ಶನಿವಾರ, ಅಕ್ಟೋಬರ್ 24, 2020
18 °C

ಸಚಿವ, ಶಾಸಕರಿಗೆ ಕೋವಿಡ್‌: ಪರೀಕ್ಷೆ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕಾಂಗ್ರೆಸ್‌ ಶಾಸಕರಾದ ಎಚ್‌.ಕೆ. ಪಾಟೀಲ ಮತ್ತು ದಿನೇಶ್‌ ಗುಂಡೂರಾವ್‌ ಅವರಿಗೆ ಕೋವಿಡ್‌ ತಗುಲಿದೆ. ಇದರಿಂದಾಗಿ ಅಧಿವೇಶನದಲ್ಲಿ ಭಾಗಿಯಾಗಿದ್ದ ಸಚಿವರು, ಶಾಸಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಂಕು ಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವ ಅನಿವಾರ್ಯಕ್ಕೆ ತುತ್ತಾಗಿದ್ದಾರೆ.

ಮಾಧುಸ್ವಾಮಿ ಅವರು ವಿಧಾನಸಭೆ ಮತ್ತು ವಿಧಾನ ಪರಿಷತ್‌ ಕಲಾಪಗಳಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. ಬಹುತೇಕ ಮಸೂದೆಗಳ ಮಂಡನೆ, ಚರ್ಚೆ, ಅಂಗೀಕಾರದ ವೇಳೆ ಹಾಜರಿದ್ದರು. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆಯ ಸಮಯದಲ್ಲಿ ಪ್ರತಿಪಕ್ಷಗಳ ಸದಸ್ಯರಿಗೆ ಉತ್ತರಿಸಲು ಹಾಜರಿದ್ದರು. ಇದೇ ಸಂದರ್ಭದಲ್ಲಿ ಅವರು ಎರಡೂ ಸದನಗಳ ಶಾಸಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಸಮಾಲೋಚನೆಯನ್ನೂ ನಡೆಸಿದ್ದರು.

ಎಚ್‌.ಕೆ. ಪಾಟೀಲ ಮತ್ತು ದಿನೇಶ್‌ ಗುಂಡೂರಾವ್‌ ಕೂಡ ಅಧಿವೇಶನದ ಸಂದರ್ಭದಲ್ಲಿ ಶಾಸಕರು, ಸಚಿವರು, ಭೇಟಿ ಮಾಡಿದ್ದರು. ವಿಧಾನ ಮಂಡಲ ಅಧಿವೇಶನ ಮುಕ್ತಾಯಗೊಂಡ ಎರಡು ದಿನಗಳೊಳಗೆ ಈ ಮೂವರಲ್ಲೂ ಸೋಂಕು ಪತ್ತೆಯಾಗಿದೆ.

ಮುನ್ನೆಚ್ಚರಿಕೆ ಇದ್ದರೂ ಭಯ: ಅಧಿವೇಶನದ ವೇಳೆ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಶಾಸಕರ ಆಸನಗಳ ನಡುವೆ ಪಾರದರ್ಶಕ ಗಾಜನ್ನು ಅಳವಡಿಸಲಾಗಿತ್ತು. ಆದರೂ, ಕೆಲವೊಮ್ಮ ಶಾಸಕರು, ಸಚಿವರು ಮಾಸ್ಕ್‌ ತೆಗೆದು ಮಾತನಾಡುತ್ತಿದ್ದರು. ಊಟ, ಉಪಾಹಾರ ಸೇವನೆ ವೇಳೆ ಒಟ್ಟಿಗೆ ಕುಳಿತಿರುತ್ತಿದ್ದರು.

ಅಧಿವೇಶನಕ್ಕೂ ಮುನ್ನ ಎಲ್ಲರಿಗೂ ಕೋವಿಡ್‌ ಪತ್ತೆ ಪರೀಕ್ಷೆ ನಡೆಸಲಾಗಿತ್ತು. ಸೋಂಕು ಪತ್ತೆಯಾಗಿರುವ ಸಚಿವರು ಮತ್ತು ಶಾಸಕರ ಸಂಪರ್ಕಕ್ಕೆ ಬಂದಿದ್ದವರು ಈಗ ತಾವೂ ಪರೀಕ್ಷೆಗೆ ಒಳಗಾಗಲೇಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು