ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಪ್ರೋತ್ಸಾಹಧನ ಬಾಕಿ; ರೈತರಿಗೆ ತಲುಪದ ಐದು ತಿಂಗಳ ಮೊತ್ತ ₹ 480 ಕೋಟಿ

Last Updated 17 ಮಾರ್ಚ್ 2023, 22:12 IST
ಅಕ್ಷರ ಗಾತ್ರ

ಬೆಂಗಳೂರು: ಹಾಲು ಉತ್ಪಾದಕರಿಗೆ ಘೋಷಿಸಲಾಗಿದ್ದ ಪ್ರೋತ್ಸಾಹಧನ ಸಕಾಲಕ್ಕೆ ಬಿಡುಗಡೆಯಾಗದಿರುವ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿ ಲೀಟರ್‌ ಹಾಲಿಗೆ ಸರ್ಕಾರ ನೀಡುವ ₹5 ಪ್ರೋತ್ಸಾಹ ಧನವನ್ನು ಕಳೆದ ಐದು ತಿಂಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಪ್ರೋತ್ಸಾಹ ಧನಕ್ಕಾಗಿ ಹಾಲು ಉತ್ಪಾದಕರ ಸಂಘಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ ಎಂದು ರೈತರು ದೂರಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ ನಂತರ ಸರ್ಕಾರ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಅಕ್ಟೋಬರ್‌ವರೆಗಿನ ಪ್ರೋತ್ಸಾಹ ಧನವನ್ನು ಸಹ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಅಂದಾಜು ₹480 ಕೋಟಿಗೂ ಅಧಿಕ ಮೊತ್ತದ ಪ್ರೋತ್ಸಾಹ ಧನವನ್ನು ರೈತರ ಖಾತೆಗಳಿಗೆ ಬಿಡುಗಡೆ ಮಾಡಬೇಕಾಗಿದೆ. ಪ್ರೋತ್ಸಾಹ ಧನ ಪಾವತಿಸುವಂತೆ ಕೆಎಂಎಫ್‌ ಸಲ್ಲಿಸಿರುವ ಪ್ರಸ್ತಾವನೆಯನ್ನು ಪಶುಸಂಗೋಪನಾ ಇಲಾಖೆ ಮೂಲಕ ಹಣಕಾಸು ಇಲಾಖೆಯ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಹಣಕಾಸು ವರ್ಷ ಅಂತ್ಯದ ತಿಂಗಳಾದ ಮಾರ್ಚ್‌ನಲ್ಲಿ ಪ್ರೋತ್ಸಾಹ ಧನ ಬಿಡುಗಡೆಯಾಗದಿದ್ದರೆ ಮತ್ತಷ್ಟು ವಿಳಂಬವಾಗುತ್ತದೆ’ ಎಂದು ಹೇಳುತ್ತಾರೆ.

‘ಪ್ರತಿ ತಿಂಗಳು ನಿಯಮಿತವಾಗಿ ಪ್ರೋತ್ಸಾಹ ಧನ ಬಿಡುಗಡೆ ಮಾಡುತ್ತಿಲ್ಲ. ಸಾಮಾನ್ಯವಾಗಿ 3–4 ತಿಂಗಳಿಗೊಮ್ಮೆ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇತ್ತೀಚೆಗೆ ಹಾಲು ಉತ್ಪಾದನೆ ಕಡಿಮೆಯಾಗಿರುವ ಪರಿಸ್ಥಿತಿ ಸಂದರ್ಭದಲ್ಲೇ ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರ ಜತೆಗೂ ಚರ್ಚಿಸಿದ್ದೇವೆ’ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳುತ್ತಾರೆ.

‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇಂತಹ ಸಂದರ್ಭದಲ್ಲಿ ಅಲ್ಪ ಮೊತ್ತದ ಪ್ರೋತ್ಸಾಹ ಧನವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಹೀಗಾಗಿ, ರೈತರು ಹೈನೋದ್ಯಮದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಒಕ್ಕೂಟಗಳ ದರದ ಜತೆ ಪ್ರೋತ್ಸಾಹ ಧನ ನೀಡಿದರೆ ಮಾತ್ರ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ’ ಎಂದು ಹೇಳುತ್ತಾರೆ.

ರಾಜ್ಯದಲ್ಲಿ ಸುಮಾರು 24 ಲಕ್ಷ ಮಂದಿ ಡೇರಿಗಳಿಗೆ ಪ್ರತಿನಿತ್ಯ ಹಾಲು ಪೂರೈಸುತ್ತಾರೆ. ಆದರೆ, ಪ್ರತಿನಿತ್ಯ 84 ಲಕ್ಷ ಲೀಟರ್‌ ಸಂಗ್ರಹವಾಗುತ್ತಿದ್ದ ಹಾಲು ಈಗ ಸುಮಾರು 71 ಲಕ್ಷ ಲೀಟರ್‌ಗಳಿಗೆ ಕುಸಿದಿದೆ.

ಪ್ರತಿ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಕುಸಿತವಾಗುವುದು ಸಾಮಾನ್ಯ. ಜತೆಗೆ, ಚರ್ಮಗಂಟು ರೋಗ, ದುಬಾರಿ ಪಶು ಆಹಾರ ಹಾಗೂ ರೈತರು ಹೈನೋದ್ಯಮದಿಂದ ದೂರವಾಗುತ್ತಿರುವುದು ಉತ್ಪಾದನೆಗೆ ಕುಸಿತವಾಗಿವೆ ಎಂದು ಅಧಿಕಾರಿಗಳು ವಿಶ್ಲೇಷಿಸುತ್ತಾರೆ.

ಮಾನದಂಡಗಳಿಗೆ ಆಕ್ಷೇಪ
ಪ್ರೋತ್ಸಾಹ ಧನಕ್ಕೆ ನಿಗದಿಪಡಿಸಿದ ಮಾನದಂಡಗಳ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿವೆ.

ಹಸುವಿನ ಹಾಲಿಗೆ ಶೇ 4 ಜಿಡ್ಡು (ಫ್ಯಾಟ್‌) ಮತ್ತು ಶೇ 8.5 ಜಿಡ್ಡೇತರ (ಎಸ್‌ಎನ್‌ಎಫ್‌) ಅಂಶ ಇದ್ದರೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದರಲ್ಲಿ ಒಂದು ಅಂಶವೂ ಕಡಿಮೆಯಾದರೂ ಪ್ರೋತ್ಸಾಹ ಧನ ಸಿಗುವುದಿಲ್ಲ ಎಂದು ರೈತರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT