ಭಾನುವಾರ, ಮಾರ್ಚ್ 29, 2020
19 °C

ಮಹಿಳೆಗೆ ಪುರುಷನೂ ಬಲ: ಸಚಿವೆ ಶಶಿಕಲಾ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವಂತೆ, ಯಶಸ್ವಿ ಮಹಿಳೆಯ ಜೊತೆಗೆ ಪುರುಷನೂ ಇರುತ್ತಾನೆ. ಮಹಿಳೆ ಮತ್ತು ಪುರುಷ ಒಂದೇ ನಾಣ್ಯದ ಎರಡು ಮುಖಗಳು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಸಾಧಕಿಯರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆ ಎಲ್ಲ ರಂಗಗಳಲ್ಲೂ ಅವಕಾಶ ವಂಚಿತಳಾಗಿದ್ದಳು. ಮಗು ಜನಿಸಿದ ಕೂಡಲೇ ಹೆಣ್ಣೋ ಅಥವಾ ಗಂಡೋ ಎಂಬ ಪ್ರಶ್ನೆ ಕೇಳುತ್ತಾರೆ. ಹೆಣ್ಣೆಂದರೆ ಹೊರೆಯಾಗಿ ಸ್ವೀಕರಿಸುವ ಮನೋಭಾವ ತೊಲಗಬೇಕು’ ಎಂದರು.

ಶಾಸಕ ಉದಯ ಬಿ.ಗರುಡಾಚಾರ್, ‘ಪುರುಷರ ಸಾಧನೆಗೆ ಮಹಿಳೆಯ ಸಹಕಾರವೇ ಕಾರಣ. ಈ ಹಿಂದೆ ಇಂದಿರಾ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದರು. ಮುಂದಿನ ದಿನಗಳಲ್ಲಿ ಮತ್ತೋರ್ವ ಮಹಿಳೆ ಪ್ರಧಾನಿಯಾಗಬೇಕು’ ಎಂದು ಅಭಿಪ್ರಾಯ ತಿಳಿಸಿದರು.

ಸ್ತ್ರೀಶಕ್ತಿ ಗುಂಪುಗಳ ಯಶಸ್ವಿ ಕಥೆಗಳ ಅಂತರಾಳ–15 ಸಂಚಿಕೆ ಹಾಗೂ ಮಕ್ಕಳ ಕಲ್ಯಾಣ ಯೋಜನೆಗಳ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ಪ್ರದಾನ
ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಆರು ಸಂಘ ಸಂಸ್ಥೆಗಳೂ ಸೇರಿ ವ್ಯಕ್ತಿ, ಕಲೆ, ಕ್ರೀಡೆ, ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ನೀಡಲಾಯಿತು.

ಬೆಂಗಳೂರಿನ ರೇಖಾ ರಾಜೇಂದ್ರಕುಮಾರ್ ಹಾಗೂ ವಂದನಾ ಶಾಸ್ತ್ರಿ, ಹರಿಣಿ ಸದಾಶಿವ (ದಕ್ಷಿಣ ಕನ್ನಡ), ಸಾವಿತ್ರಿ ಗಣೇಶ್ (ಉಡುಪಿ), ರತ್ನಾ ಹಾಗೂ ಎಸ್.ದೀಪಾಲಿ (ಧಾರವಾಡ), ರಾಜೇಶ್ವರಿ (ಹಾವೇರಿ), ಕೆ.ಪಿ.ಸವಿತಾ (ಬೆಂಗಳೂರು), ದಾಕ್ಷಾಯಿನಿ (ಹಾಸನ), ಕಸ್ತೂರಿ
(ದಕ್ಷಿಣ ಕನ್ನಡ), ಸಂಗೀತಾ ವಿನೋದ್ (ಧಾರವಾಡ), ಬಿ.ಎ.ಅಭಿನೇತ್ರಿ (ಬೆಂಗಳೂರು ಗ್ರಾಮಾಂತರ), ಎ.ಸರಸಮ್ಮ (ಚಿಕ್ಕಬಳ್ಳಾಪುರ), ಗುರುದೇವಿ (ಬೆಳಗಾವಿ), ಸರಸ್ವತಿ ಚಿಮ್ಮಲಗಿ (ವಿಜಯಪುರ), ಎ.ಎಸ್‌.ನಾಗರತ್ನಮ್ಮ (ಬೆಂಗಳೂರು), ವಿದ್ಯಾವತಿ (ಬೀದರ್), ಎಸ್‌.ಸುವರ್ಣಾ (ಬೆಳಗಾವಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು