ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಗಣೇಶ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

Last Updated 16 ಮಾರ್ಚ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಬಳ್ಳಾರಿ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್‌.ಗಣೇಶ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಲು ನಮ್ಮನ್ನೂ ಸೇರ್ಪಡೆ ಮಾಡಿಕೊಳ್ಳಬೇಕು’ ಎಂಬ ಮಧ್ಯಂತರ ಅರ್ಜಿ ಮೇಲಿನ ಆದೇಶವನ್ನು ಜನಪ್ರತಿನಿಧಿಗಳ ಕೋರ್ಟ್‌ ಕಾಯ್ದಿರಿಸಿದೆ.

ದೂರುದಾರ ಆನಂದ ಸಿಂಗ್‌ ಪರ ವಾದಿಸಲು ಪ್ರಾಸಿಕ್ಯೂಷನ್‌ನಿಂದ ಹೊರತಾದ ಖಾಸಗಿ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿ ಮೇಲಿನ ವಾದ–ಪ್ರತಿವಾದವನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯ ಶನಿವಾರ ಮುಕ್ತಾಯಗೊಳಿಸಿತು.

ಆನಂದ ಸಿಂಗ್‌ ಪರ ವಾದ ಮಂಡಿಸಲು ಅವಕಾಶ ಕೋರಿದ್ದ ವಕೀಲರು, ‘ಈ ಕೋರ್ಟ್‌ ಅನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಎಂತಲೂ ತಿಳಿಯಬಹುದು. ಆದ್ದರಿಂದ ಈ ಪ್ರಕರಣದ ಕಲಾಪದಲ್ಲಿ ಸಂತ್ರಸ್ತರ ಪರವಾಗಿ ನೇರವಾಗಿ ಭಾಗವಹಿಸಲು ನಮಗೆ ಹಕ್ಕಿದೆ. ಆದ್ದರಿಂದ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 302ರ ಅಡಿಯಲ್ಲಿ ನಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಡಬೇಕು’ ಎಂದು ಕೋರಿದರು.

ಇದಕ್ಕೆ ಅರ್ಜಿದಾರ ಜೆ.ಎನ್‌.ಗಣೇಶ ಪರ ವಾದ ಮಂಡಿಸಿದ ಸಿ.ಎಚ್‌. ಹನುಮಂತರಾಯ ಅವರು, ‘ಇದು ಒಂದು ವಿಶೇಷ ನಿಯೋಜಿತ ನ್ಯಾಯಾಲಯ. ಇದು ಸೆಷನ್ಸ್‌ ಕೋರ್ಟ್‌ಗೆ ಸಮಾನವಾದದ್ದು. ಆದರೆ, ಸಾಮಾನ್ಯ ಸೆಷನ್ಸ್‌ ಕೋರ್ಟ್‌ಗೆ ಇರುವಂತಹ ಅಧಿಕಾರ ಮತ್ತು ಕಾನೂನು ವ್ಯಾಪ್ತಿಗಿಂತಲೂ ಹೆಚ್ಚಿನದು’ ಎಂದರು.

‘ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 301ರ ಪ್ರಕಾರ ಸೆಷನ್ಸ್‌ ಕೋರ್ಟ್‌ನಲ್ಲಿ ಸಂತ್ರಸ್ತರ ಪರ ವಾದ ಮಂಡಿಸಲು ಅವಕಾಶ ಇದೆ. ಈ ಪ್ರಕಾರ ಕಲಾಪದಲ್ಲಿ ಭಾಗವಹಿಸುವುದಕ್ಕೆ ಯಾರಿಗೆ ಅವಕಾಶ ಇದೆಯೋ ಅಂತಹವರು ನ್ಯಾಯದಾನ ಪ್ರಕ್ರಿಯೆಯಲ್ಲಿ ಕೋರ್ಟ್‌ ಅನ್ನು ನೇರವಾಗಿ ಸಂಬೋಧಿಸುವ ಹಕ್ಕಿಲ್ಲ. ಅವರು ಕೇವಲ ಪ್ರಾಸಿಕ್ಯೂಟರ್‌ ಪಕ್ಕ ಕೂತು ಸಹಾಯ ಮಾಡಬಹುದು’ ಎಂದು ವಿವರಿಸಿದರು.

‘ಜಾಮೀನು ಅರ್ಜಿ ಇತ್ಯರ್ಥ ಮಾಡುವುದು ವಿಚಾರಣೆಯಲ್ಲ. ಕೇವಲ ಪ್ರಕ್ರಿಯೆ. ಈ ಮಧ್ಯಂತರ ಅರ್ಜಿ ವಿಚಾರಣೆಗೆ ಯೋಗ್ಯವಾದುದಲ್ಲ. ಆದ್ದರಿಂದ ಇದನ್ನು ವಜಾ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ತೀರ್ಪುಗಳ ಮುಖಾಂತರ ಉಲ್ಲೇಖಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಆದೇಶ ಕಾಯ್ದಿರಿಸಿ ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿದರು.

ಬಿಡದಿ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಆನಂದ ಸಿಂಗ್‌ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು 2019ರ ಫೆಬ್ರುವರಿ 20ರಂದು ಗಣೇಶ ಅವರನ್ನು ಬಂಧಿಸಿದ್ದರು. ನಂತರ ರಾಮನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 21ರಂದು ಹಾಜರುಪಡಿಸಿದರು. ನ್ಯಾಯಾಲಯ ಅಂದೇ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಂದಿನಿಂದಲೂ ಗಣೇಶ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT