ಶನಿವಾರ, ನವೆಂಬರ್ 28, 2020
18 °C
ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗದ ನಿಲ್ದಾಣಗಳ ಕೆಳಗೆ ಸಂಚಾರ ದುಸ್ತರ

‘ಮೆಟ್ರೊ’ ಕೆಳಗೆ ಕತ್ತಲು !

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೊ ನಿಲ್ದಾಣಗಳ ಕೆಳಗೆ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಳ್ಳುವ ಪರಿಸ್ಥಿತಿ ಇದೆ ಎಂದು ವಾಹನ ಸವಾರರು ದೂರುತ್ತಾರೆ.

ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ (ರೀಚ್‌ 2) ಆರು ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಈ ಎಲ್ಲ ನಿಲ್ದಾಣಗಳ ಕೆಳಗೆ ಕತ್ತಲು ಆವರಿಸಿದೆ.

‘ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಬೆಂಗಳೂರು ವಿಶ್ವವಿದ್ಯಾಲಯ, ಆರ್.ವಿ.ಕಾಲೇಜು, ಮೈಲಸಂದ್ರ ಹಾಗೂ ಕೆಂಗೇರಿಯಲ್ಲಿ ಮೆಟ್ರೊ ನಿಲ್ದಾಣ ತಲೆ ಎತ್ತಿವೆ. ಆದರೆ, ಈ ನಿಲ್ದಾಣಗಳ ಕೆಳಗೆ ತುಂಬಾ ಕತ್ತಲು ಇದೆ. ಹಗಲು ಹೊತ್ತಿನಲ್ಲಿಯೇ ವಾಹನದ ಲೈಟ್‌ ಹಾಕಿಕೊಂಡೇ ಸಂಚರಿಸಬೇಕು. ಕಾಮಗಾರಿ ನಡೆಯುತ್ತಿರುವುದರಿಂದ ಯಾವಾಗ ಯಾವ ಅನಾಹುತವಾಗುತ್ತದೆಯೋ ಎಂಬ ಆತಂಕ ಕಾಡುತ್ತದೆ’ ಎಂದು ವಾಹನ ಸವಾರ ಮಂಜುನಾಥ್ ಹೇಳುತ್ತಾರೆ.

‘ಈ ರಸ್ತೆಯಲ್ಲಿ ಹಲವು ಗುಂಡಿಗಳು ಇವೆ. ಕತ್ತಲಿನಲ್ಲಿ ಅವು ಕಾಣುವುದೇ ಇಲ್ಲ. ನಾನೂ ಸೇರಿ ಹಲವು ದ್ವಿಚಕ್ರ ವಾಹನ ಸವಾರರು ಇಲ್ಲಿ ಬಿದ್ದಿದ್ದೇವೆ. ಸಣ್ಣ–ಪುಟ್ಟ ಅಪಘಾತಗಳೂ ಆಗಿವೆ’ ಎಂದು ಅವರು ಹೇಳಿದರು.

‘ಸುಮಾರು 6 ಕಿ.ಮೀ. ಉದ್ದದವರೆಗೆ ಇದೇ ಸ್ಥಿತಿ ಇದೆ. ನಿಲ್ದಾಣಗಳು ಸಮೀಪಿಸಿದಾಗಲೆಲ್ಲ ಮೈಯೆಲ್ಲ ಕಣ್ಣಾಗಿ ವಾಹನ ಚಲಾಯಿಸಬೇಕು. ದೊಡ್ಡ ಗುಂಡಿಗಳಿಂದ ಕಾರಿಗೂ ಹಾನಿಯಾಗುತ್ತಿದೆ’ ಎಂದು ರಮೇಶ್ ಎಂಬುವರು ದೂರಿದರು.

‘ನಿಲ್ದಾಣ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ರಸ್ತೆಯ ಮೇಲೆ ಮಾಡುವ ಕೆಲಸ ಯಾವುದೂ ಇಲ್ಲ ಅನಿಸುತ್ತದೆ. ರಸ್ತೆಯ ಬದಿಯಲ್ಲಿ ಇಟ್ಟಿರುವ ವಸ್ತುಗಳನ್ನು ತೆರವುಗೊಳಿಸಬೇಕು. ರಸ್ತೆಯ ಒಂದು ಭಾಗವನ್ನು ಕಾಮಗಾರಿಗೆ ಬಳಸಿಕೊಂಡರೂ ಉಳಿದ ಭಾಗ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

‘ರಸ್ತೆಯ ಒಂದು ಭಾಗದಲ್ಲಿ ಸುಮಾರು ಒಂದು ಅಡಿ ಆಳದಷ್ಟು ಗುಂಡಿಗಳು ಇವೆ. ಮಳೆ ಬಂದಾಗ ನೀರು ತುಂಬಿಕೊಳ್ಳುತ್ತದೆ. ಕತ್ತಲಲ್ಲಿ ಕಾಣದೆ ಇರುವುದರಿಂದ ವಾಹನಗಳು ಅಪಘಾತಕ್ಕೆ ಈಡಾಗುತ್ತಿವೆ. ನಿಲ್ದಾಣದ ಕೆಳಗೆ ಬೆಳಕಿನ ವ್ಯವಸ್ಥೆಯನ್ನಾದರೂ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಳೆ ಸುರಿಯುತ್ತಿರುವುದರಿಂದ ಡಾಂಬರು ಹಾಕಿಸಲು  ಸಾಧ್ಯವಾಗುತ್ತಿಲ್ಲ. ಆದರೆ, ಮೆಟ್ರೊ ನಿಲ್ದಾಣದ ಕೆಳಗೆ ಬೆಳಕು ಇರುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

‘ಬಹುತೇಕರು ತುಂಬಾ ವೇಗವಾಗಿ ವಾಹನ ಚಲಾಯಿಸುತ್ತಾರೆ. ಅದರಿಂದಲೂ ಅಪಘಾತಗಳು ಆಗುತ್ತಿವೆ. ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದರೂ ವೇಗಕ್ಕೆ ಕಡಿವಾಣ ಇಲ್ಲದಂತಾಗಿದೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು