ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಮೇಳದಲ್ಲಿ ಆಡಿನ ಹಾಲಿನ ಸೋಪು

ಚಿನ್ನದ ದರದ ಉತ್ಪನ್ನಗಳನ್ನು ಕುತೂಹಲದಿಂದ ವೀಕ್ಷಿಸಿದ ಪ್ರೇಕ್ಷಕರು
Published 7 ಜನವರಿ 2024, 0:30 IST
Last Updated 7 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಆಡಿನ ಹಾಲಿನ ಉತ್ಪ‍ನ್ನಗಳು ಸಿರಿಧಾನ್ಯ ಮೇಳದಲ್ಲಿ ವಿಶಿಷ್ಟ ಆಕರ್ಷಣೆಗೆ ಒಳಗಾದವು. ಹಾಲಿನ ಸೋಪು ಕಂಡು ಜನರು ಪುಳಕಿತರಾದರು. ಅದರ ದರ ಕೇಳಿದ ಮೇಲೆ ಮುಟ್ಟಿ ನೋಡಿಯೇ ತೃಪ್ತಿಪಟ್ಟರು.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಯಡಹಳ್ಳಿ ‘ಯಶೋದವನ’ದ ಮಳಿಗೆ ವೀಕ್ಷಕರಿಂದ ತುಂಬಿ ಹೋಗಿತ್ತು. ಆಡಿನ ಹಾಲಿನ 200 ಗ್ರಾಂ ಪ್ಯಾಕೆಟ್‌ಗೆ ₹ 130 ದರ ಇದ್ದರೂ ಆರೋಗ್ಯಕ್ಕೆ ಒಳ್ಳೆಯದು, ಔಷಧೀಯ ಅಂಶಗಳಿವೆ ಎಂಬ ಕಾರಣಕ್ಕೆ ರೈತರು ಖರೀದಿಸಿದರು. ಸೋಪಿನ ಬೆಲೆ 100 ಗ್ರಾಂಗೆ ₹400 ಇತ್ತು. ತುಪ್ಪದ ಬೆಲೆ ಕೂಡ ಅಷ್ಟೇ ಇತ್ತು.

‘ಆಡಿನ ಹಾಲು ಪ್ಯಾಕೆಟ್‌ ಅನ್ನು ಒಯ್ದು 4 ತಿಂಗಳವರೆಗೆ ಇಡಬಹುದು. ಆದರೆ, ಒಮ್ಮೆ ತೆರೆದರೆ  ಎರಡು ದಿನಗಳ ಒಳಗೆ ಬಳಸಬೇಕು’ ಎಂದು ಮಳಿಗೆಯಲ್ಲಿ ಪ್ರಶಾಂತ್‌ ಮಾಹಿತಿ ನೀಡಿದರು.

‘ಆಡಿನ ಹಾಲು ಒಯ್ಯುತ್ತಿದ್ದಾರೆ. ತುಪ್ಪ, ಸೋಪಿಗೂ ಉತ್ತಮ ಬೇಡಿಕೆ ಬಂದರೆ ಮುಂದೆ ಚೀಸ್‌ (ಗಿಣ್ಣು), ಪನ್ನೀರು, ಐಸ್‌ಕ್ರೀಂ, ರಸಗುಲ್ಲಾ, ಚಾಕೊಲೇಟ್‌ ಸಹಿತ ವಿವಿಧ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನು ಯಶೋದವನ ಇಟ್ಟುಕೊಂಡಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪುಂಗನೂರು ಹಸು: ಭಾರತದ ಹಸುಗಳ ಮೂಲ ತಳಿಗಳಲ್ಲಿ ಅತಿ ವೇಗದಲ್ಲಿ ಅಳಿವಿನಂಚಿಗೆ ಸಾಗುತ್ತಿರುವ ಪುಂಗನೂರು ಗಿಡ್ಡಹಸುಗಳೆರಡು ತನ್ನ ಆಕಾರ ಮತ್ತು ಸೌಂದರ್ಯದಿಂದ ಸೆಳೆದವು.

2ರಿಂದ 3 ಅಡಿಯಷ್ಟೇ ಬೆಳೆಯುವ ಈ ಹಸುಗಳ ಬೆಲೆ ಮಾತ್ರ ₹ 1.5 ಲಕ್ಷದಿಂದ ₹ 2 ಲಕ್ಷದವರೆಗೆ ಇದೆ. ಒಂದು ಲೀಟರ್‌ವರೆಗೆ ಹಾಲು ನೀಡುತ್ತಿದೆ. ಇದರ ಹಾಲಿಗೂ ಆಡು, ಮೇಕೆಗಳ ಹಾಲಿನಂತೆ ಭಾರಿ ಬೆಲೆ ಎಂದು ಅರುಣ್‌ ಯಡಹಳ್ಳಿ ಮಾಹಿತಿ ನೀಡಿದರು.

ಸಿರಿಧಾನ್ಯಗಳಿಗೆ ಬೇಡಿಕೆ: ಮೇಳದಲ್ಲಿ ಇರುವ ವಿವಿಧ ಸಿರಿಧಾನ್ಯಗಳ ಉತ್ಪನ್ನಗಳಿಗೆ ಶನಿವಾರ ಭಾರಿ ಬೇಡಿಕೆ ಕಂಡು ಬಂತು. ‘ಜನರಿಗೆ ನೈಸರ್ಗಿಕ ಆಹಾರದ ಬಗ್ಗೆ ಜಾಗೃತಿ ಮೂಡಿದೆ. ಹಾಗಾಗಿ ಖರೀದಿ ಹೆಚ್ಚಾಗಿದೆ’ ಎಂದು ‘ಧರ್ಮಸ್ಥಳ ಸಿರಿ’ ಮಳಿಗೆಯ ಮಹಾದೇವ್‌ ತಿಳಿಸಿದರು. 

ಕೆಲವು ಮಳಿಗೆಗಳಲ್ಲಿ ಆಹಾರ ಉತ್ಪನ್ನಗಳ ಮಾರಾಟ ಮಾಡುವ ಮುನ್ನ ಗ್ರಾಹಕರು ರುಚಿ ನೋಡಲೆಂದು ರಾಗಿ ಬೋಟಿ, ಉಪ್ಪಿನಕಾಯಿ ಸಹಿತ ವಿವಿಧ ಉತ್ಪನ್ನಗಳನ್ನು ನೀಡುತ್ತಿದ್ದರು. ಈ ಮಳಿಗೆಗಳಲ್ಲಿ ಖರೀದಿಗಿಂತ ರುಚಿ ನೋಡುವವರ ಸಂಖ್ಯೆಯೇ ಹೆಚ್ಚಾಗಿತ್ತು.

ಮಂಡ್ಯದ ಬೆಲ್ಲವನ್ನು ಚಿತ್ತಾಕರ್ಷಕವಾಗಿ ಅಲಂಕರಿಸಿ ಇಡಲಾಗಿತ್ತು. ಜನರು ಅದರ ಮುಂದೆ ನಿಂತು ಫೋಟೊ, ಸೆಲ್ಫಿ ತೆಗೆದುಕೊಂಡರು. ಪೌಷ್ಟಿಕ ಆಹಾರದ ಉತ್ಪನ್ನಗಳ ಬಗ್ಗೆ ಪ್ರಚಾರಕ್ಕಾಗಿ ವಿವಿಧ ಕಂಪನಿಗಳ ಮಳಿಗೆಗಳಲ್ಲಿ ವಿವಿಧ ಆಟಗಳನ್ನು ಇಟ್ಟು ಜನರನ್ನು ಸೆಳೆಯುವುದು ಸಾಮಾನ್ಯ ದೃಶ್ಯವಾಗಿತ್ತು.

ನೂರಾರು ಬೇಳೆಕಾಳುಗಳು, ಭತ್ತದ ತಳಿಗಳು ಅಕ್ಕಿಯ ವೈವಿಧ್ಯಗಳು, ಜೋಳ, ರಾಗಿ ನವಣೆ, ಸಜ್ಜೆ, ಸಾಮೆ, ಕೊರಳೆ, ಬರಗು ಸಹಿತ ವಿವಿಧ ಧಾನ್ಯಗಳು ಗಮನ ಸೆಳೆದವು.

ಸಿರಿಧಾನ್ಯ ಮೇಳದಲ್ಲಿ ಪ್ರದರ್ಶಿಸಲಾಗಿರುವ ಭತ್ತದ ವಿವಿಧ ತಳಿಗಳು

ಸಿರಿಧಾನ್ಯ ಮೇಳದಲ್ಲಿ ಪ್ರದರ್ಶಿಸಲಾಗಿರುವ ಭತ್ತದ ವಿವಿಧ ತಳಿಗಳು

-ಪ್ರಜಾವಾಣಿ ಚಿತ್ರ/ಎಂ.ಎಸ್‌. ಮಂಜುನಾಥ್‌

ಆಕರ್ಷಣೆಯ ಕೇಂದ್ರ ಬಿಂದು ಆಗಿರುವ ಪುಂಗನೂರು ತಳಿಯ ಹಸುಗಳು

ಆಕರ್ಷಣೆಯ ಕೇಂದ್ರ ಬಿಂದು ಆಗಿರುವ ಪುಂಗನೂರು ತಳಿಯ ಹಸುಗಳು

-ಪ್ರಜಾವಾಣಿ ಚಿತ್ರ/ಎಂ.ಎಸ್‌. ಮಂಜುನಾಥ್‌

ಜನರನ್ನು ಸೆಳೆದ ಆಡಿನ ಹಾಲಿನ ಉತ್ಪನ್ನಗಳು

ಜನರನ್ನು ಸೆಳೆದ ಆಡಿನ ಹಾಲಿನ ಉತ್ಪನ್ನಗಳು

-ಪ್ರಜಾವಾಣಿ ಚಿತ್ರ/ಎಂ.ಎಸ್‌. ಮಂಜುನಾಥ್‌

ಮೇಳ ಯಶಸ್ವಿ: ಚಲುವರಾಯಸ್ವಾಮಿ

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳವು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೊದಲ ದಿನವೇ 60 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಆಸ್ಟ್ರೇಲಿಯಾ ಯುರೋಪ್ ಕೀನ್ಯಾ ಕುವೈತ್ ಯುಎಇ ದೇಶಗಳ ಮಾರುಕಟ್ಟೆದಾರರು ಮೇಳದಲ್ಲಿ ಭಾಗವಹಿಸಿದ್ದಾರೆ. ಅಂತರರಾಷ್ಟ್ರೀಯ 7 ಹೊರರಾಜ್ಯಗಳ 40 ಹಾಗೂ ರಾಜ್ಯದ 50 ಮಾರುಕಟ್ಟೆದಾರರು  ಭಾಗವಹಿಸಿದ್ದಾರೆ. 97 ಮಾರುಕಟ್ಟೆದಾರರು 154 ಉತ್ಪಾದಕರು ಬಿ2ಬಿಯಲ್ಲಿದ್ದಾರೆ ಎಂದು ವಿವರಿಸಿದರು. 310 ಮಳಿಗೆಗಳು ಮೇಳದಲ್ಲಿದ್ದು 190 ಮಳಿಗೆಗಳು ಸಾವಯವ ಮತ್ತು ಸಿರಿಧಾನ್ಯ ಸಂಸ್ಥೆಗಳು ರಫ್ತುದಾರರು ಮಾರಾಟಗಾರರು ರೈತ ಗುಂಪುಗಳು ಪ್ರಾಂತೀಯ ಒಕ್ಕೂಟಗಳು ಸಾವಯವ ಪರಿಕರ ಸಂಸ್ಥೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಸಂಸ್ಥೆಗಳು ಪಾಲ್ಗೊಂಡಿವೆ ಎಂದರು. ಸಿರಿಧಾನ್ಯಗಳನ್ನು ಕಡಿಮೆ ಖರ್ಚು ಕಡಿಮೆ ಸಮಯದಲ್ಲಿ ಬೆಳೆದು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದು ಅದನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT