ಗುರುವಾರ , ಜೂನ್ 24, 2021
29 °C

ಶಿಕ್ಷಕರಿಗೆ ಪ್ಯಾಕೇಜ್ ಘೋಷಿಸಲು ಬಿಜೆಪಿ ಸದಸ್ಯರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೂ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಒತ್ತಾಯಿಸಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯರಾದ ಎನ್. ರವಿಕುಮಾರ್‌, ಪುಟ್ಟಣ್ಣ ಮತ್ತು ಅರುಣ ಶಹಾಪುರ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ಶಿಕ್ಷಕರು ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಿದ್ದಾರೆ. ಹಲವು ಅತಿಥಿ ಉಪನ್ಯಾಸಕರು ಕೂಲಿ ಕೆಲಸ, ಹೂವು ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದಾರೆ. ಬಹಳಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ವೇತನ ನೀಡಲು ಹಣವಿಲ್ಲದ ಸ್ಥಿತಿಯಲ್ಲಿವೆ. ಕೊರೊನಾ ನಿಯಂತ್ರಿಸುವ ಸೇವೆಯಲ್ಲಿ ಅನೇಕ ಶಿಕ್ಷಕರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ’ ಎಂದು ಎನ್. ರವಿಕುಮಾರ್‌ ಹೇಳಿದ್ದಾರೆ.

‘ಶಿಕ್ಷಕರು ಮಾತ್ರವಲ್ಲದೆ, ಮೀನುಗಾರರು ಮತ್ತು ನೇಕಾರರ ಸಮುದಾಯಕ್ಕೂ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು‘ ಎಂದು ಅವರು ಒತ್ತಾಯಿಸಿದ್ದಾರೆ.

’ರಾಜ್ಯದ ಶಿಕ್ಷಕರು, ಹೊರಗುತ್ತಿಗೆ ಉಪನ್ಯಾಸಕರು, ಶಿಕ್ಷಕರು, ಬಿಬಿಎಂಪಿ ಗುತ್ತಿಗೆ ಶಿಕ್ಷಕರು ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯನ್ನು ಕೊರೊನಾ ಸೇನಾನಿಗಳು ಎಂದು ಪರಿಗಣಿಸಿ ಆರ್ಥಿಕ ನೆರವು ಘೋಷಿಸಬೇಕು ಮತ್ತು ಆರೋಗ್ಯ ಭದ್ರತೆ ನೀಡಬೇಕು‘ ಎಂದು ಪುಟ್ಟಣ್ಣ ಒತ್ತಾಯಿಸಿದ್ದಾರೆ.  

’ಕೋವಿಡ್‌ನಿಂದ ಅತಿ ಹೆಚ್ಚು ಸಮಸ್ಯೆಗೆ ಒಳಗಾಗಿರುವ ಖಾಸಗಿ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡ್ಡಿರಹಿತ ಸಾಲವನ್ನು ಒದಗಿಸಿ, ಕಂತುಗಳಲ್ಲಿ ಮರುಪಾವತಿ ಮಾಡಲು ಅವಕಾಶ ಮಾಡಿಕೊಡಬೇಕು‘ ಎಂದು ಅರುಣ ಶಹಾಪುರ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು