ತಾಂತ್ರಿಕ ದೋಷ: ‘ನಮ್ಮ ಮೆಟ್ರೊ’ ಸಂಚಾರದಲ್ಲಿ ವ್ಯತ್ಯಯ

ಬುಧವಾರ, ಜೂಲೈ 17, 2019
24 °C

ತಾಂತ್ರಿಕ ದೋಷ: ‘ನಮ್ಮ ಮೆಟ್ರೊ’ ಸಂಚಾರದಲ್ಲಿ ವ್ಯತ್ಯಯ

Published:
Updated:
Prajavani

ಬೆಂಗಳೂರು: ಆರು ಬೋಗಿಗಳ ಮೆಟ್ರೊ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಸೋಮವಾರ ಬೆಳಿಗ್ಗೆ 'ನಮ್ಮ ಮೆಟ್ರೊ’ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಮೆಟ್ರೊ ರೈಲುಗಳು ನಿಗದಿತ ಸಮಯದಲ್ಲಿ ಸಂಚರಿಸದ ಕಾರಣ ಸಾವಿರಾರು ಪ್ರಯಾಣಿಕರು ಸಮಸ್ಯೆ ಎದುರಿಸಿದರು.

'ಮೈಸೂರು ರಸ್ತೆ ಕಡೆಯಿಂದ ಬೈಯಪ್ಪನಹಳ್ಳಿಗೆ ಹೊರಟಿದ್ದ ಆರು ಬೋಗಿಗಳ ಮೆಟ್ರೊ ರೈಲು ಬೆಳಿಗ್ಗೆ 9.03ರ ಸುಮಾರಿಗೆ ವಿಧಾನಸೌಧದ ಅಂಬೇಡ್ಕರ್‌ ಮೆಟ್ರೊ ನಿಲ್ದಾಣದ ಬಳಿ ಸಾಗುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತು. ದೋಷವನ್ನು ಸರಿಪಡಿಸಿದ ಬಳಿಕ ರೈಲು ಟ್ರಿನಿಟಿ ನಿಲ್ದಾಣದವರೆಗೆ ಸಾಗಿತ್ತು. ಮತ್ತೆ ಸಮಸ್ಯೆ ಕಾಣಿಸಿದ್ದರಿಂದ ಎಲ್ಲ ಪ್ರಯಾಣಿಕರನ್ನು ಟ್ರಿನಿಟಿ ನಿಲ್ದಾಣದಲ್ಲೇ ಇಳಿಸಿದೆವು. ಪರಿಶೀಲನೆ ಸಲುವಾಗಿ ಖಾಲಿ ರೈಲನ್ನು ಡಿಪೊಗೆ ಕಳುಹಿಸಲಾಯಿತು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದರು.

‘ಟ್ರಿನಿಟಿ ನಿಲ್ದಾಣದಲ್ಲಿ ರೈಲಿನಲ್ಲಿದ್ದ ಪ್ರಯಾಣಿಕರನ್ನು ಇಳಿಸಿದ್ದರಿಂದ ಉಳಿದ ನಿಲ್ದಾಣಗಳಲ್ಲಿನ ರೈಲುಗಳ ಸಂಚಾರವನ್ನು ಸುಮಾರು 5 ನಿಮಿಷದಿಂದ 10 ನಿಮಿಷ ತಡೆ ಹಿಡಿಯಬೇಕಾಯಿತು. ಹಾಗಾಗಿ ಒಟ್ಟು ಎಂಟು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಕಡೆಗೆ ಹೋಗಬೇಕಿದ್ದ ನಾಲ್ಕು ರೈಲುಗಳ ಸಂಚಾರ ರದ್ದುಪಡಿಸಬೇಕಾಯಿತು. ಒಂದು ರೈಲನ್ನು ಎಂ.ಜಿ.ರಸ್ತೆ ನಿಲ್ದಾಣದವರೆಗೆ ಮಾತ್ರ ಓಡಿಸಲಾಯಿತು. ಅಲ್ಪಾವಧಿಯಲ್ಲೇ ಸೇವೆಯನ್ನು ಮತ್ತೆ ಸಹಜ ಸ್ಥಿತಿಗೆ ತರಲಾಗಿದೆ’ ಎಂದು ಅವರು ವಿವರಿಸಿದರು. 

ಸಾಮಾನ್ಯವಾಗಿ ಬೆಳಿಗ್ಗೆ 8ರಿಂದ 10.30ರವರೆಗೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುತ್ತದೆ. ಇದೇ ಅವಧಿಯಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಕಚೇರಿಗೆ ಹೋಗುವವರು ತೊಂದರೆ ಅನುಭವಿಸಿದರು.

‘ನಾನು 9.30ಕ್ಕೆ ಎಂ.ಜಿ.ರಸ್ತೆ ಬಳಿಯ ಇರುವ ಕಚೇರಿಗೆ ತಲುಪಬೇಕಿತ್ತು. 20 ನಿಮಿಷದ ಪ್ರಯಾಣಕ್ಕೆ 50 ನಿಮಿಷ ತಗುಲಿದ್ದರಿಂದ ಸಕಾಲದಲ್ಲಿ ಕಚೇರಿ ತಲುಪಲು ಸಾಧ್ಯವಾಗಿಲ್ಲ. ಮೆಟ್ರೊ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗುವುದು ಪದೇ ಪದೇ ಸಂಭವಿಸುತ್ತಿದೆ. ಮೆಟ್ರೊದಲ್ಲಿ ಹೋದರೆ ಸಕಾಲದಲ್ಲಿ ತಲುಪಬಹುದು ಎಂಬ ನಂಬಿಕೆಯೇ ಈಗ ಉಳಿದಿಲ್ಲ’ ಎಂದು ವಿಜಯನಗರದ ಕೃತಿಕಾ ದೂರಿದರು.

ಮೆಟ್ರೊ ಸೇವೆ ವ್ಯತ್ಯಯವಾದ ಬಗ್ಗೆ ಅನೇಕರು ಟ್ವಿಟರ್‌ ಮೂಲಕವೂ ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !