇಳಿಕೆಯನ್ನೂ ಪರಿಶೀಲಿಸಲಾಗುತ್ತಿದೆ. ವಿಚಾರಣೆ ಅಗತ್ಯವಿದ್ದರೆ ಪುನಃ ಅವರಿಗೆ ನೋಟಿಸ್ ನೀಡಲಾಗುವುದು’ ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.