ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಪಿಲ್ಲರ್‌ಗೆ ಗುದ್ದಿದ ಬಸ್‌: 26 ಮಂದಿಗೆ ಗಾಯ

ಮೆಟ್ರೊ ಕಾರ್ಯಾಚರಣೆ ಸುರಕ್ಷಿತ: ಬಿಎಂಆರ್‌ಸಿಎಲ್‌
Last Updated 9 ಮೇ 2022, 19:13 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆಯಲ್ಲಿ ಮೆಟ್ರೊ ಪಿಲ್ಲರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಗುದ್ದಿ ಅಪಘಾತ ಸಂಭವಿಸಿದ್ದು, ಚಾಲಕ ಸೇರಿ 26 ಮಂದಿ ಗಾಯಗೊಂಡಿದ್ದಾರೆ.

‘ಸೋಮವಾರ ನಸುಕಿನಲ್ಲಿ ಅಪಘಾತ ಸಂಭವಿಸಿದೆ. 26 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ವೆಂಕಟರಾಮ್ ಸೇರಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ’ ಎಂದು ಕೆಂಗೇರಿ ಸಂಚಾರ ಪೊಲೀಸರು ಹೇಳಿದರು.

‘ಮೈಸೂರು ವಿಭಾಗದ ಕೆ.ಆರ್. ನಗರ ಡಿಪೊಗೆ ಸೇರಿದ್ದ ಬಸ್‌ (ಕೆಎ 09 ಎಫ್ 5230), ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು. 45 ಪ್ರಯಾಣಿಕರು ಬಸ್ಸಿನಲ್ಲಿದ್ದರು.’

‘ಜ್ಞಾನಭಾರತಿ ಬಳಿಯ ಪೂರ್ಣಿಮಾ ಪ್ಯಾಲೇಸ್ ಬಳಿ ಚಾಲಕ ವೆಂಕಟರಾಮ್, ಅತೀ ವೇಗವಾಗಿ ಬಸ್‌ ಚಲಾಯಿಸಿದ್ದರು. ಇದರಿಂದಾಗಿ ನಿಯಂತ್ರಣ ತಪ್ಪಿದ್ದ ಬಸ್, ಜ್ಞಾನಭಾರತಿ ಹಾಗೂ ಪಟ್ಟಣಗೆರೆ ಮೆಟ್ರೊ ನಿಲ್ದಾಣ ನಡುವಿನ ಪಿಲ್ಲರ್‌ಗೆ ಗುದ್ದಿತ್ತು’ ಎಂದೂ ತಿಳಿಸಿದರು.

‘ಪಿಲ್ಲರ್ ಸುತ್ತಲೂ ಗ್ರಿಲ್ ಅಳವಡಿಸಲಾಗಿದೆ. ಬಸ್‌, ಆರಂಭದಲ್ಲಿ ಗ್ರಿಲ್‌ಗೆ ಗುದ್ದಿದೆ. ನಂತರ ಪಿಲ್ಲರ್‌ಗೂ ತಾಗಿ ನಿಂತಿದೆ. ಇದರಿಂದಾಗಿ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಬಸ್‌ ಚಾಲಕನ ಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಪೊಲೀಸರು ಹೇಳಿದರು.

ಆಸ್ಪತ್ರೆ ವೆಚ್ಚ ಭರಿಸಿದ ಕೆಎಸ್‌ಆರ್‌ಟಿಸಿ: ‘ಚಾಲಕರಾದ ವೆಂಕಟರಾಮ ಹಾಗೂ ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದು, ಅವರಿಬ್ಬರು ಬಿಜಿಎಸ್ ಆಸ್ಪತ್ರೆಯಲ್ಲಿದ್ದಾರೆ. ಇನ್ನುಳಿದ ಗಾಯಾಳುಗಳಾದ ಸುಪ್ರಾ, ಪಿನಾಕಲ್ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರ ಚಿಕಿತ್ಸಾ ವೆಚ್ಚವನ್ನು ಕೆಎಸ್‌ಆರ್‌ಟಿಸಿ ವತಿಯಿಂದ ಭರಿಸಲಾಗುತ್ತಿದೆ’ ಎಂದು ನಿಗಮದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಗಂಭೀರ ಹಾನಿಯಾಗಿಲ್ಲ: ‘ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೆಟ್ರೊ ಪಿಲ್ಲರ್‌ ಮೇಲೆ ಗೀರುಗಳು ಮಾತ್ರ ಕಂಡುಬಂದಿವೆ. ಉಳಿದಂತೆ, ಯಾವುದೇ ಗಂಭೀರ ಹಾನಿಯಾಗಿಲ್ಲ. ಮೆಟ್ರೊ ಕಾರ್ಯಾಚರಣೆ ಸುರಕ್ಷಿತವಾಗಿದೆ’ ಎಂದು ಬಿಎಂಆರ್‌ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT