ಶುಕ್ರವಾರ, ನವೆಂಬರ್ 27, 2020
18 °C

ಪ್ರವಾಹ: 344 ಕುಟುಂಬಗಳಿಗೆ ತಲಾ ₹ 25 ಸಾವಿರ ಪರಿಹಾರ ಚೆಕ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ‌ ಸೃಷ್ಟಿಯಾದ ಪ್ರವಾಹದಿಂದ ಸಮಸ್ಯೆ ಎದುರಿಸಿದ ಹೊಸಕೆರೆಹಳ್ಳಿ ವಾರ್ಡ್‌ನ ದತ್ತಾತ್ರೇಯ ನಗರ ವ್ಯಾಪ್ತಿಯ ಕುಟುಂಬಗಳಿಗೆ ಕಂದಾಯ ಸಚಿವ ಆರ್.ಅಶೋಕ ಹಾಗೂ ಪಾಲಿಕೆ ಆಡಳಿತಾಧಿಕಾರಿ ಗೌರವ ಗುಪ್ತ ಅವರು ತಲಾ ₹25 ಸಾವಿರ ಪರಿಹಾರ ಮೊತ್ತದ ಚೆಕ್‌ಗಳನ್ನು ಭಾನುವಾರ ವಿತರಿಸಿದರು.

ಧಾರಾಕಾರ ಮಳೆಯಿಂದ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿತ್ತು. ಅಂತಹ 344 ಮನೆಗಳನ್ನು ಗುರುತಿಸಿ ಪರಿಹಾರ ವಿತರಣೆ ಮಾಡಲಾಯಿತು. ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಅನಾಹುತ ಪ್ರದೇಶಗಳಿಗೆ ₹ 3 ಸಾವಿರ ಮಾತ್ರ ಕೊಡಲು ಅನುಮತಿಯಿದೆ. ಆದರೆ, ಇಲ್ಲಿ ಹೆಚ್ಚು ನಷ್ಟ ಉಂಟಾಗಿರುವ ಪರಿಣಾಮ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ  ನಿರ್ದೇಶನ ದಂತೆ  ಕುಟುಂಬಕ್ಕೆ ತಲಾ ₹ 25 ಸಾವಿರ ವಿತರಣೆ ಮಾಡಲಾಗುತ್ತಿದೆ ಎಂದು ಆರ್.ಅಶೋಕ ತಿಳಿಸಿದರು.

ಮೂರು ದಿನಗಳಿಂದ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಇಂದು ದತ್ತಾತ್ರೇಯ ಬಡಾವಣೆಯಲ್ಲಿ 304 ಕುಟುಂಬಗಳಿಗೆ ಹಾಗೂ ಕುಮಾರಸ್ವಾಮಿ ಬಡಾವಣೆಯ 40 ಕುಟುಂಬಗಳಿಗೆ  ಪರಿಹಾರ ವಿತರಣೆ ಮಾಡಲಾಗಿದೆ.

ನಗರದ ಇತರೆಡೆಯಲ್ಲಿ ಮಳೆ ಬಿದ್ದು ಅನಾಹುತ ಆಗಿರುವ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲೂ ಸಹ ಚೆಕ್ ವಿತರಣೆ ಮಾಡಲಾಗುತ್ತದೆ. ಸಣ್ಣ ಪ್ರಮಾಣದ ಹಾನಿಯಾದವರಿಗೆ ರೂ. 10ಸಾವಿರ ಪರಿಹಾರ ನೀಡಲು ನಿರ್ಧರಿಸಲಾಗಿದೆ‌. ಅಧಿಕಾರಿಗಳಿಗೆ ಪಟ್ಟಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಮಳೆ ಅನಾಹುತ ಆದ ಪ್ರದೇಶದ ಪ್ರತಿ ರಸ್ತೆಯಲ್ಲೂ ಮನೆಗಳ ಸಮೀಕ್ಷೆ ಮಾಡಿ ಪಟ್ಟಿ ಸಿದ್ದಪಡಿಸಲಾಗಿದೆ‌. ಯಾವ ಮನೆಗೆ ನೀರು ನುಗ್ಗಿದೆ, ಅಂತಹ ಮನೆಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ‌. ಮೊದಲನೇ ಮತ್ತು ಎರಡನೇ ಮಹಡಿಯಲ್ಲಿ ವಾಸವಿರುವವರಿಗೆ ಪರಿಹಾರ ನೀಡಲು ಬರುವುದಿಲ್ಲ ಎಂದರು.

ಒಟ್ಟಾರೆ ರೂ 86 ಲಕ್ಷ ಮೊತ್ತದ ಚೆಕ್ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.

'ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಕಳೆದ 9 ತಿಂಗಳಿಂದ ಒತ್ತುವರಿ ಆಗಿರುವ ಪ್ರದೇಶವನ್ನು ಶೀಘ್ರ ಗುರುತಿಸಿ ಅಂತಹ ಸ್ಥಳಗಳಲ್ಲಿ ತೆರವುಗೊಳಿಸುವ ಕಾರ್ಯ ಮಾಡಲಾಗುತ್ತದೆ. ಒತ್ತುವರಿ ಆಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೆ ತೆರವು ಕಾರ್ಯಾಚರಣೆ ನಡೆಸಲು ಸಹಕಾರಿಯಾಗಲಿದೆ. ಇದರಿಂದ ನಗರದಲ್ಲಿ ಪ್ರವಾಹ ತಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ಸ್ಥಳ ಪರಿಶೀಲನೆ: ಹೊಸಕೆರೆಹಳ್ಳಿ ವಾರ್ಡ್‌ನ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಪ್ರವಾಹ‌ ಉಂಟಾದ ಪ್ರದೇಶದ ರಾಜಕಾಲುವೆಗಳನ್ನು ಪಾಲಿಕೆ ಆಡಳಿತಾಧಿಕಾರಿ ಗೌರವ ಗುಪ್ತ ಅವರು ಭಾನುವಾರ ಪರಿಶೀಲನೆ ನಡೆಸಿದರು. ಮಳೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರ ಜೊತೆ ಚರ್ಚಿಸಿದರು.

ದತ್ತಾತ್ರೇಯ ಬಡಾವಣೆಯ ಪ್ರದೇಶದಲ್ಲಿರುವ ರಾಜಕಾಲುವೆಯಲ್ಲಿ ಪ್ರಮುಖವಾಗಿ ಒಂದು ಕಡೆ ರಾಜಕಾಲುವೆ ತೀರಾ ಕಿರಿದಾಗಿದೆ. ಇಲ್ಲಿ ರಾಜಕಾಲುವೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹದಿಂದ ತಡೆಗೋಡೆ ಕುಸಿದು ಬಿದ್ದಿರುವ ಕಡೆ ಮರಳು ಮೂಟೆಗಳನ್ನು ಹಾಕಲಾಗಿದೆ. ಇಲ್ಲಿ, ತ್ವರಿತವಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ಸೂಚನೆ ನೀಡಿದರು.

ರಾಜಕಾಲುವೆಗೆ ಹೊಂದಿಕೊಂಡಿರುವ ಮನೆಗಳ ಅಡಿಪಾಯ ಮತ್ತು ಕಟ್ಟಡದ ವಾಸ ಯೋಗ್ಯದ ಸ್ಥಿತಿಯನ್ನು ಖುದ್ದಾಗಿ ಪರಿಶೀಲನೆ ನಡೆಸಿ ಕ್ರಮವಹಿಸುವಂತೆ ಬೃಹತ್ ನೀರುಗಾಲುವೆ ವಿಭಾಗದ  ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು