ಶನಿವಾರ, ಆಗಸ್ಟ್ 17, 2019
27 °C

ಮೆಟ್ರೊ ರೈಲಿಗೆ ಕಲ್ಲು: ಎಫ್‌ಐಆರ್‌

Published:
Updated:
Prajavani

ಬೆಂಗಳೂರು: ಚಲಿಸುತ್ತಿದ್ದ ಮೆಟ್ರೊ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಆ ಸಂಬಂಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಚನ್ನೇಗೌಡ ಎಂಬುವರು ಶ್ರೀರಾಮಪುರ ಠಾಣೆಗೆ ದೂರು ನೀಡಿದ್ದರು. ಘಟನೆ ನಡೆದ ಸ್ಥಳದ ಆಧಾರದಲ್ಲಿ ದೂರನ್ನು ನಮ್ಮ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಮಲ್ಲೇಶ್ವರ ಪೊಲೀಸರು ಹೇಳಿದರು.

ಪ್ರಕರಣದ ವಿವರ: ‘ಜೂನ್ 13ರಂದು ಸಂಜೆ 7.20ರ ಸುಮಾರಿಗೆ ಮೆಟ್ರೊ ರೈಲು (ನಂ. 7202) ಮಹಾಕವಿ ಕುವೆಂಪು ಮೆಟ್ರೊ ನಿಲ್ದಾಣದಿಂದ ಶ್ರೀರಾಮಪುರ ನಿಲ್ದಾಣದ ಕಡೆಗೆ ಹೊರಟಿತ್ತು’ ಎಂದು ಚನ್ನೇಗೌಡ ದೂರಿನಲ್ಲಿ ತಿಳಿಸಿದ್ದಾರೆ.

’ಮಾರ್ಗಮಧ್ಯೆಯೇ ಟ್ರ್ಯಾಕ್‌ನ ಹೊರಗಿನಿಂದ ಯಾರೋ ಕಿಡಿಗೇಡಿಗಳು, ರೈಲಿನ 3ನೇ ಬೋಗಿಯ ಬಾಗಿಲು ಕಿಟಕಿಯ ಗಾಜಿಗೆ ಕಲ್ಲು ಹೊಡೆದಿದ್ದಾರೆ. ಅದರಿಂದ ಗಾಜು ಒಡೆದು ₹ 50 ಸಾವಿರ ನಷ್ಟವಾಗಿದೆ.’

‘ಕಲ್ಲಿನಿಂದ ಗಾಜಿಗೆ ಹೊಡೆದ ವಿಷಯವನ್ನು ಸಾರ್ವಜನಿಕರೊಬ್ಬರು ರೈಲು ಚಾಲಕನಿಗೆ ತಿಳಿಸಿದ್ದರು. ಸಾರ್ವಜನಿಕರ ಸ್ವತ್ತಾದ ಮೆಟ್ರೊ ರೈಲಿಗೆ ಕಲ್ಲು ಎಸೆದು ಗಾಜು ಒಡೆದಿರುವ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ಕೃತ್ಯ ಎಸಗಿರುವ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಪ್ರಯಾಣಿಕರಲ್ಲಿ ಆತಂಕ: ಮೆಟ್ರೊ ರೈಲುಗಳ ಮೇಲೆ ಕಲ್ಲು ತೂರುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಅದರಿಂದ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ.

Post Comments (+)