ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಪಟಾಕಿಯಿಂದಲೂ ಕಣ್ಣಿಗೆ ಹಾನಿ ಸಾಧ್ಯತೆ: 24 ಗಂಟೆ ಸೇವೆಗೆ ಮಿಂಟೊ ಸಜ್ಜು

ಮುನ್ನೆಚ್ಚರಿಕೆ ವಹಿಸಲು ವೈದ್ಯರು ಸೂಚನೆ
Last Updated 13 ನವೆಂಬರ್ 2020, 22:08 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸಿದಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ನಗರದ ಮಿಂಟೊ ಕಣ್ಣಿನ ಆಸ್ಪತ್ರೆಯು ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ದಿನಗಳಲ್ಲಿ 24x7 ಸೇವೆ ನೀಡಲು ಮುಂದಾಗಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಮಾತನಾಡಿ, ‘ಹಸಿರು ಪಟಾಕಿಗಳಲ್ಲಿಯೂ ರಾಸಾಯನಿಕಗಳು ಇರುತ್ತವೆ. ಹಾಗಾಗಿ ಇದರಿಂದಲೂ ಕಣ್ಣಿಗೆ ಅಪಾಯವಿದೆ. ಪಟಾಕಿಯ ಕಿಡಿಗಳು ಕಣ್ಣಿನ ಮೇಲೆ ಬಿದ್ದಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದೀಪಾವಳಿಯ ಸಂರ್ಭದಲ್ಲಿ ಬೆಳಕಿನಿಂದ ಕತ್ತಲೆಗೆ ಹೋಗಬಾರದು. ಎಲ್ಲ ರೀತಿಯ ಪಟಾಕಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡಬೇಕು ಎನ್ನುವುದು ನಮ್ಮ ಸಲಹೆ. ಆದರೆ, ಆ ಉದ್ಯಮವನ್ನು ನಂಬಿಕೊಂಡವರ ಬಗ್ಗೆ ಕೂಡ ಗಮನ ಹರಿಸಬೇಕಲ್ಲ’ ಎಂದರು.

‘ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ ಶೇ 50 ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಹಾನಿ ಮಾಡುವ ಬೇರಿಯಂ ಮತ್ತು ಲೀಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾದರೂ, ಸ್ಫೋಟ ಮತ್ತು ಶಬ್ಧದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ. ಆದ್ದರಿಂದ ಹಸಿರು ಪಟಾಕಿಯಿಂದ ಯಾವುದೇ ತರಹದ ಹಾನಿಯಾಗುವುದಿಲ್ಲ ಎಂಬ ತಪ್ಪುಕಲ್ಪನೆಯಿಂದ ಹೊರಬರಬೇಕು. ಪಟಾಕಿ ಸಿಡಿಸುವಾಗ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

ತುರ್ತು ಚಿಕಿತ್ಸೆ ಅಗತ್ಯ: ‘ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳ
ಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು. ಪಟಾಕಿ ಹೊಡೆದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಅರಿವಿಲ್ಲದೆಯೇ ಸುಟ್ಟ ಪಟಾಕಿಗಳ ಬಿಸಿ ತುಂಡುಗಳನ್ನು ಮೆಟ್ಟುವುದು ತಪ್ಪಲಿದೆ’ ಎಂದು ತಿಳಿಸಿದರು.

‘ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಾದ ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿಯಿದ್ದು, ಅಗತ್ಯ ಔಷಧ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಕೋವಿಡ್ ಕಾರಣ ಗಾಯಾಳುಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಸೋಂಕು ದೃಢಪಟ್ಟರೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ಗೆ ವರ್ಗಾಯಿಸಿ, ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕಳೆದ ವರ್ಷ ಪಟಾಕಿಯಿಂದ ಕಣ್ಣಿಗೆ ಹಾನಿಮಾಡಿಕೊಂಡ 46 ಮಂದಿಗೆ ಚಿಕಿತ್ಸೆ ನೀಡಲಾಗಿತ್ತು. ಅವರಲ್ಲಿ ಮೂವರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದರು. ಗಾಯಾಳುಗಳಲ್ಲಿ ಶೇ 40 ರಷ್ಟು ಮಂದಿ 14 ವರ್ಷದೊಳಗಿನ ಮಕ್ಕಳಿರುತ್ತಾರೆ’ ಎಂದರು.

ಸಹಾಯವಾಣಿ: 9480832430

*ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್ಐ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ

*ಪಟಾಕಿಗಳ ಮೇಲಿರುವ ಎಚ್ಚರಿಕೆ, ಸೂಚನೆ ಅನುಸರಿಸಿ

*ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ

*ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ

*ಮೈದಾನ, ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿ

*ಬೆಂಕಿ ಹಾಗೂ ತಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ

*ಪಟಾಕಿ ಸುಡುವುದಕ್ಕೆ ಗಾಜಿನ ಬಾಟಲಿಗಳನ್ನು ಬಳಸಬೇಡಿ. ಇದರಿಂದ ಸಿಡಿಯುವ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು

*ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ‌

*ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ

*ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ

*ಕೈಯಲ್ಲೇ ಪಟಾಕಿ ಸಿಡಿಸುವ ಸಾಹಸ ಬೇಡ

*ಅರೆಬರೆ ಸುಟ್ಟ ಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT