ಬುಧವಾರ, ಏಪ್ರಿಲ್ 14, 2021
28 °C
₹12 ಕೋಟಿ ವೆಚ್ಚದ ಕಾಮಗಾರಿ ಬಹುತೇಕ ಮುಗಿಯುವ ಹಂತ

ಶಾಸಕ ಕೃಷ್ಣಬೈರೇಗೌಡ ರೈಲ್ವೆ ಕೆಳಸೇತುವೆ ಕಾಮಗಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಶ್ರೀರಾಮಪುರ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಶಾಸಕ ಕೃಷ್ಣಬೈರೇಗೌಡ ರೈಲ್ವೆ ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ’3–4 ವರ್ಷಗಳಿಂದ ಈ ಭಾಗದಲ್ಲಿ ಜನಸಂಖ್ಯೆ ಜಾಸ್ತಿಯಾಗಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ರೈಲ್ವೆಗೇಟ್ ಹಾಕಿದಾಗ ವಾಹನ ಸವಾರರು ತೊಂದರೆ ಅನುಭವಿಸಬೇಕಾಗಿತ್ತು. ಐದು ವರ್ಷಗಳ ಹಿಂದೆಯೇ ಈ ಸಮಸ್ಯೆ ಮನಗಂಡು ಇಲ್ಲಿ ಕೆಳಸೇತುವೆ ನಿರ್ಮಾಣ ಮಾಡಬೇಕೆಂದು ರೈಲ್ವೆಯವರಿಗೆ ಮನವಿ ಮಾಡಲಾಗಿತ್ತು. ರಾಜ್ಯ ಸರ್ಕಾರದಿಂದ ₹9 ಕೋಟಿ ಮತ್ತು ರೈಲ್ವೆಇಲಾಖೆಯಿಂದ ₹3 ಕೋಟಿ ಸೇರಿದಂತೆ ಒಟ್ಟು ₹12 ಕೋಟಿ ವೆಚ್ಛದಲ್ಲಿ ಕೈಗೊಂಡಿದ್ದ ಕಾಮಗಾರಿಯು ಬಹುತೇಕ ಮುಗಿಯುವ ಹಂತದಲ್ಲಿದೆ‘ ಎಂದು ತಿಳಿಸಿದರು.

’ಒಂದು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸೇವೆಗೆ ಸಮರ್ಪಣೆ ಮಾಡಬೇಕೆಂಬ ಉದ್ದೇಶವಿದೆ. ಈ ಮಧ್ಯೆ, ವಾಹನಸಂಚಾರಕ್ಕೆ ಸಂಬಂಧಿಸಿದಂತೆ ಕೆಲವು ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸಲು ಮತ್ತು ಇತರೆಡೆಗಳಲ್ಲಿ ಮಳೆಬಂದಾಗ ಕೆಳಸೇತುವೆಯಲ್ಲಿ ನೀರುನಿಂತು ವಾಹನಸವಾರರು ತೊಂದರೆ ಅನುಭವಿಸುತ್ತಿದ್ದು, ಇಲ್ಲಿ ಅಂತಹ ಸಮಸ್ಯೆ ಮರುಕಳಿಸದಂತೆ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಲು ಸ್ಥಳವೀಕ್ಷಣೆ ಮಾಡಲಾಗಿದೆ‘ ಎಂದರು.

’ಕೊಡಿಗೇಹಳ್ಳಿಯಲ್ಲಿ ನಿರ್ಮಿಸಿರುವ ರೈಲ್ವೆ ಕೆಳಸೇತುವೆಯು ತೊಂದರೆಗಳಿಂದ ಕೂಡಿದ್ದು, ಕಾಮಗಾರಿ ಕಳಪೆಯಾಗಿದೆ. ಅದಕ್ಕೆ ಹೋಲಿಸಿದರೆ ರೈಲ್ವೆ ಇಲಾಖೆಯವರು ಇಲ್ಲಿ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ. ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದ್ದು, ಅದನ್ನು ಸರಿಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ‘ ಎಂದರು.

ರೈಲ್ವೆ ಕಾಮಗಾರಿ ನಿರ್ಮಾಣ ಘಟಕದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ವಳುತಿ, ಬಿಬಿಎಂಪಿ ರಸ್ತೆ, ಮೂಲಸೌಕರ್ಯ ಯಲಹಂಕ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೆಂಪೇಗೌಡ, ಕಾಂಗ್ರೆಸ್ ಮುಖಂಡರಾದ ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ, ಎಚ್.ಎ.ಶಿವಕುಮಾರ್, ಪಳನಿ ವೆಂಕಟೇಶ್, ಟಿ.ವೆಂಕಟರಾಮರೆಡ್ಡಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು