ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ: 10 ಲಕ್ಷ ದಾಟಿದ ತಂತ್ರಜ್ಞರ ಸಂಖ್ಯೆ

ಐದು ಮುಂಚೂಣಿ ಸಂಸ್ಥೆಗಳಲ್ಲಿ ಹೆಚ್ಚಿದ ನೇಮಕಾತಿ ಪ್ರಕ್ರಿಯೆ
Last Updated 30 ಜುಲೈ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ಉದ್ದಿಮೆಯ ಇತಿಹಾಸದಲ್ಲಿ, ಮುಂಚೂಣಿ ಐದು ಸಂಸ್ಥೆಗಳಲ್ಲಿನ ಉದ್ಯೋಗಿಗಳ ಒಟ್ಟು ಸಂಖ್ಯೆಯು ಇದೇ ಮೊದಲ ಬಾರಿಗೆ 10 ಲಕ್ಷ ದಾಟಿದೆ.

ಬೆಂಗಳೂರಿನ ಎರಡು ಸಂಸ್ಥೆಗಳೂ ಒಳಗೊಂಡಂತೆ, ಐ.ಟಿ ಕ್ಷೇತ್ರದ ಐದು ಪ್ರಮುಖ ಸಂಸ್ಥೆಗಳಲ್ಲಿನ ತಂತ್ರಜ್ಞರ ಸಂಖ್ಯೆಯು ಈ ವರ್ಷದ ಜೂನ್‌ 30ಕ್ಕೆ 10,13,112ಕ್ಕೆ ತಲುಪಿದೆ. ಟಿಸಿಎಸ್‌, ಇನ್ಫೊಸಿಸ್‌, ಎಚ್‌ಸಿಎಲ್‌, ವಿಪ್ರೊ ಮತ್ತು ಟೆಕ್ ಮಹೀಂದ್ರಾ ಸಂಸ್ಥೆಗಳು ಇತ್ತೀಚೆಗೆ ಹೊಸ ನೇಮಕಾತಿಗೆ ಆದ್ಯತೆ ನೀಡಿದ್ದರಿಂದ ಈ ದಾಖಲೆ ಸೃಷ್ಟಿಯಾಗಿದೆ.

ಇದರಲ್ಲಿ ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಶೇ 39.6ರಷ್ಟು ಪಾಲು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿ ಇದೆ. ನಂತರದ ಸ್ಥಾನದಲ್ಲಿ ಇನ್ಫೊಸಿಸ್‌ (ಶೇ 20.7) ಇದೆ. ಮೂರನೇ ಸ್ಥಾನದಲ್ಲಿ ವಿಪ್ರೊ ಇದ್ದರೆ, ಎಚ್‌ಸಿಎಲ್‌ ಟೆಕ್ನಾಲಜೀಸ್‌ (4) ಮತ್ತು ಟೆಕ್‌ ಮಹೀಂದ್ರಾ 5ನೇ ಸ್ಥಾನದಲ್ಲಿ ಇವೆ.

ಗಮನಾರ್ಹ ಏರಿಕೆ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌– ಜೂನ್‌ ತ್ರೈಮಾಸಿಕ ಅವಧಿಯಲ್ಲಿ ಈ ಐದೂ ಸಂಸ್ಥೆಗಳು ಹೊಸದಾಗಿ 17,292 ತಂತ್ರಜ್ಞರನ್ನು ನೇಮಕ ಮಾಡಿಕೊಂಡಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಐ.ಟಿ ಸಂಸ್ಥೆಗಳಲ್ಲಿನ ನೇಮಕಾತಿಯು ಹಿನ್ನಡೆ ಕಂಡಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಹೊಸಬರ ನೇಮಕವು ಗಮನಾರ್ಹ ಏರಿಕೆ ಕಂಡಿದೆ.

ಇನ್ಫೊಸಿಸ್‌ ವಿಷಯದಲ್ಲಿ ಹೊಸ ನೇಮಕಾತಿಯು ಶೇ 105ರಷ್ಟು ಹೆಚ್ಚಳಗೊಂಡಿದೆ. ಈ ತ್ರೈಮಾಸಿಕ
ದಲ್ಲಿ ಸಂಸ್ಥೆಯು ನೇಮಕ ಮಾಡಿಕೊಂಡ ಸಿಬ್ಬಂದಿ ಸಂಖ್ಯೆ 5,798ಕ್ಕೆ ಏರಿದೆ. ಆದರೆ, ಸಂಸ್ಥೆ ಬಿಟ್ಟು ತೆರಳುವವರ ಸಂಖ್ಯೆ ಹೆಚ್ಚುತ್ತಿರುವುದು ಇನ್ಫೊಸಿಸ್‌ ಪಾಲಿಗೆ ಕಳವಳಕಾರಿ ಸಂಗತಿಯಾಗಿದೆ. ಈ ಅವಧಿಯಲ್ಲಿ ಈ ಸಂಖ್ಯೆ ಶೇ 20.6ರಷ್ಟಾಗಿದೆ. ಎರಡರಿಂದ ನಾಲ್ಕು ವರ್ಷಗಳ ಅನುಭವ ಹೊಂದಿದವರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆ ತ್ಯಜಿಸುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ಅವಧಿಯಲ್ಲಿ ಎಚ್‌ಸಿಎಲ್‌ ಟೆಕ್ನಾಲಜೀಸ್‌, 4,040 ತಂತ್ರಜ್ಞರನ್ನು ಹೊಸದಾಗಿ ನೇಮಿಸಿಕೊಂಡಿದೆ. ವಿಪ್ರೊ ಸಾಧಾರಣ ಎನ್ನಬಹುದಾದ 832 ಜನರಿಗೆ ಮಾತ್ರ ಉದ್ಯೋಗ ಅವಕಾಶ ಕಲ್ಪಿಸಿದೆ. ವರ್ಷದ ಹಿಂದೆ ಈ ಸಂಖ್ಯೆ 1,309 ಇತ್ತು.

***

ಸಂಸ್ಥೆ; ತಂತ್ರಜ್ಞರ ಸಂಖ್ಯೆ

ಟಿಸಿಎಸ್‌;4,00,875

ಇನ್ಫೊಸಿಸ್‌;2.09.905

ವಿ‍‍ಪ್ರೊ; 1,64,659

ಎಚ್‌ಸಿಎಲ್‌ ಟೆಕ್ನಾಲಜೀಸ್‌; 1,24,121

ಟೆಕ್‌ ಮಹೀಂದ್ರಾ; 1,13.552

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT